ADVERTISEMENT

ಮಕ್ಕಳ ಅಭಿವ್ಯಕ್ತಿಗೆ ಆದ್ಯತೆ ಕೊಡಿ: ಲೇಖಕಿ ಪ್ರೊ.ಸಬಿತಾ ಬನ್ನಾಡಿ

‘ಪಠ್ಯ ಬೋಧನೆಯ ವೈಚಾರಿಕ ಆಯಾಮಗಳು’ ಉಪನ್ಯಾಸ: ಲೇಖಕಿ ಪ್ರೊ.ಸಬಿತಾ ಬನ್ನಾಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 7:04 IST
Last Updated 6 ಫೆಬ್ರುವರಿ 2026, 7:04 IST
ಪ್ರೊ.ಸಬಿತಾ ಬನ್ನಾಡಿ 
ಪ್ರೊ.ಸಬಿತಾ ಬನ್ನಾಡಿ    

ಮೈಸೂರು: ‘ಕನ್ನಡ ಸಾಹಿತ್ಯ ಪಠ್ಯ ಬೋಧನೆಯಲ್ಲಿ ವಿದ್ಯಾರ್ಥಿಗಳನ್ನು ಒಳಗೊಳ್ಳಬೇಕು. ಮಕ್ಕಳ ಅಭಿವ್ಯಕ್ತಿಗೆ ಅವಕಾಶ ಕೊಡಬೇಕು’ ಎಂದು ಲೇಖಕಿ ಪ್ರೊ.ಸಬಿತಾ ಬನ್ನಾಡಿ ಸಲಹೆ ನೀಡಿದರು. 

ಮಾನಸಗಂಗೋತ್ರಿಯ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಮಹಾರಾಜ ಕಾಲೇಜು ಮತ್ತು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮಂಡಳಿಯು ಗುರುವಾರ ಆಯೋಜಿಸಿದ್ದ ‘ಪದವಿ ಪಠ್ಯರಚನೆ– ಬೋಧನೆ ಪ್ರಶ್ನೆಪತ್ರಿಕೆ ತಯಾರಿ ಮತ್ತು ಮೌಲ್ಯಮಾಪನ ವಿಧಿವಿಧಾನಗಳು’ ಕಾರ್ಯಾಗಾರದಲ್ಲಿ ‘ಪಠ್ಯ ಬೋಧನೆಯ ಸೃಜನಾತ್ಮಕ ಮತ್ತು ವೈಚಾರಿಕ ಆಯಾಮಗಳು’ ಕುರಿತು ಮಾತನಾಡಿದರು.   

‘ಸಂವಾದ ಮಾದರಿಯಲ್ಲಿ ಜ್ಞಾನ ವಿಸ್ತರಿಸುವಂತೆ ಮಾಡಬೇಕು. ಸಿಟ್ಟಾಗದೇ ತಾಳ್ಮೆಯಿಂದ ನಡೆದುಕೊಳ್ಳಬೇಕು. ಬಯ್ಯುವ, ಹೀಗಳೆಯುವ ಕೆಲಸ ಮಾಡದೇ ವೃತ್ತಿ, ಬೋಧನೆ ಹಾಗೂ ಸಾಹಿತ್ಯವನ್ನು ಪ್ರೀತಿಸಬೇಕು’ ಎಂದರು. 

ADVERTISEMENT

‘ವಾಟ್ಸ್‌ಆ್ಯಪ್‌ ವಿಶ್ವವಿದ್ಯಾಲಯದ ವೀರರಾಗದೇ ದೇಶ ಹಾಗೂ ಜಗತ್ತಿನ ಆಗುಹೋಗುಗಳನ್ನು ಕೂಲಂಕಷವಾಗಿ ಗಮನಿಸಿ ಪಠ್ಯದ ಜೊತೆಗೆ ವಿಷಯಗಳನ್ನು ದಾಟಿಸಬೇಕು. ಕೇವಲ ಪಠ್ಯಕ್ಕೆ ಮಾತ್ರ ಸೀಮಿತರಾಗದೇ ಬಹುಶಿಸ್ತೀಯ ಅಧ್ಯಯನಕ್ಕೆ ಪ್ರೇರೇಪಿಸಬೇಕು’ ಎಂದು ಹೇಳಿದರು. 

‘ಮಕ್ಕಳಿಗೆ ಗೂಗಲ್‌ ಫಾರ್ಮ್‌ ನೀಡಿ ಪಠ್ಯ ಪುಸ್ತಕಗಳಲ್ಲೇನು ಸಮಸ್ಯೆ ಇದೆ. ಅರ್ಥವಾಗದ್ದು ಯಾವುದು? ಯಾವುದನ್ನು ನಿರೀಕ್ಷೆ ಮಾಡುತ್ತೀರೆಂದು ಕೇಳಬೇಕು. ಕನ್ನಡ ತಪ್ಪು ಬರೆಯುತ್ತಿದ್ದರೆ ಸರಿಗನ್ನಡ ಕಲಿಸಲು ಒತ್ತು ನೀಡಬೇಕು. ಯಾವುದನ್ನೂ ಬೋಧಕರು ಹೊರೆಯೆಂದು ಕೊಳ್ಳದೇ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಬೇಕು’ ಎಂದರು. 

‘ಸ್ನಾತಕ, ಸ್ನಾತಕೋತ್ತರ ತರಗತಿಗಳನ್ನು ತೆಗೆದುಕೊಳ್ಳುವಾಗ ಮಕ್ಕಳಿಂದಲೇ ಪಾಠದ ಸಾರ, ಸ್ವಾಗತ, ವಂದನಾರ್ಪಣೆ ಮಾಡಿಸುತ್ತಿದ್ದೆ. ಆ ನಂತರ ಯಾವುದೇ ಕಾರ್ಯಕ್ರಮವಾದರೂ ಮಕ್ಕಳು ಧೈರ್ಯವಾಗಿ ಬರುತ್ತಿದ್ದರು. ನಿತ್ಯ ಯಾವುದಾದರೊಂದು ವಿಷಯದ ಬಗ್ಗೆ ಮಾತನಾಡಿಸುತ್ತಿದ್ದೆ. ಸೋನಂ ವಾಗ್ಚುಕ್‌, ವಿರಾಟ್‌ ಕೊಹ್ಲಿ ಯಾರ ಬಗ್ಗೆಯಾದರೂ ಮಾತನಾಡಬೇಕಿತ್ತು. ಇವೆಲ್ಲವೂ ವಿಷಯ ಗ್ರಹಿಕೆಯನ್ನು ವಿಸ್ತರಿಸುತ್ತವೆ’ ಎಂದು ಹೇಳಿದರು. 

‘ಕಥೆ ಪಾಠ ಮಾಡುವಾಗ ಪುಸ್ತಕ ಮುಚ್ಚಿಡಿಸಿ ಅದರ ಸಾರವನ್ನು ಹೇಳಿಸುತ್ತಿದ್ದೆ. ಪ್ರಶ್ನೆಗಳೇನು ಬರಬಹುದು? ಹೇಗೆ ಉತ್ತರ ಬರೆಯಬೇಕೆಂದು ತಿಳಿಸುತ್ತಿದ್ದೆ’ ಎಂದು ತಮ್ಮ ಅನುಭವ ಹಂಚಿಕೊಂಡರು. 

ನಂತರ ‘ಪಠ್ಯ ರಚನೆಯ ಸವಾಲುಗಳು’ ಕುರಿತು ಪ್ರೊ.ಎಸ್‌.ಎಂ.ಮುತ್ತಯ್ಯ ಮಾತನಾಡಿದರು.

ಸಮಾರೋಪದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ತರಬೇತಿ ಕೇಂದ್ರದ ನಿರ್ದೇಶಕಿ ಪ್ರೊ.ಎಚ್‌.‍ಪಿ.ಜ್ಯೋತಿ, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಡಿ.ವಿಜಯಲಕ್ಷ್ಮಿ, ಕನ್ನಡ ಸಂಘದ ಸಂಚಾಲಕಿ ಪ್ರೊ.ಬಿ.ಪಿ.ಆಶಾಕುಮಾರಿ, ಕನ್ನಡ ಅಧ್ಯಯನ ಮಂಡಳಿಯ ಪ್ರೊ.ಟಿ.ಕೆ.ಕೆಂಪೇಗೌಡ ಪಾಲ್ಗೊಂಡಿದ್ದರು. 

ಮಾನಸಗಂಗೋತ್ರಿಯ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಗುರುವಾರ ನಡೆದ ‘ಪದವಿ ಪಠ್ಯರಚನೆ– ಬೋಧನೆ ಪ್ರಶ್ನೆಪತ್ರಿಕೆ ತಯಾರಿ ಮತ್ತು ಮೌಲ್ಯಮಾಪನ ವಿಧಿವಿಧಾನಗಳು’ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪ್ರಾಧ್ಯಾಪಕರು –ಪ್ರಜಾವಾಣಿ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.