ಮೈಸೂರು: ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 65,397 ಮಂದಿ ಸಾವಿನ ಮನೆಯ ಕದ ತಟ್ಟಿದ್ದಾರೆ. ಇದಕ್ಕೆ ಕೌಟುಂಬಿಕ ಕಲಹ, ಅನಾರೋಗ್ಯದಂತಹ ಸಮಸ್ಯೆಗಳು ಪ್ರಮುಖ ಕಾರಣ ಎಂಬುದನ್ನು ಗುರುತಿಸಲಾಗಿದೆ.
ರಾಷ್ಟ್ರೀಯ ಅಪರಾಧ ಬ್ಯೂರೊ (ಎನ್‌ಸಿಆರ್‌ಬಿ)ದಿಂದ 2020ರಿಂದ 2024ರವರೆಗಿನ ದಾಖಲೆಗಳನ್ನು ಆಧರಿಸಿ ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆ ಕೇಂದ್ರದ ಸಹ ಪ್ರಾಧ್ಯಾಪಕ ಡಿ.ಸಿ. ನಂಜುಂಡ ಮತ್ತು ಮಹಾರಾಜ ಕಾಲೇಜಿನ ಮನೋವಿಜ್ಞಾನ ಪ್ರಾಧ್ಯಾಪಕರಾದ ಲ್ಯಾನ್ಸಿ ಡಿಸೋಜಾ ಅವರ ನೇತೃತ್ವದ ತಂಡ ನಡೆಸಿದ ಜಂಟಿ ಅಧ್ಯಯನದಿಂದ ಕಳವಳಕಾರಿ ಸಂಗತಿಗಳು ಹೊರಬಿದ್ದಿವೆ.
ಇತರ ಕಾರಣ: ಸಾಲದ ಒತ್ತಡ, ಬಡತನ, ನಿರುದ್ಯೋಗ, ಮಾದಕ ವ್ಯಸನ, ಪ್ರೇಮ ವೈಫಲ್ಯ, ಉದ್ಯೋಗದ ಒತ್ತಡ, ವೈವಾಹಿಕ ಸಂಬಂಧದಲ್ಲಿನ ಬಿರುಕು ಮೊದಲಾದ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಅಂಕಿ–ಅಂಶದಿಂದ ಕಂಡುಬಂದಿದೆ. 2021ರ ನಂತರ ಪ್ರಕರಣಗಳ ಸಂಖ್ಯೆ ಸರಾಸರಿ 13ಸಾವಿರ ದಾಟಿದೆ!
‘ಈ ಐದು ವರ್ಷಗಳಲ್ಲಿ ಒಟ್ಟು 192 ಮಹಿಳೆಯರು ಬಂಜೆತನ ಅಥವಾ ಮಕ್ಕಳಾಗದಿರುವಿಕೆಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸರಾಸರಿ ವಯಸ್ಸು 18ರಿಂದ 30 ವರ್ಷ. ಇದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬಂದಿದೆ. ಮಕ್ಕಳಾಗದಿರುವುದು ಇತರ ಕೌಟುಂಬಿಕ ಸಮಸ್ಯೆಗಳು ಮತ್ತು ಮಾನಸಿಕ ವ್ಯಥೆಗೆ ದಾರಿ ಮಾಡಿಕೊಟ್ಟಿರುವ ಸಾಧ್ಯತೆ ಇದೆ’ ಎಂಬುದನ್ನು ವಿಶ್ಲೇಷಿಸಲಾಗಿದೆ.
ಮಾಹಿತಿ ಆಧರಿಸಿ: ‘ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಪಡೆದ ಮಾಹಿತಿಯನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. 30ರಿಂದ 45 ವರ್ಷ ವಯಸ್ಸಿನ ಪುರುಷರಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದ್ದು, ಇದು ಸಂಕೀರ್ಣ ಲಿಂಗಾಧಾರಿತ ಆರ್ಥಿಕ ಹೊಣೆಗಾರಿಕೆ ಮತ್ತು ಸಾಮಾಜಿಕ ಒತ್ತಡವನ್ನು ಬಿಂಬಿಸುತ್ತಿದೆ’ ಎಂದು ಪ್ರೊ.ನಂಜುಂಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆರ್ಥಿಕ ಮತ್ತು ವೈಯಕ್ತಿಕ ಸಂಬಂಧಗಳಲ್ಲಿನ ಬಿರುಕಿನಿಂದ ಹೆಚ್ಚಿನ ಕೌಟುಂಬಿಕ ಸಮಸ್ಯೆಗಳು ಉಂಟಾಗುತ್ತಿದ್ದು, ಇದರಿಂದ ಆತ್ಮಹತ್ಯೆಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ಹೊಸ ಸಾಮಾಜಿಕ ಸಮಸ್ಯೆಯನ್ನು ಸೂಚಿಸುತ್ತಿದೆ. ಎಲ್ಲಾ ಆತ್ಮಹತ್ಯೆ ಪ್ರಕರಣಗಳನ್ನು ಸರಿಯಾಗಿ ದಾಖಲಿಸಬೇಕಾದ ಮತ್ತು ಅವಶ್ಯವಾದ ಪರಿಹಾರ ಕಂಡು ಹಿಡಿಯುವ ಅಗತ್ಯವನ್ನೂ ಸಾರಿ ಹೇಳುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.
‘ರಾಜ್ಯದಲ್ಲಿ ಮಾನಸಿಕ ಆರೋಗ್ಯ ತಜ್ಞರ ಕೊರತೆ ತೀವ್ರವಾಗಿದೆ. ಇದನ್ನು ನೀಗಿಸಬೇಕು. ಜೊತೆಗೆ ಆತ್ಮಹತ್ಯೆ ಪ್ರಕರಣಗಳು ಕೂಡ ಹೆಚ್ಚುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಆರೋಗ್ಯ ಕೇಂದ್ರಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಜಾಗೃತಿ ಹಾಗೂ ಸಮಾಲೋಚನಾ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸಬೇಕು. ಶಾಲಾ– ಕಾಲೇಜುಗಳ ಮಟ್ಟದಲ್ಲಿ ಜಾಗೃತಿ ಹೆಚ್ಚಬೇಕು’ ಎನ್ನುತ್ತಾರೆ ಲ್ಯಾನ್ಸಿ ಡಿಸೋಜಾ.
ಇತ್ತೀಚಿಗೆ ಉಂಟಾಗುತ್ತಿರುವ ಬಹು ಆಯಾಮದ ಸಾಮಾಜಿಕ ಆರ್ಥಿಕ ಹಾಗೂ ನಗರೀಕರಣದ ಬೆಳವಣಿಗೆಗಳು ಹೊಸ ರೀತಿಯ ಮಾನಸಿಕ ಒತ್ತಡಗಳಿಗೆ ಕಾರಣವಾಗುತ್ತಿವೆಡಿ.ಸಿ. ನಂಜುಂಡ ಸಹ ಪ್ರಾಧ್ಯಾಪಕ ಸಾಮಾಜಿಕ ಒಳಗೊಳ್ಳುವಿಕೆ ಕೇಂದ್ರ ಮೈಸೂರು ವಿಶ್ವವಿದ್ಯಾಲಯ
22 ಮಂದಿ ಲಿಂಗತ್ವ ಅಲ್ಪಸಂಖ್ಯಾತರು
ಐದು ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 22 ಮಂದಿ ಲಿಂಗತ್ವ ಅಲ್ಪಸಂಖ್ಯಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸರಾಸರಿ ವಯಸ್ಸು 18ರಿಂದ 30 ವರ್ಷ. ಹೆಚ್ಚಿನವರು ಬೆಂಗಳೂರು ನಗರ ಜಿಲ್ಲೆಗೆ ಸೇರಿದ್ದಾರೆ ಎನ್ನುತ್ತದೆ ದಾಖಲೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಅಧ್ಯಯನ ತಂಡ ತಿಳಿಸಿದೆ.
ದಾಖಲೆಗಳಂತೆ...
‘ಬೆಳಗಾವಿಯಲ್ಲಿ ಮಾದಕ ವ್ಯಸನದ ಕಾರಣದಿಂದ 952 ಬೆಂಗಳೂರು ನಗರದಲ್ಲಿ ಬ್ಯಾಂಕ್ ಸಾಲ ತೀರಿಸಲಾಗದ ಒತ್ತಡದಿಂದ 850 ತುಮಕೂರಿನಲ್ಲಿ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇಲ್ಲದ್ದಕ್ಕೆ 326 ದಾವಣಗೆರೆಯಲ್ಲಿ ಇತರ ಕಾರಣಗಳಿಂದ 276 ಹಾಗೂ ಮೈಸೂರು ಜಿಲ್ಲೆಯಲ್ಲಿ ಸಾಮಾಜಿಕ ಕಳಂಕದಿಂದಾಗಿ 129 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ದಾಖಲೆಗಳಿಂದ ತಿಳಿದುಬಂದಿದೆ’ ಎಂದು ನಂಜುಂಡ ತಿಳಿಸಿದರು. ‘ಆತ್ಮಹತ್ಯೆಗಳ ಪ್ರಮಾಣ ಹೀಗೆಯೇ ಮುಂದುವರಿದಲ್ಲಿ 2030ರ ವೇಳೆಗೆ ವರ್ಷಕ್ಕೆ ಶೇ 1.78ರಂತೆ ಸುಮಾರು 14ಸಾವಿರಕ್ಕಿಂತ ಹೆಚ್ಚಿನ ಆತ್ಮಹತ್ಯೆ ಸಂಭವಿಸಬಹುದು. ಅನಾರೋಗ್ಯ ಸಂಬಂಧಿತ ಆತ್ಮಹತ್ಯೆಗಳು (6ಸಾವಿರಕ್ಕಿಂತಲೂ ಜಾಸ್ತಿ) ಎಲ್ಲದಕ್ಕಿಂತಲೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗದಂತೆ ತಡೆಯಬೇಕು’ ಎಂಬ ಆಶಯ ಈ ತಜ್ಞರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.