ADVERTISEMENT

ಐಎಫ್‌ಎಸ್ ಅಧಿಕಾರಿ ಮಣಿಕಂಠನ್ ಪ್ರತಿಮೆ ಅನಾವರಣ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 13:37 IST
Last Updated 3 ಮಾರ್ಚ್ 2025, 13:37 IST
ಎಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಳ್ಳೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಐಎಫ್ಎಸ್ ಅಧಿಕಾರಿ ಮಣಿಕಂಠನ್ ಅವರ ಪ್ರತಿಮೆಯನ್ನು ವಿಶ್ವ ವನ್ಯಜೀವಿ ದಿನದ ಅಂಗವಾಗಿ ಸೋಮವಾರ ಡಿಸಿಎಫ್ ಪಿ.ಎ.ಸೀಮಾ ಅನಾವರಣಗೊಳಿಸಿದರು.
ಎಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಳ್ಳೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಐಎಫ್ಎಸ್ ಅಧಿಕಾರಿ ಮಣಿಕಂಠನ್ ಅವರ ಪ್ರತಿಮೆಯನ್ನು ವಿಶ್ವ ವನ್ಯಜೀವಿ ದಿನದ ಅಂಗವಾಗಿ ಸೋಮವಾರ ಡಿಸಿಎಫ್ ಪಿ.ಎ.ಸೀಮಾ ಅನಾವರಣಗೊಳಿಸಿದರು.   

ಎಚ್.ಡಿ.ಕೋಟೆ: ‘ಕಾಡಿನ ಕುರಿತು ಅತ್ಯಂತ ಕಾಳಜಿ ಹೊಂದಿದ್ದರು. ನಿಷ್ಠಾವಂತರಾಗಿದ್ದ ಮಣಿಕಂಠನ್ ತಮ್ಮ ಪ್ರಾಣವನ್ನು ಅರಣ್ಯದ ಸೇವೆಗೆ ಮುಡಿಪಾಗಿ ಇಟ್ಟಿದ್ದರು’ ಎಂದು ಡಿಸಿಎಫ್ ಪಿ.ಎ.ಸೀಮಾ ತಿಳಿಸಿದರು.

ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಳ್ಳೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಐಎಫ್ಎಸ್ ಅಧಿಕಾರಿ ಮಣಿಕಂಠನ್ ಅವರ ಪ್ರತಿಮೆಯನ್ನು ವಿಶ್ವ ವನ್ಯಜೀವಿ ದಿನದ ಅಂಗವಾಗಿ ಸೋಮವಾರ ಅನಾವರಣಗೊಳಿಸಿ ಮಾತನಾಡಿದರು.

‘ಕಳೆದ ಏಳು ವರ್ಷದ ಹಿಂದೆ ತಾಲ್ಲೂಕಿನ ಬಳ್ಳೆ ಅರಣ್ಯ ವಲಯದಲ್ಲಿ ಕಾಡಿನ ಒಳಭಾಗದಲ್ಲಿ ಫೈರ್ ಲೈನ್ ಕಾಮಗಾರಿ ಪರಿಶೀಲಿಸುತ್ತಾ ಕರ್ತವ್ಯದಲ್ಲಿದ್ದಾಗ ಕಾಡಾನೆ ಏಕಾಏಕಿ ದಾಳಿ ನಡೆಸಿತ್ತು. ಇದರಿಂದಾಗಿ ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಮೃತಪಟ್ಟಿದ್ದರು’ ಎಂದರು.

ADVERTISEMENT

‘ಕಾಡಿನ ಒಳಭಾಗದಲ್ಲಿ ಸಣ್ಣದೊಂದು ಬೆಂಕಿ ಅವಘಡ ಸಂಭವಿಸಿದ್ದನ್ನು ಪರಿಗಣಿಸಿ ಸ್ಥಳಕ್ಕೆ ಭೇಟಿ ನೀಡಿ ಕರ್ತವ್ಯದಲ್ಲಿದ್ದಾಗ ಆನೆ ದಾಳಿ ನಡೆಸಿ ಅವಘಡ ನಡೆದಿದೆ’ ಎಂದರು.

‘ಇಂತಹ ಘಟನೆಗಳು ಮರುಕಳಿಸದಂತೆ ಅರಣ್ಯ ಇಲಾಖೆ ಅಧಿಕಾರಿಗಳೇ ಆಗಲಿ, ಸಿಬ್ಬಂದಿಗಳೇ ಆಗಲಿ ಕಾಡಿನ ಒಳಭಾಗದಲ್ಲಿ ಓಡಾಡುವಾಗ ತಮ್ಮ ರಕ್ಷಣೆ ಬಗ್ಗೆ ಗಮನ ಹರಿಸಬೇಕು. ಕೆಲಸ ಮಾಡುವಾಗ ನಮ್ಮನ್ನು ನಾವು ಕಾಪಾಡಿಕೊಂಡು ಕೆಲಸ ಮಾಡಬೇಕಾಗಿದೆ’ ಎಂದರು.

‘ಅಕ್ಕಪಕ್ಕದಲ್ಲಿ ಕಾಡುಪ್ರಾಣಿಗಳು ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಸರಿಯಾದ ರೀತಿಯಲ್ಲಿ ಗಮನಿಸಿ, ನಂತರವೇ ಕಾರ್ಯ ಪ್ರವೃತ್ತರಾಗಬೇಕು’ ಎಂದು ಸಲಹೆ ನೀಡಿದರು. ಮೃತ ಡಿಸಿಎಫ್ ಮಣಿಕಂಠನ್ ಗೌರವಾರ್ಥ ಮೌನ ಆಚರಿಸಲಾಯಿತು. ಎಸಿಎಫ್ ಎಸ್.ಡಿ.ಮಧು, ಎನ್.ಲಕ್ಷ್ಮಿಕಾಂತ್, ಅಂತರಸಂತೆ ವಲಯ ಅರಣ್ಯಾಧಿಕಾರಿ ಸಿದ್ದರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.