ADVERTISEMENT

ತನ್ವೀರ್‌ ಸೇಠ್ ಧ್ವನಿ ಕೇಳಿ ಕಣ್ಣೀರಾದ ಬೆಂಬಲಿಗರು!

ಆರೋಪಿಯನ್ನು ಗುರುತಿಸಿ, ಭದ್ರತೆಯಲ್ಲಿ ವಾಪಸ್ಸಾದ ಶಾಸಕ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 10:11 IST
Last Updated 10 ಜನವರಿ 2020, 10:11 IST
ಹಲ್ಲೆ ನಡೆಸಿದ ಆರೋಪಿಯನ್ನು ಗುರುತಿಸಲು ಗುರುವಾರ ಮೈಸೂರಿನ ಜಿಲ್ಲಾ ಕಾರಾಗೃಹಕ್ಕೆ ಬಂದಿದ್ದ ಶಾಸಕ ತನ್ವೀರ್‌ಸೇಠ್‌, ತಮ್ಮನ್ನು ಕಾಣಲು ಬಂದಿದ್ದ ಬೆಂಬಲಿಗರಿಗೆ ವಂದಿಸಿದರು
ಹಲ್ಲೆ ನಡೆಸಿದ ಆರೋಪಿಯನ್ನು ಗುರುತಿಸಲು ಗುರುವಾರ ಮೈಸೂರಿನ ಜಿಲ್ಲಾ ಕಾರಾಗೃಹಕ್ಕೆ ಬಂದಿದ್ದ ಶಾಸಕ ತನ್ವೀರ್‌ಸೇಠ್‌, ತಮ್ಮನ್ನು ಕಾಣಲು ಬಂದಿದ್ದ ಬೆಂಬಲಿಗರಿಗೆ ವಂದಿಸಿದರು   

ಮೈಸೂರು: ತಮ್ಮ ಮೇಲೆ ಹಲ್ಲೆ ನಡೆಸಿದ ಆರೋಪಿಯ ಗುರುತು ಪತ್ತೆಗಾಗಿ, ಇಲ್ಲಿನ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಬಂದಿದ್ದ ಶಾಸಕ ತನ್ವೀರ್‌ಸೇಠ್‌ ಅವರ ಬದಲಾದ ಧ್ವನಿ ಕೇಳಿ ಹಲವು ಅಭಿಮಾನಿಗಳು ಕಣ್ಣೀರಾದರು.

ಹಲ್ಲೆಯಿಂದಾಗಿ ಶಾಸಕರ ಧ್ವನಿಪೆಟ್ಟಿಗೆಗೆ ಬಲವಾದ ಏಟು ಬಿದ್ದಿದ್ದು, ಧ್ವನಿ ಬದಲಾಗಿದೆ. ಯಾವಾಗಲೂ ಗಟ್ಟಿಯಾದ ಧ್ವನಿಯಲ್ಲಿ ಮಾತನಾಡುತ್ತಿದ್ದ ತನ್ವೀರ್‌ ಸೇಠ್ ಅವರು ಇದೀಗ ತೀರಾ ಕಡಿಮೆ ಸ್ವರದಲ್ಲಿ ಮಾತನಾಡುವಂತಾಗಿದೆ. ಹಲ್ಲೆಯ ನಂತರ ಇವರ ಮಾತನ್ನು ಇದೇ ಮೊದಲ ಬಾರಿಗೆ ಕೇಳಿದ ಅವರ ಹಲವು ಅಭಿಮಾನಿಗಳು ಕಣ್ಣಲ್ಲಿ ನೀರು ತುಂಬಿಕೊಂಡು ಅವರನ್ನು ಅಪ್ಪಿಕೊಂಡರು.

ಈ ಬಗ್ಗೆ ಪ್ರತಿಕ್ರಿಯಿಸಿದ ತನ್ವೀರ್‌ ಸೇಠ್‌, ‘ನನ್ನ ಧ್ವನಿಪೆಟ್ಟಿಗೆಗೆ ಇನ್ನೂ ಮೂರು ತಿಂಗಳ ಕಾಲದ ಚಿಕಿತ್ಸೆಯ ಅಗತ್ಯ ಇದೆ. ಇಂತಹ ಪರಿಸ್ಥಿತಿ ಯಾವ ಜನಪ್ರತಿನಿಧಿಗೂ ಬರಬಾರದು. ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಭದ್ರತೆ ಮುಖ್ಯ. ಇಂತಹ ಘಟನೆ ಮರುಕಳಿಸಬಾರದು’ ಎಂದರು.

ADVERTISEMENT

ಜೈಲಿನಲ್ಲಿ ಆರೋಪಿಯನ್ನು ಗುರುತಿಸಿದ ಅವರು, ನಂತರ ತಮ್ಮ ಮನೆಯತ್ತ ಬಿಗಿಭದ್ರತೆಯಲ್ಲಿ ತೆರಳಿದರು.

ಪ್ರಕರಣದ ದೂರುದಾರ ಮಹಮ್ಮದ್ ಮುಮ್ತಾಜ್ ಪ್ರತಿಕ್ರಿಯಿಸಿ, ‘ಆರೋಪಿಗೆ ಗಡ್ಡ ಬಂದಿರುವುದು ಬಿಟ್ಟರೆ ಬೇರೆ ಯಾವುದೇ ವ್ಯತ್ಯಾಸ ಆಗಿಲ್ಲ. ನಾನೂ ಸೇರಿದಂತೆ, ಹಲ್ಲೆ ನಡೆದಾಗ ಸ್ಥಳದಲ್ಲಿದ್ದ ಎಲ್ಲರೂ ಆರೋಪಿಯನ್ನು ಗುರುತಿಸಿದ್ದೇವೆ’ ಎಂದು ತಿಳಿಸಿದರು.

ಕಳೆದ ವರ್ಷ ನ. 17ರಂದು ರಾತ್ರಿ ಇಲ್ಲಿನ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ತನ್ವೀರ್‌ಸೇಠ್ ಅವರ ಮೇಲೆ ಫರ್ಹಾನ್ ಪಾಷಾ ಎಂಬಾತ ಕತ್ತಿಯಿಂದ ಇರಿದು ಹತ್ಯೆಗೆ ಯತ್ನಿಸಿದ್ದ. ಈ ವೇಳೆ ಸಾರ್ವಜನಿಕರು ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.