ADVERTISEMENT

ಯುವಜನರ ಉದ್ಯಮಕ್ಕೆ ಸಹಕರಿಸಿ: ಪ್ರೊ.ಎನ್.ಕೆ.ಲೋಕನಾಥ್

ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಸಭೆ: ಸಹಕಾರ ಮಿತ್ರ ಪ್ರಶಸ್ತಿ‌ ವಿತರಣೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 15:57 IST
Last Updated 10 ಸೆಪ್ಟೆಂಬರ್ 2024, 15:57 IST
ಮೈಸೂರಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮಿಗಳಾದ ರಾಮಕೃಷ್ಣ ಹೆಬ್ಬಾರ್, ಆರ್.ಮುರಳೀಧರನ್, ಜಿ.ಜಿ.ರಾಘವನ್ ಅವರಿಗೆ ‘ಸಹಕಾರ ಮಿತ್ರ’ ಪ್ರಶಸ್ತಿ ಪ್ರದಾನ ಮಾಡಲಾಯಿತು –ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮಿಗಳಾದ ರಾಮಕೃಷ್ಣ ಹೆಬ್ಬಾರ್, ಆರ್.ಮುರಳೀಧರನ್, ಜಿ.ಜಿ.ರಾಘವನ್ ಅವರಿಗೆ ‘ಸಹಕಾರ ಮಿತ್ರ’ ಪ್ರಶಸ್ತಿ ಪ್ರದಾನ ಮಾಡಲಾಯಿತು –ಪ್ರಜಾವಾಣಿ ಚಿತ್ರ   

ಮೈಸೂರು: ‘ಉತ್ತಮ ನಾಯಕತ್ವ ಮತ್ತು ಜನರ ಸಹಭಾಗಿತ್ವದಿಂದ ಸಹಕಾರ ಸಂಘದ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಿರಿಯ ಹೋಟೆಲ್ ಉದ್ಯಮಿಗಳಿಗೆ ‘ಸಹಕಾರ ಮಿತ್ರ’ ಪ್ರಶಸ್ತಿ‌ ಪ್ರದಾನ ಮಾಡಿ ಅವರು ಮಾತನಾಡಿದರು.

‘ಸಹಕಾರ ಸಂಘಗಳು ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಘಟಕವಾಗಿದ್ದು, ಸದಸ್ಯರ ಭವಿಷ್ಯವನ್ನು ಉಜ್ವಲಗೊಳಿಸುತ್ತವೆ. ಹೋಟೆಲ್ ಉದ್ಯಮ ಕೂಡ ಇಂಥದ್ದೇ ಉದ್ದೇಶವನ್ನು ಹೊಂದಿರುವ ಕ್ಷೇತ್ರ. ಇಲ್ಲಿಯೂ ಸಾಮಾಜಿಕ ಕಾಳಜಿ ಇದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಹೋಟೆಲ್ ಉದ್ಯಮ ಜನರ ಜೀವನದ ಅವಿಭಾಜ್ಯ ಅಂಗವಾಗಿದ್ದು ಯಾವತ್ತೂ ಬೆಲೆ ಕಳೆದುಕೊಳ್ಳುವುದಿಲ್ಲ. ಈ ಉದ್ಯಮದಲ್ಲಿ ಯುವಜನರು ಅಗತ್ಯ ಕೌಶಲಗಳೊಂದಿಗೆ ತೊಡಗಿಸಿಕೊಳ್ಳಬೇಕು. ಹೂಡಿಕೆಗೆ ವಾತಾವರಣ ನಿರ್ಮಾಣ, ಯುವ ಉದ್ಯಮಿಗಳ ಅಭಿವೃದ್ಧಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘವೂ ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಉದಾರ ನೀತಿ ಅಗತ್ಯ:

‘ನಗರ ಪಾಲಿಕೆಯ ನಿಯಮಗಳು ಮತ್ತು ತೆರಿಗೆ ನೀತಿಗಳು ಕೆಲವೊಮ್ಮೆ ಹೋಟೆಲ್ ಉದ್ಯಮದ ಅಭಿವೃದ್ಧಿಗೆ ತೊಡಕಾಗುತ್ತವೆ. ಹಾಗಾಗಿ, ಸಣ್ಣ ಉದ್ಯಮಗಳನ್ನು ಪೋಷಿಸುವಂಥ ಉದಾತ್ತ ನೀತಿಯ ಅಗತ್ಯವಿದ್ದು, ಅದಕ್ಕೆ ಸಂಬಂಧಿಸಿದಂತೆ ಎಲ್ಲ ಭಾಗೀದಾರರು ಶ್ರಮ ವಹಿಸಬೇಕು’ ಎಂದರು.

ಅರ್ಕಧಾಮದ ಸ್ಥಾಪಕ‌ ಯೋಗಿ ಶ್ರೀನಿವಾಸ ಅರ್ಕ ಮಾತನಾಡಿ, ‘ಯಾವುದೇ ಕ್ಷೇತ್ರದಲ್ಲಿ ತೊಡಗಿರುವ ವ್ಯಕ್ತಿಗಳ ಸಾಧನೆ ಗುರುತಿಸಿ ಸನ್ಮಾನಿಸುವುದು ಇಡೀ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ. ಇತರರೂ ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ’ ಎಂದು ಹೇಳಿದರು.

ಸೌಲಭ್ಯ ಕಲ್ಪಿಸಬೇಕು: ಸಂಘದ ಅಧ್ಯಕ್ಷ ನಾರಾಯಣ ವಿ.ಹೆಗಡೆ ಮಾತನಾಡಿ, ‘ನಗರ ವ್ಯಾಪ್ತಿಯಲ್ಲಿದ್ದ ಸಂಘವು ತಾಲ್ಲೂಕು ಮಟ್ಟದಲ್ಲೂ ಕಾರ್ಯನಿರ್ವಹಿಸಲು ಸಿದ್ಧವಾಗಿದೆ. ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಜನರ ಬದುಕು ಒಂದಲ್ಲ ಒಂದು ರೀತಿಯಲ್ಲಿ ಹೋಟೆಲ್ ಉದ್ಯಮದೊಂದಿಗೆ ಸಂಪರ್ಕ ಹೊಂದಿದ್ದು, ಸರ್ಕಾರವು ಉತ್ತಮ ಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಹೋಟೆಲ್‌ ಉದ್ಯಮಕ್ಕೆ ಪೂರಕ ನೀತಿ ಅಳವಡಿಕೆ ಉದ್ಯಮಿಗಳಿಗೆ ಪ್ರಶಸ್ತಿ ಪ್ರೋತ್ಸಾಹ ನೀಡಲು ಸರ್ಕಾರ ಮುಂದಾಗಬೇಕು.
ನಾರಾಯಣ ವಿ.ಹೆಗಡೆ, ಅಧ್ಯಕ್ಷ, ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘ ಮೈಸೂರು

ಹೋಟೆಲ್ ಉದ್ಯಮಿಗಳಾದ ರಾಮಕೃಷ್ಣ ಹೆಬ್ಬಾರ್, ಆರ್.ಮುರಳೀಧರನ್, ಜಿ.ಜಿ.ರಾಘವನ್ ಅವರಿಗೆ ‘ಸಹಕಾರ ಮಿತ್ರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ಆನಂದ ಎಂ.ಶೆಟ್ಟಿ, ನಿರ್ದೇಶಕರಾದ ಸಿ.ನಾರಾಯಣಗೌಡ, ವಿ.ಎಸ್.ಶಾಸ್ತ್ರಿ, ಸುಬ್ರಹ್ಮಣ್ಯ ಆರ್. ತಂತ್ರಿ, ಪಿ.ನಾರಾಯಣ ಕುಂದರ್, ಎಂ.ರಘುವೀರ್ ಪುರಾಣಿಕ್, ಕೆ.ಸಿ.ವಿಶ್ವಾನಂದ ಭಟ್, ಎಂ.ಎಸ್.ಜಯಪ್ರಕಾಶ್, ಹೇಮಂತ್ ಕುಮಾರ್, ಸುಮಿತ್ರಾ ಎ.ತಂತ್ರಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.