ADVERTISEMENT

ಸಂಕಷ್ಟ ಕಾಲದಲ್ಲೂ ಸರ್ಕಾರದ ಸಂಭ್ರಮಕ್ಕೆ ಕಬ್ಬು ಬೆಳಗಾರರ ಆಕ್ರೋಶ; ಅ.24ರಂದು ಧರಣಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2023, 13:07 IST
Last Updated 19 ಅಕ್ಟೋಬರ್ 2023, 13:07 IST
   

ಮೈಸೂರು: ‘ಸಂಕಷ್ಟದ ಕಾಲದಲ್ಲೂ ಮೋಜಿಗಾಗಿ ವಿದ್ಯುತ್ ದೀಪಾಲಂಕಾರ ಮಾಡಿ ಸಂಭ್ರಮಿಸುತ್ತಿರುವ ಸರ್ಕಾರದ ವಿರುದ್ಧ ವಿಜಯದಶಮಿಯ ದಿನವಾದ ಅ.24ರಂದು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಹಳ್ಳಿ ಹಳ್ಳಿಗಳಲ್ಲಿ ರಸ್ತೆ ಬಂದ್ ಚಳವಳಿ ನಡೆಸಲಾಗುವುದು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.

ಇಲ್ಲಿನ ಕುವೆಂಪು ಉದ್ಯಾನದಲ್ಲಿ ಗುರುವಾರ ನಡೆದ ರೈತ ಮುಖಂಡರ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ದೇಶಕ್ಕೆ ಆಹಾರ ನೀಡುವ ರೈತರನ್ನು ಕತ್ತಲಲ್ಲಿಟ್ಟು, ಜನಪ್ರತಿನಿಧಿಗಳು ಮೋಜಿನಲ್ಲಿ ತೊಡಗಿದ್ದಾರೆ. ಬರಗಾಲದಿಂದ ತತ್ತರಿಸುತ್ತಿರುವ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಕೇವಲ 5 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಕೈಗಾರಿಕೆಗಳಿಗೆ ಸಂಪೂರ್ಣ ವಿದ್ಯುತ್ ಕೊಡಲಾಗುತ್ತಿದೆ. ಬರಗಾಲವಿದ್ದರೂ ಕಾವೇರಿ ಅಚ್ಚುಕಟ್ಟು ಭಾಗದ ರೈತರಿಗೆ ಬೆಳೆ ಬೆಳೆಯಲು ನೀರು ಬಿಡದೆ ತಮಿಳುನಾಡಿಗೆ ಹರಿಸಲಾಗುತ್ತಿದೆ. ಈ ಮೂಲಕ ಕೃಷಿಕರಿಗೆ ದ್ರೋಹ ಬಗೆಯಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕಬ್ಬಿಗೆ ಈಗ ನಿಗದಿಪಡಿಸಿರುವ ಎಫ್‌ಆರ್‌ಪಿಯು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದೆ. ಕೇವಲ ₹ 50ರಿಂದ ₹ 100 ಹೆಚ್ಚಿಸುವುರಿಂದ ಏನೂ ಪ್ರಯೋಜನವಾಗುವುದಿಲ್ಲ. ಟನ್ ಕಬ್ಬು ಉತ್ಪಾದನಾ ವೆಚ್ಚ ₹ 3,580 ಆಗುತ್ತದೆ. ಆದರೆ, ಕೇಂದ್ರ ಸರ್ಕಾರ ₹3,150 ನಿಗದಿಪಡಿಸಿದೆ. ಇದರಿಂದ ಕಬ್ಬು ಬೆಳೆಗಾರರಿಗೆ ನಷ್ಟವಾಗುತ್ತಿದೆ’ ಎಂದು ತಿಳಿಸಿದರು.

‘ಟನ್‌ ಕಬ್ಬಿಗೆ ಹೆಚ್ಚುವರಿ ದರ ₹ 150 ಕೂಡಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ರೈತರಿಗೆ ದ್ರೋಹ ಮಾಡುತ್ತಿದೆ. ಪ್ರಸಕ್ತ ಸಾಲಿನ ಕಬ್ಬಿನ ಹೆಚ್ಚುವರಿ ದರವನ್ನು ಇನ್ನೂ ನಿಗದಿಪಡಿಸಿಲ್ಲ. ಬರಗಾಲ ಘೋಷಣೆ ಮಾಡಿದ್ದು ಬಿಟ್ಟರೆ, ಪರಿಹಾರ ಕ್ರಮಗಳನ್ನೂ ಇಂದಿಗೂ ಕೈಗೊಂಡಿಲ್ಲ. ಇದರಿಂದಾಗಿ ನಾವು ಬೀದಿಗಿಳಿಯಲೇಬೇಕಾಗಿದೆ’ ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಹತ್ತಳ್ಳಿ ದೇವರಾಜ್, ಬರಡನಫುರ ನಾಗರಾಜ್, ಕಿರಗಸೂರು ಶಂಕರ, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕುರುಬೂರ್ ಸಿದ್ದೇಶ್, ವೆಂಕಟೇಶ್, ರಾಜಣ್ಣ, ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.