ADVERTISEMENT

ಮೈಸೂರು: ಕಡಿಮೆ ವೆಚ್ಚದ ಎಲೆಕ್ಟ್ರಿಕ್‌ ಕಾರು ತಯಾರಿಸಿದ ವಿದ್ಯಾರ್ಥಿಗಳು

ವಿವಿಸಿಇ ವಿದ್ಯಾರ್ಥಿಗಳ ಸಾಧನೆ; ಹಳೆಯ ಕಾರು ಇ–ವಾಹನವಾಗಿ ಪರಿವರ್ತನೆ

ಮಹಮ್ಮದ್ ನೂಮಾನ್
Published 25 ಮೇ 2021, 19:30 IST
Last Updated 25 ಮೇ 2021, 19:30 IST
ಎಲೆಕ್ಟ್ರಿಕ್‌ ವಾಹನವಾಗಿ ಪರಿವರ್ತಿಸಿದ ನ್ಯಾನೊ ಕಾರಿನ ಜತೆ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶನ ನೀಡಿದ ಬೋಧಕರು ಇದ್ದಾರೆ
ಎಲೆಕ್ಟ್ರಿಕ್‌ ವಾಹನವಾಗಿ ಪರಿವರ್ತಿಸಿದ ನ್ಯಾನೊ ಕಾರಿನ ಜತೆ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶನ ನೀಡಿದ ಬೋಧಕರು ಇದ್ದಾರೆ   

ಮೈಸೂರು: ನಗರದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳ ತಂಡವು ಐ.ಸಿ ಎಂಜಿನ್‌ (ಪೆಟ್ರೋಲ್‌, ಡೀಸೆಲ್) ಕಾರನ್ನು ಪರಿಸರಸ್ನೇಹಿ ಎಲೆಕ್ಟ್ರಿಕ್‌ ಕಾರು ಆಗಿ ಪರಿವರ್ತಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಪದವಿಯ ಅಂತಿಮ ವರ್ಷದ ಪ್ರಾಜೆಕ್ಟ್‌ಗಾಗಿ ಟಾಟಾ ನ್ಯಾನೊ ಕಾರೊಂದನ್ನು ಕಡಿಮೆ ವೆಚ್ಚದಲ್ಲಿ, ಎಲೆಕ್ಟ್ರಿಕ್‌ ಕಾರನ್ನಾಗಿ ಪರಿವರ್ತಿಸಿ ಗಮನ ಸೆಳೆದಿದ್ದಾರೆ. ಹಳೆಯ ಕಾರನ್ನು ₹ 41,500 ನೀಡಿ ಖರೀದಿಸಿದ್ದು, ಇ–ವಾಹನದ ರೂಪ ನೀಡಿದ್ದಾರೆ. ವಿದ್ಯುತ್‌ ಮೋಟರ್, ನಿಯಂತ್ರಕ, ಬ್ಯಾಟರಿ ಮತ್ತು ಇತರ ಪರಿಕರಗಳನ್ನು ಅಳವಡಿಸಿದ್ದಾರೆ. ಇದಕ್ಕಾಗಿ ಒಟ್ಟು ₹ 96,658 ಖರ್ಚಾಗಿದೆ.

ಈ ಹಿಂದೆ ಬೇರೆ ಕೆಲವು ಕಾಲೇಜುಗಳ ವಿದ್ಯಾರ್ಥಿಗಳು ಕೂಡಾ ಇದೇ ರೀತಿ ಐ.ಸಿ ಎಂಜಿನ್‌ ವಾಹನವನ್ನು ಇ–ವಾಹನವಾಗಿ ಪರಿವರ್ತಿಸಿದ ಉದಾಹರಣೆಗಳಿವೆ. ಆದರೆ, ಅದಕ್ಕಾಗಿ ₹2 ರಿಂದ ₹ 3 ಲಕ್ಷ ಖರ್ಚು ಮಾಡಿದ್ದಾರೆ. ವಿವಿಸಿಇ ಕಾಲೇಜು ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ಮಾಡಿರುವುದು ವಿಶೇಷ.

ADVERTISEMENT

ಭರತ್‌ ವೈ.ಕಶ್ಯಪ್, ಆರ್.ವಿ.ಶಶಾಂಕ್, ವಿಷ್ಣು ಅಪ್ಪಯ್ಯ, ಚಿದಾನಂದ ಎ.ಕಶ್ಯಪ್, ಕೆ.ಗುರುಪ್ರಸಾದ್, ಆರ್‌.ಪುನೀತ್, ಸೌದಗರ್‌ ಮತ್ತು ಆರ್‌. ಪ್ರತೀಕ್‌ ಅವರನ್ನೊಗೊಂಡ ವಿದ್ಯಾರ್ಥಿಗಳ ತಂಡ ಈ ಸಾಧನೆ ಮಾಡಿದೆ.

ವಿವಿಸಿಇ ಕಾಲೇಜಿನ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಿ.ಎಸ್‌.ರಕ್ಷಿತ್ ಗೌಡ ಅವರ ಮಾರ್ಗದರ್ಶನದಲ್ಲಿ ಪ್ರಾಜೆಕ್ಟ್ ಕೆಲಸ ನಡೆದಿದೆ. ಕಾಲೇಜಿನ ಪ್ರಾಧ್ಯಾಪಕರಾದ ಡಾ.ಎಲ್‌.ಜೆ.ಸುದೇವ್‌, ಡಾ.ಜಿ.ಬಿ.ಕೃಷ್ಣಪ್ಪ ಮತ್ತು ಡಾ.ಜಿ.ವಿ.ನವೀನ್‌ ಪ್ರಕಾಶ್ ಅವರು ಸಲಹೆಗಳನ್ನು ನೀಡಿದ್ದಾರೆ.

‘ಹಳೆಯ ನ್ಯಾನೊ ಕಾರು ಖರೀದಿಸಿ ಅದರ ಎಂಜಿನ್‌ ತೆಗೆದು, ಬ್ಯಾಟರಿ ಮತ್ತು ವಿದ್ಯುತ್‌ ಮೋಟರ್‌ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಪ್ರಾಜೆಕ್ಟ್‌ಗಾಗಿ ಡೆಮೋ ರೀತಿಯಲ್ಲಿ ಚಿಕ್ಕ ಕಾರನ್ನು ಇ–ವಾಹನವಾಗಿ ಪರಿವರ್ತಿಸಿದ್ದಾರೆ. ಇದೇ ರೀತಿ ದೊಡ್ಡ ಕಾರುಗಳನ್ನೂ ಪರಿವರ್ತಿಸಬಹುದು. ಈ ಕಾರು ಸಂಪೂರ್ಣ ಚಾರ್ಜ್‌ ಅಗಲು 8 ಗಂಟೆ ಬೇಕು. ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ 40 ಕಿ.ಮೀ.ವರೆಗೆ ಓಡಿಸಬಹುದು’ ಎಂದು ರಕ್ಷಿತ್‌ ಗೌಡ ಅವರು ಪ್ರಜಾವಾಣಿಗೆ ತಿಳಿಸಿದರು.

‘ಹೆಚ್ಚಿನ ಶಕ್ತಿಯ ಬ್ಯಾಟರಿ ಮತ್ತು ಮೋಟರ್‌ ಅಳವಡಿಸಿದರೆ ಇನ್ನಷ್ಟು ಕಿ.ಮೀ. ಕ್ರಮಿಸಬಹುದು. ಈಗಾಗಲೇ ಹಲವು ಕಂಪನಿಗಳು ವಿದ್ಯುತ್‌ ಚಾಲಿತ ವಾಹನಗಳನ್ನು ತಯಾರಿಸುತ್ತಿವೆ. ಆದರೆ ನಾವು ಹೊಸ ವಾಹನ ತಯಾರಿಸಿಲ್ಲ. ಹಳೆಯ ವಾಹನವನ್ನು ಇ–ವಾಹನವಾಗಿ ಪರಿವರ್ತಿಸಿದ್ದೇವೆ. ಆದ್ದರಿಂದ ನಾವು ಅನುಸರಿಸಿದ ತಂತ್ರಜ್ಞಾನದ ಪೇಟೆಂಟ್‌ಗಾಗಿ ಅರ್ಜಿ ಹಾಕಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಹೊಂದಿರುವ 15 ವರ್ಷ ಹಳೆಯದಾದ ವಾಹನಗಳನ್ನು ಗುಜರಿಗೆ ಹಾಕಬೇಕು ಎಂಬ ನೀತಿಯನ್ನು ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಪ್ರಕಟಿಸಿತ್ತು. ಇದರಿಂದ ಲಕ್ಷಾಂತರ ವಾಹನಗಳು ಗುಜರಿಗೆ ಸೇರಬೇಕು. ಆದರೆ ಅಂತಹ ವಾಹನಗಳನ್ನು ಇ–ವಾಹನವಾಗಿ ಪರಿವರ್ತಿಸಿದರೆ ಇನ್ನೂ ಕೆಲವು ವರ್ಷ ಬಳಸಬಹುದು’ ಎಂದರು.‌

‘ಸರ್ಕಾರದ ಪ್ರೋತ್ಸಾಹ ಬೇಕಿದೆ’: ಹಳೆಯ ವಾಹನಗಳನ್ನು ಇ–ವಾಹನವಾಗಿ ಪರಿವರ್ತಿಸಲು ಸರ್ಕಾರದಿಂದ ಸೂಕ್ತ ಪ್ರೋತ್ಸಾಹ ದೊರೆತಿಲ್ಲ. ಹೀಗೆ ಪರಿವರ್ತಿಸಲಾಗಿರುವ ವಾಹನಗಳ ನೋಂದಣಿಗೆ ಈಗ ಇರುವ ಕಾನೂನಿನಲ್ಲಿ ಸ್ಪಷ್ಟತೆ ಇಲ್ಲ.

ಪೆಟ್ರೋಲ್‌ ಅಥವಾ ಡೀಸೆಲ್‌ ಎಂಜಿನ್‌ನ ವಾಹನವನ್ನು ಸಿಎನ್‌ಜಿ ವಾಹನ ಆಗಿ ಪರಿವರ್ತಿಸಲು ಈಗ ಇರುವ ನಿಯಮದಡಿ ಅವಕಾಶವಿದೆ. ವಾಹನದ ‘ಆರ್.ಸಿ’ಯಲ್ಲಿ ಸಿಎನ್‌ಜಿ ಚಾಲಿತ ಎಂದು ಬದಲಾಯಿಸಬಹುದು. ಆದರೆ ವಿದ್ಯುತ್‌ ಚಾಲಿತ ವಾಹನವಾಗಿ ಪರಿವರ್ತಿಸಿದರೆ ಆರ್‌.ಸಿಯಲ್ಲಿ ಬದಲಾವಣೆಗೆ ಅವಕಾಶವಿಲ್ಲ.

‘ಹಳೆಯ ವಾಹನಗಳ ‘ಆರ್‌.ಸಿ.’ಯಲ್ಲಿಯೇ ವಿದ್ಯುತ್ ಚಾಲಿತ ಪರಿವರ್ತನೆ ಎಂದು ಉಲ್ಲೇಖಿಸಲು ಅವಕಾಶ ನೀಡಬೇಕು. ಇದಕ್ಕಾಗಿ ಅಗತ್ಯ ಅಧಿಸೂಚನೆಯನ್ನು ಸರ್ಕಾರ ಹೊರಡಿಸಬೇಕು. ಇಂತಹ ಪರಿವರ್ತಿತ ವಾಹನಗಳನ್ನು ಕಾನೂನಾತ್ಮಕವಾಗಿ ರಸ್ತೆಗೆ ಇಳಿಸುವ ಅನುಮತಿ ಲಭಿಸಿದರೆ ಈ ಕ್ಷೇತ್ರದಲ್ಲಿಯೂ ಸಾಕಷ್ಟು ಉದ್ಯೋಗ ಸೃಷ್ಟಿಗೆ ಅವಕಾಶವಿದೆ. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಹೊಸ ಅವಕಾಶದ ಬಾಗಿಲು ತೆರೆಯಲಿದೆ’ ಎಂದು ರಕ್ಷಿತ್‌ ಗೌಡ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.