ಮೈಸೂರು: ‘ಬಿಜೆಪಿ ರಾಜ್ಯ ಘಟಕದಲ್ಲಿ ನಡೆಯುತ್ತಿರುವ ಆಂತರಿಕ ಕಲಹದ ಬೆಳವಣಿಗೆಯನ್ನು ಜನರು ಒಪ್ಪುವುದಿಲ್ಲ. ಬಯ್ಯುವುದು, ಬೊಗಳೆ ಬಿಡುವುದೇ ಕೆಲಸವಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡಿ’ ಎಂದು ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಸಲಹೆ ನೀಡಿದರು.
ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸೇರಿದಂತೆ ಯಾವ ಪಕ್ಷದಲ್ಲೂ ಈಗ ವೈಚಾರಿಕತೆಯೂ ಇಲ್ಲ, ನೈತಿಕತೆಯೂ ಇಲ್ಲ’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ಬಹಳಷ್ಟು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಆ ಬಗ್ಗೆ, ರಾಜ್ಯದಿಂದ ಕೇಂದ್ರದಲ್ಲಿ ಸಚಿವರಾಗಿರುವ ಒಬ್ಬರಾದರೂ ಮಾತನಾಡುತ್ತಿದ್ದಾರೆಯೇ? ಶೋಭಾ ಕರಂದ್ಲಾಜೆ, ಪ್ರಲ್ಹಾದ ಜೋಶಿ ಬರುತ್ತಾರೆ, ಯಾರನ್ನೋ ಬೈದು ಹೋಗುತ್ತಾರೆ. ಇದೇ ಕೆಲಸವೇ? ನೀವೆಲ್ಲ ದೇಶದ ಮಂತ್ರಿಗಳು. ಆದರೂ ಜಿಲ್ಲಾ ಪಂಚಾಯಿತಿ ಸದಸ್ಯರಿಗಿಂತ ಕಡೆಯಾಗಿ ಮಾತನಾಡುತ್ತಿದ್ದೀರಲ್ಲಾ?’ ಎಂದು ಕೇಳಿದರು.
‘ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಿಂತು ಹೋಗಿದ್ದ ಹಲವು ಯೋಜನೆಗೆ ಜೀವ ತುಂಬುತ್ತಿದ್ದಾರೆ. ಉಳಿದವರು ಕೇವಲ ಬೊಗಳೆ ಬಿಟ್ಟು ಹೋಗುತ್ತಿದ್ದಾರೆ. ಬಿಜೆಪಿಯ ಸಂಸದರು ಅಥವಾ ಸಚಿವರು ರಚನಾತ್ಮಕವಾಗಿ ಕೆಲಸ ಮಾಡುತ್ತಿಲ್ಲ’ ಎಂದರು.
‘ವಕ್ಫ್ ಆಸ್ತಿಯನ್ನು ನುಂಗಿರುವವರು ಬಲಿಷ್ಠ ಮುಸ್ಲಿಮರೇ ಹೊರತು ಕನಿಷ್ಠ ಮುಸ್ಲಿಮರಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಮರ ರಕ್ಷಣೆಗೆ ಹೋಗುತ್ತಿಲ್ಲವಲ್ಲ ಏಕೆ?’ ಎಂದು ಕೇಳಿದರು.
‘ಕೇಂದ್ರವು ವಕ್ಫ್ ಕಾಯ್ದೆ ತಿದ್ದುಪಡಿಗೆ ಮುಂದಾಗಿದ್ದು, ಬಿಜೆಪಿಯವರು ಆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಕೇವಲ ಹಿಂದುತ್ವದ ಬಗ್ಗೆ ಮಾತನಾಡುವುದೇ ಕೆಲಸವಲ್ಲ’ ಎಂದರು.
‘ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ. ಅವರು ಪತ್ರ ಬರೆದು, ಬಾಯಿತಪ್ಪಿನಿಂದ ಆಗಿದೆ ಎಂದು ಕ್ಷಮೆ ಕೋರಿದ ಮೇಲೂ ಅವರ ವಿರುದ್ಧ ಕ್ರಮ ವಹಿಸಿರುವುದನ್ನು ಸಹಿಸಲಾಗದು. ಈ ಇಳಿವಯಸ್ಸಿನಲ್ಲಿ ಅವರಿಗೆ ತೊಂದರೆ ಕೊಡಬಾರದಿತ್ತು. ಅವರ ವಿರುದ್ಧದ ಪ್ರಕರಣವನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು. ಗುರುಪರಂಪರೆಯನ್ನು ಗೌರವಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.
‘ಮುಡಾದ ಆಸ್ತಿಗೆ ಅಧ್ಯಕ್ಷರು ಹಾಗೂ ಆಯುಕ್ತರೇ ಮಾಲೀಕರು. ಆದರೆ, ಸಾವಿರಾರು ನಿವೇಶನಗಳನ್ನು ಕಳವು ಮಾಡಿದ್ದರೂ ಅವರು ಈವರೆಗೂ ಲಿಖಿತ ದೂರು ಕೊಟ್ಟಿಲ್ಲವೇಕೆ? ಇಷ್ಟಾದರು ಕಾನೂನು ಸಲಹೆ ಪಡೆಯುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿರುವುದು ಸರಿಯಲ್ಲ. ಹಿಂದಿನ ಅಧ್ಯಕ್ಷರು ಹಾಗೂ ಆಯುಕ್ತರ ಮೇಲೆ ತಕ್ಷಣ ದೂರು ದಾಖಲಿಸಬೇಕು’ ಎಂದು ಒತ್ತಾಯಿಸಿದರು.
‘ಸರ್ಕಾರ ಮುಡಾದ ಬಗ್ಗೆ ಗಂಭೀರ ಕ್ರಮ ಕೈಗೊಳ್ಳದಿದ್ದರೆ ನಿವೇಶನ ಖರೀದಿಸಿದವರ ಕಥೆ ಏನಾಗಬೇಕು? ಹೆಚ್ಚು– ಕಡಿಮೆಯಾದರೆ ಅವರೆಲ್ಲರೂ ಪ್ರಾಣ ಕಳೆದುಕೊಳ್ಳುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.
‘ನಿವೇಶನಗಳ ಹಂಚಿಕೆ ಅಕ್ರಮದ ಬಗ್ಗೆ ಮುಡಾನೇ ದೂರು ಕೊಟ್ಟಿಲ್ಲ ಎಂಬುದನ್ನು ಆಧರಿಸಿ ಪ್ರಕರಣ ಅಂತ್ಯಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ’ ಎಂದು ಆರೋಪಿಸಿದರು.
‘ಹಾಸನದಲ್ಲಿ ಡಿ.5ರಂದು ಆಯೋಜಿಸಿರುವ ಸಮಾವೇಶ ಯಾರಿಗೋಸ್ಕರ?’ ಎಂದು ಕೇಳಿದ ಅವರು, ‘ಸಿದ್ದರಾಮಯ್ಯ ಅವರಿಗೆ ಸಂಕಟ ಬಂದಾಗಲೆಲ್ಲಾ ಅಹಿಂದ ವೆಂಕಟರಮಣ’ ಎಂದು ವ್ಯಂಗ್ಯವಾಡಿದರು. ‘ಅಹಿಂದ ವರ್ಗಕ್ಕೆ ಏನು ಮಾಡಿದ್ದೇನೆ ಎಂಬುದನ್ನು ಅವರು ತಿಳಿಸಲಿ’ ಎಂದರು.
‘ಎಐಸಿಸಿ ಮಟ್ಟದಲ್ಲಿ ಆಗಿರುವ ತೀರ್ಮಾನದ ಪ್ರಕಾರ, ಸಿದ್ದರಾಮಯ್ಯ ಅವರು ಕೆಲವೇ ತಿಂಗಳಾದ ಮೇಲೆ ಅಧಿಕಾರ ತ್ಯಾಗ ಮಾಡಬೇಕು. ಡಿ.ಕೆ.ಶಿವಕುಮಾರ್‌ಗೆ ಅಧಿಕಾರ ಬಿಟ್ಟುಕೊಡಬೇಕು. ಅದಕ್ಕೆ ಅವಕಾಶ ಆಗದಿರಲೆಂದು ಡಿಕೆಶಿಯನ್ನು ಹೆದರಿಸುತ್ತಿದ್ದೀರೋ ಅಥವಾ ಎಐಸಿಸಿಯನ್ನೋ? ಯಾರನ್ನು ಹೆದರಿಸಲು ಈ ಸಮಾವೇಶ ಮಾಡುತ್ತಿದ್ದೀರಿ? ಯಾವ ಸಂದೇಶ ಕೊಡಲು ಹೊರಟಿದ್ದೀರಿ? ಅಹಿಂದಕ್ಕೆ ಮಾಡಿರುವ ದ್ರೋಹದ ಬಗ್ಗೆ ಹೇಳುತ್ತೀರಾ?’ ಎಂದು ಕೇಳಿದರು.
‘ಮುಡಾದಿಂದ 140 ಫೈಲ್‌ಗಳನ್ನು ಐಎಎಸ್ ಅಧಿಕಾರಿ ತೆಗೆದುಕೊಂಡು ಹೋಗಿದ್ದಾರೆ ಎಂದು ಲೋಕಾಯುಕ್ತ ಟಿಪ್ಪಣಿಯಲ್ಲಿ ಬರೆಯಲಾಗಿದೆ. ಅವುಗಳನ್ನು ಸುಟ್ಟು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಅವು ಯಾರಿಗೆ ಸಂಬಂಧಿಸಿದವು ಎಂಬುದನ್ನು ಸರ್ಕಾರ ತಿಳಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.