ADVERTISEMENT

ನಂಜನಗೂಡು ತಾಲ್ಲೂಕು ಆರೋಗ್ಯ ಅಧಿಕಾರಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 18:07 IST
Last Updated 20 ಆಗಸ್ಟ್ 2020, 18:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು:ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ (43) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋವಿಡ್‌–19 ನಿರ್ವಹಣಾ ಕಾರ್ಯದಲ್ಲಿ ನೀಡುತ್ತಿದ್ದ ‘ಟಾರ್ಗೆಟ್‌’ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಸಂಬಂಧಿಕರು ಆರೋಪಿಸಿದ್ದು, ಇದಕ್ಕಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಪ್ರಶಾಂತ್‌ಕುಮಾರ್‌ ಮಿಶ್ರಾ ಅವರನ್ನು ದೂರಿದ್ದಾರೆ.

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ಪರಿವೀಕ್ಷಕರಾಗಿದ್ದ ಇವರು, ಆರು ತಿಂಗಳಿನಿಂದ ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ADVERTISEMENT

ಅವರಿಗೆ ಪತ್ನಿ ಅನಿತಾ, ಏಳು ವರ್ಷದ ಮಗಳಿದ್ದಾರೆ. ಕೋವಿಡ್‌ ಭೀತಿಯಿಂದಾಗಿ, ಪತ್ನಿ ಹೆಬ್ಬಾಳದಲ್ಲಿರುವ ತಮ್ಮ ತವರು ಮನೆಯಲ್ಲಿಮಗಳ ಜತೆ ವಾಸವಿದ್ದರು. ನಾಗೇಂದ್ರ ಮೈಸೂರಿನ ಗಿರಿನಗರದ ನಿವಾಸದಲ್ಲಿ ಒಬ್ಬರೇ ಇದ್ದರು. ಗುರುವಾರ ಬೆಳಿಗ್ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮನೆಯಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರುಕುಳ ಆರೋಪ, ಶವವಿಟ್ಟು ಪ್ರತಿಭಟನೆ:ಸಿಇಒ ಪ್ರಶಾಂತಕುಮಾರ್ ಮಿಶ್ರಾ ಅವರ ಕಿರುಕುಳದಿಂದಾಗಿಯೇ ಡಾ.ನಾಗೇಂದ್ರ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದು,ಇಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದರು.

‘ಸಿಇಒ ನೀಡುತ್ತಿದ್ದ ಕಾರ್ಯಭಾರದಿಂದಾಗಿ ಒತ್ತಡಕ್ಕೀಡಾಗಿದ್ದರು. ಜೊತೆಗೆ ಸಿಬ್ಬಂದಿ ಕೊರತೆಯಿಂದ ಕಾರ್ಯನಿರ್ವಹಣೆ ಕಷ್ಟ ಆಗುತ್ತಿತ್ತು. ಪ್ರತಿದಿನ 300 ಮಂದಿಗೆ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸುವ ಗುರಿ ನೀಡಲಾಗಿತ್ತು. ಇದನ್ನು ಸಾಧಿಸಲು ಅಗತ್ಯವಿದ್ದಷ್ಟು ಸಿಬ್ಬಂದಿ ಇರಲಿಲ್ಲ. ಗುರಿ ಸಾಧಿಸದಿದ್ದಾಗ ಸಿಇಒ ಏಕವಚನದಲ್ಲಿ‌ ನಿಂದಿಸುತ್ತಿದ್ದರು’ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಸಿಇಒ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಶವಸಂಸ್ಕಾರಕ್ಕೆ ಒಪ್ಪಿಗೆ ನೀಡುವುದಿಲ್ಲ ಎಂದು ಪಟ್ಟುಹಿಡಿದರು.

ಮೃತದೇಹದ ಅಂತಿಮ ದರ್ಶನಕ್ಕೆ ಬಂದಿದ್ದ ಸಿಇಒ ಮಿಶ್ರಾ, ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಕೆಲಸದಿಂದ ದೂರ ಉಳಿದ ವೈದ್ಯರು:ಸಿಇಒ ಮಿಶ್ರಾ ಅವರನ್ನು ಅಮಾನತು ಮಾಡುವಂತೆ ಪಟ್ಟುಹಿಡಿದಿರುವ ಜಿಲ್ಲೆಯ ಎಲ್ಲ ಸರ್ಕಾರಿ ವೈದ್ಯರು, ಅಲ್ಲಿಯವರೆಗೆ ಕೆಲಸದಿಂದ ದೂರ ಉಳಿಯುವ ತೀರ್ಮಾನ ತೆಗೆದುಕೊಂಡರು. ಕರ್ನಾಟಕ ಸರ್ಕಾರಿ ವೈದ್ಯಾದಿಕಾರಿಗಳ ಸಂಘ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.