
ಮೈಸೂರು: ‘ಕಳೆಗಳ ಜೊತೆಗೆ ರೈತರು ಯುದ್ಧ ಮಾಡುತ್ತಿದ್ದಾರೆ. ಆದರೆ, ಅವು ಶತ್ರುವಲ್ಲ; ಇಳುವರಿ ಹೆಚ್ಚಿಸುವ ಮಣ್ಣಿನ ವೈದ್ಯರು’ ಎಂದು ನೈಸರ್ಗಿಕ ಕೃಷಿಕ ಸುಭಾಷ್ ಶರ್ಮಾ ಪ್ರತಿಪಾದಿಸಿದರು.
ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ‘ಆಶಾ (ಅಲಯನ್ಸ್ ಫಾರ್ ಸಸ್ಟೈನಬಲ್ ಆ್ಯಂಡ್ ಹೋಲಿಸ್ಟಿಕ್ ಅಗ್ರಿಕಲ್ಚರ್) ಕಿಸಾನ್ ಸ್ವರಾಜ್’ ಸಂಸ್ಥೆ ಆಯೋಜಿಸಿರುವ ರಾಷ್ಟ್ರಮಟ್ಟದ ‘ಕಿಸಾನ್ ಸ್ವರಾಜ್ ಸಮ್ಮೇಳನ’ 2ನೇ ದಿನವಾದ ಶನಿವಾರ, ‘ಭಾರತದಲ್ಲಿ ಕಳೆನಾಶಕ ಸಹಿಷ್ಣು ಬೆಳೆಗಳಿಂದ ಎದುರಾದ ಆತಂಕಗಳು’ ಸಂವಾದದಲ್ಲಿ ‘ಕಳೆ ನಿರ್ವಹಣೆ ಬಗ್ಗೆ ಯಶಸ್ವಿ ಕೃಷಿಕನ ದೃಷ್ಟಿಕೋನ ಮತ್ತು ಅನುಭವಗಳು’ ಕುರಿತು ವಿಚಾರ ಮಂಡಿಸಿದರು.
‘ಪ್ರತಿಯೊಂದು ಸಸ್ಯ, ಜೀವಿಗೂ ಉದ್ದೇಶವಿರುತ್ತದೆ. ಪ್ರಕೃತಿಗೆ ಯಾವುದೂ ತ್ಯಾಜ್ಯವಲ್ಲ. ರೈತರು ಕಳೆಗಳ ಜೊತೆ ಜಗಳ ಆಡದೇ ಅವನ್ನು ನಿರ್ವಹಣೆ ಮಾಡುವ ಕೌಶಲ ಸಿದ್ಧಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಕಳೆಗಳನ್ನು ಕತ್ತರಿಸಿ ಅಲ್ಲಿಯೇ ಬಿಟ್ಟರೇ ಮಣ್ಣಿನ ಸಾರವನ್ನು ಹೆಚ್ಚಿಸುತ್ತವೆ. ಮಣ್ಣಿನಲ್ಲಿ ಸಾವಯವ, ಇಂಗಾಲದ ಅಂಶ ಹೆಚ್ಚುತ್ತದೆ. ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ದ್ವಿಗುಣವಾಗುತ್ತದೆ. ಬಿಸಿಲಿನ ಹೊಡೆತಕ್ಕೆ ಮಣ್ಣಿನ ತೇವಾಂಶ ಆರಿಹೋಗದಂತೆ ರಕ್ಷಿಸುವ ಕಳೆಗಳು ನೈಸರ್ಗಿಕ ಹೊದಿಕೆಯಾಗಿ ಮಣ್ಣಿನ ಕೋಟ್ಯಾಂತರ ಜೀವಿಗಳನ್ನು ಕಾಪಾಡುತ್ತವೆ’ ಎಂದರು.
‘ಮಣ್ಣಿನಲ್ಲಿ ಏನಾದರೂ ತೊಂದರೆಯಿದ್ದರೆ ಅದನ್ನು ಕಳೆಗಳು ತೋರ್ಗೊಡುತ್ತವೆ. ಕಳೆನಾಶಕಗಳನ್ನು ಬಳಸಿ ಅವುಗಳನ್ನು ನಾಶ ಮಾಡಿ ಕೃಷಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕೆಲಸದಲ್ಲಿ ನಿರತರಾಗಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸುಸ್ಥಿರ ಕೃಷಿ ಕೇಂದ್ರದ ಜಿ.ವಿ.ರಾಮಾಂಜನೇಯಲು, ‘ಕಳೆಯನ್ನು ನೈಸರ್ಗಿಕವಾಗಿ ನಿರ್ವಹಣೆ ಮಾಡಿದರೆ ಕಳೆನಾಶಕಗಳಿಗೆ ವೆಚ್ಚಮಾಡುವ ಶೇ 40ರಿಂದ 70ರಷ್ಟು ಹಣ ಉಳಿಸಬಹುದು. ಅದನ್ನು ಕೃಷಿ ಕಾರ್ಮಿಕರಿಗೆ ನೀಡಬಹುದು’ ಎಂದರು.
‘ಪೋಷಕಾಂಶ, ಬೆಳಕು ಹಾಗೂ ನೀರನ್ನು ಬಳಸಿಕೊಂಡು ಕಳೆಗಳು ಬೆಳೆಯುತ್ತವೆ. ಅವುಗಳನ್ನು ನಾಶಕ್ಕೆ ರಾಸಾಯನಿಕಗಳನ್ನು ಬಳಸಿದರೆ ಮಣ್ಣಿನ ಜೀವಸಾರ ನಾಶಗೊಳ್ಳುತ್ತದೆ. ಕಳೆಗಳು ಬೆಳೆಯನ್ನು ಸುತ್ತುವರಿವ ಮುಂಚೆಯೇ ನೈಸರ್ಗಿಕ ವಿಧಾನದಿಂದ ತೆಗೆಯುವ ಕೆಲಸ ಮಾಡಬೇಕು. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಬಳಸಬೇಕು’ ಎಂದು ಸಲಹೆ ನೀಡಿದರು.
ಸೌಮಿಕ್ ಬ್ಯಾನರ್ಜಿ ಮಾತನಾಡಿ, ‘ಕಳೆನಾಶಕಗಳು ರೈತರಿಗೆ ದುಬಾರಿಯಷ್ಟೇ ಅಲ್ಲ. ಆರೋಗ್ಯವನ್ನೂ ಹಾನಿಗೊಳಿಸುತ್ತವೆ. ಬೆಳೆ ನಷ್ಟವಾದಾಗ ಕಳೆ– ಕೀಟನಾಶಕಗಳು ರೈತರ ಆತ್ಮಹತ್ಯೆಯ ದಾರಿಗಳಾಗಿವೆ’ ಎಂದು ಹೇಳಿದರು.
‘ಇಳುವರಿ ಹೆಚ್ಚಿಸಲು ಕುಲಾಂತರಿ ಸಾಸಿವೆ, ಹತ್ತಿ, ಮೆಕ್ಕೆಜೋಳ, ಸೊಯಾಬೀನ್ ಬೀಜಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಮಣ್ಣಿನ ಫಲವತ್ತತೆಯನ್ನು ಹಾಳು ಮಾಡುವುದಲ್ಲದೇ ಹೆಚ್ಚಿನ ರಾಸಾಯನಿಕ ಗೊಬ್ಬರವನ್ನು ಬೇಡುವ ಇವು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
ಇದೇ ವೇಳೆ ಮಣ್ಣಿನ ಆರೋಗ್ಯ ಮತ್ತು ಕೃಷಿ ಮಾಹಿತಿಯ ‘ಮಣ್ಣಿನ ದಿನದರ್ಶಿಕೆ’ಯನ್ನು ಬಿಡುಗಡೆ ಮಾಡಲಾಯಿತು. ಸಹಜ ಸಮೃದ್ಧ ಸಂಸ್ಥೆಯ ಕೃಷ್ಣಪ್ರಸಾದ್, ಸಮ್ಮೇಳನದ ಸಂಚಾಲಕಿ ಕವಿತಾ ಕುರುಗಂಟಿ, ಮಹಿಳಾ ಅಧಿಕಾರ ಮಂಚ್‌ನ ಕವಿತಾ ಶ್ರೀನಿವಾಸನ್, ರಾಮು ಪಾಲ್ಗೊಂಡಿದ್ದರು.
ಕಳೆನಾಶಕಗಳು ರೈತರಿಗೆ ದುಬಾರಿ ಜನರ ಆರೋಗ್ಯ ಹಾನಿಗೊಳಿಸುತ್ತವೆ ಬೆಳೆ ನಷ್ಟವಾದಾಗ ಆತ್ಮಹತ್ಯೆಯ ದಾರಿ
‘ಕಳೆ ಎಂಬ ಸೊಪ್ಪಿನ ಲೋಕ’
‘ಕಳೆಗಳನ್ನು ಆಹಾರೆವೆಂದು ಗುರುತಿಸುವ ಕೆಲಸ ಮಾಡಬೇಕು. ಸೊಪ್ಪಿನ ಲೋಕವನ್ನು ಅರಿಯಬೇಕು’ ಎಂದು ಕೃಷಿಕ ಮುರಳೀಧರ ಗುಂಗುರುಮಳೆ ಹೇಳಿದರು. ‘ಉಪಯುಕ್ತ ಸಸ್ಯಗಳಾಗಿ ಕಳೆಗಳು’ ಕುರಿತು ಮಾತನಾಡಿ ‘350ರಿಂದ 400 ತಿನ್ನುವ ಸೊಪ್ಪು ಸಿಗುತ್ತವೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ನಾಲ್ಕೈದು ಸೊಪ್ಪು ಮಾತ್ರ ನೆನಪಿದೆ. ದುಡ್ಡಿದ್ದವರು ದೊಡ್ಡವರಲ್ಲ. ನಿತ್ಯ ಸೊಪ್ಪು ಸೇವಿಸಿ ಆರೋಗ್ಯ ಕಾಪಾಡಿಕೊಂಡವರು ದೊಡ್ಡವರು’ ಎಂದರು. ‘ಪೋಷಕಾಂಶ ಮತ್ತು ಔಷಧೀಯ ಗುಣಗಳಿಂದ ಸಮೃದ್ಧವಾದ ಸೊಪ್ಪುಗಳಿವೆ. ಬೇಸಿಗೆ ಚಳಿ ಹಾಗೂ ಮಳೆಗಾಲದ ಅಗತ್ಯಗಳಿಗೆ ತಕ್ಕಂತೆ ಸೊಪ್ಪು ಸಿಗುತ್ತದೆ. ಮಲೆನಾಡು ಬಯಲು ಸೀಮೆ ಕರಾವಳಿಯಲ್ಲಿ ವಿವಿಧ ಬಗೆಯ ಸೊಪ್ಪುಗಳಿವೆ. ಮಳೆ ಬಾರದಿದ್ದರೂ ಬೆಳೆಯುವ ಗುಣವನ್ನು ಕಳೆ ಅರ್ಥಾಥ್ ಸೊಪ್ಪು ಹೊಂದಿವೆ’ ಎಂದರು. ‘ನಾರಿನಿಂದ ಸಮೃದ್ಧವಾಗಿರುವ ಸೊಪ್ಪು ಸೇವಿಸುವುದರಿಂದ ಮಲಬದ್ಧತೆ ಮಧುಮೇಹ ರಕ್ತಹೀನತೆ ಅಪೌಷ್ಟಿಕತೆ ಮತ್ತು ಇತರ ಕಾಯಿಲೆಗಳು ಗುಣವಾಗುತ್ತವೆ. ಹಿಂದೆ ಮಳೆ ಇಲ್ಲದಿದ್ದರೂ ಉಳುಮೆ ಮಾಡಿ ರಾಗಿ ಬೆಳೆಯುತ್ತಿದ್ದರು. ಅದರಲ್ಲಿ ಶೇ 60-70ರಷ್ಟು ಕಳೆಗಳನ್ನು ನಿರ್ವಹಣೆ ಮಾಡುತ್ತಿದ್ದರು. ಜೊತೆಗೆ ಅದೇ ಕಳೆ ಗೊಬ್ಬರವಾಗುತ್ತಿತ್ತು’ ಎಂದರು.
‘ಬೆಳೆ ನಷ್ಟ ಪರಿಹಾರ; ಹೋರಾಟ ಅಗತ್ಯ
‘ವನ್ಯಜೀವಿ ಸಂಘರ್ಷ– ಬೆಳೆ ನಷ್ಟ ಪರಿಹಾರಕ್ಕೆ ಸಾವಿರಾರು ಕೋಟಿ ನೀಡಲಾಗುತ್ತದೆ. ಆದರೆ ರೈತರಿಗೆ ಸಿಗುತ್ತಿಲ್ಲ. ಹೀಗಾಗಿ ಸಂಕೀರ್ಣ ಹೋರಾಟ ನಡೆಸಬೇಕು’ ಎಂದು ‘ಆಶಾ’ ಸಂಘಟಕ ಶ್ರೀಧರ್ ರಾಧಾಕೃಷ್ಣನ್ ಹೇಳಿದರು. ‘2019ರಿಂದ 2024ರ ಅವಧಿಯಲ್ಲಿ 2869 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. 2023–24ರ ಅವಧಿಯಲ್ಲಿ ರಾಜ್ಯದಲ್ಲಿ 91 ಆನೆಗಳು ಸಾವನ್ನಪ್ಪಿವೆ. ಅಂಕಿ– ಅಂಶಕ್ಕೆ ಸಿಗದ ಸಂಕಷ್ಟಗಳಿವೆ. ನ್ಯಾಯಕ್ಕಾಗಿ ಗ್ರಾಮ ಮಟ್ಟದಿಂದಲೇ ಹೋರಾಟ ನಡೆಸಬೇಕು’ ಎಂದರು. ‘ಹಾನಿ ತಡೆಯಲು ಸಮಗ್ರ ಯೋಜನೆ ಅಳವಡಿಸಿಕೊಳ್ಳಬೇಕು. ರಾಜ್ಯ ಸರ್ಕಾರ ಪಂಚಾಯಿತಿ ಎನ್‌ಜಿಎ ಸಮುದಾಯಗಳ ನಡುವೆ ಸೇತುವೆ ಏರ್ಪಡಿಸಬೇಕು’ ಎಂದು ಸಲಹೆ ನೀಡಿದರು. ಕೃಷಿ ತಜ್ಞೆ ಮಾಳವಿಕ ಸೋಲಂಕಿ ‘ಹೊಲಗಳಲ್ಲಿ ಮರಗಳನ್ನು ಬೆಳೆಸುವ ಮೂಲಕ ಆದಾಯ ಪಡೆಯಬೇಕು. ಬಹುಬೆಳೆ ಪದ್ಧತಿ ಅಳವಡಿಸಬೇಕು. ರಾಗಿ– ಜೋಳ ಬದಲು ಹುರುಳಿ ಉಚ್ಚೆಳ್ಳು ಸೇರಿದಂತೆ ಬಹುಬೆಳೆ ಬೆಳೆದರೆ ಲಾಭವಿದೆ. ಸೋಲಾರ್ ಫೆನ್ಸಿಂಗ್ ನಿರ್ವಹಣೆಯನ್ನು ಬೇರೆಯವರನ್ನು ಅವಲಂಬಿಸಿದೇ ರೈತರೇ ಕಲಿತುಕೊಳ್ಳಬೇಕು’ ಎಂದರು. ‘ವನ್ಯಪ್ರಾಣಿಗಳ ನಡುವೆ ಸಹಬಾಳ್ವೆಯನ್ನೇ ಕಾಡಂಚಿನ ರೈತರು ನಡೆಸಿದ್ದಾರೆ. ನಷ್ಟವನ್ನೂ ಅನುಭವಿಸಿದ್ದಾರೆ. ಪರಿಹಾರ ಸಿಗಲು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು’ ಎಂದು ಹೇಳಿದರು. ವನ್ಯಜೀವಿ ಸಂರಕ್ಷಣಾ ವಿಜ್ಞಾನಿ ಎಂ.ಡಿ.ಮಧುಸೂದನ್ ‘ಸಂಘರ್ಷವು ಸಂಕೀರ್ಣವಾದ ಬಿಕ್ಕಟ್ಟಾಗಿದೆ. ಅದನ್ನು ಬಗೆಹರಿಸಲು ಸ್ಪಷ್ಟವಾದ ನೀತಿ ಬೇಕು. ಅದು ರೈತ– ವನ್ಯಜೀವಿಯ ಪರವಾಗಿಯೂ ಇರಬೇಕು. ವೈರಿಗಳೆಂದು ನೋಡದೇ ಸಮಾನವಾಗಿ ಪರಿಶೀಲಿಸಿ ಸರ್ಕಾರವು ಸಮಗ್ರವಾದ ನೀತಿ ರೂಪಿಸಬೇಕು. ಸಮುದಾಯ ಹಾಗೂ ಪಂಚಾಯಿತಿಗಳು ಅದಕ್ಕೆ ಒತ್ತಡ ಹೇರಬೇಕು’ ಎಂದು ಸಲಹೆ ನೀಡಿದರು. ರೈತರಾದ ಮುಳಬಾಗಿಲಿನ ಪಾಪಮ್ಮ ಹರಿಹರದ ಆಂಜನೇಯ ಲಕ್ಷ್ಮಮ್ಮ ಕುಂದಗೋಳದ ಈಶ್ವರಗೌಡ ಅಭಿಪ್ರಾಯ ಹಂಚಿಕೊಂಡರು.
‘ಪ್ರಕೃತಿ ಭಾಷೆ ಅರ್ಥ ಮಾಡಿಕೊಳ್ಳಿ
‘ನೆಲದ ಭಾಷೆಯನ್ನು ರೈತರು ಕೃಷಿಕರು ಅರ್ಥ ಮಾಡಿಕೊಳ್ಳಬೇಕು’ ಎಂದು ಕೃಷಿ ತಜ್ಞೆ ಜೂಲಿ ಕಾರಿಯಪ‍್ಪ ಹೇಳಿದರು. ಅನುಭವ ಹಂಚಿಕೊಂಡ ಅವರು ‘ಬಿತ್ತನೆ ಬೀಜದ ಬೆಳವಣಿಗೆಯು ಮಳೆ ಬಿಸಿಲಷ್ಟೇ ಅಲ್ಲ. ಚಂದ್ರನ ಗುರುತ್ವಾಕರ್ಷಣೆಯನ್ನೂ ಅವಲಂಬಿಸಿದೆ. ಸಮುದ್ರದಲ್ಲಿ ಉಬ್ಬರವಿಳಿತ ಇರುವಂತೆಯೇ ಬೀಜದ ಬೆಳವಣಿಗೆ ಮೇಲೂ ಹುಣ್ಣಿಮೆಯು ಪರಿಣಾಮ ಬೀರುತ್ತದೆ. ಅಮಾವಾಸ್ಯೆ ನಂತರದ 7 ದಿನದಲ್ಲಿ ಬೀಜದ ಬೆಳವಣಿಗೆ ವೇಗವಾಗಿರುತ್ತದೆ. ಬೇರುಗಳು ಬೆಳೆಯಲು ಅನುಕೂಲವಾಗುತ್ತದೆ’ ಎಂದರು. ‘ಪ್ರಕೃತಿಯ ಪಾಠಗಳನ್ನು ಕಲಿಯಬೇಕು. ಜಗತ್ತಿನ ಒಂದು ಕಣವಾಗಿ ಖಗೋಳದ ಶಕ್ತಿಯ ಭಾಗವಾಗಿರುವ ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು. ಹಿರಿಯರು ಯಾವ ಮಳೆಗೆ ಯಾವ ಬೆಳೆ ಬೆಳೆಯಬೇಕು ಎಂಬೆಲ್ಲ ಪ್ರಕೃತಿ ಭಾಷೆಯನ್ನು ಕಲಿತಿದ್ದರು’ ಎಂದು ಸ್ಮರಿಸಿದರು. ಹರ್ಷಿತಾ ನಿಮ್ಮಿ ಪಾಲ್ಗೊಂಡಿದ್ದರು.
ಬಹು ಕಥನದ ಚಿತ್ರೋತ್ಸವ
ನಳ ಸಭಾಂಗಣದಲ್ಲಿ ನಡೆದ ಚಿತ್ರೋತ್ಸವದಲ್ಲಿ ‘ಇಂಡಸ್ಟ್ರಿಯಲ್ ಸ್ಕ್ಯಾಂಡಲ್– ವೈ ಹ್ಯಾಸ್ ಇನ್ನರ್ ನ್ಯೂಟ್ರಿಷಿಯನ್ ಗಾನ್‌ಡೌನ್ ಇನ್ ಅವರ್ ವೆಜಿಟೆಬಲ್ಸ್’ ‘ಸೀಡ್ಸ್ ಆಫ್ ಫ್ರೀಡಂ’ ‘ಟಿಂಬಕ್‌ಟು’ ‘ಪೆಸ್ಟಿಸೈಡ್ ಸೂಸೈಡ್ ಪ್ರಿವೆನ್ಶನ್ ಸೊಸೈಟಿ’ ‘ಎಟಿಎಂ ಮನಿ’ ಚಿತ್ರಗಳು ಬಹುಕಥನವನ್ನು ತೆರೆದಿಟ್ಟವು. ‘ಸೀಡ್ಸ್ ಆಫ್ ಫ್ರೀಡಂ’ ಚಿತ್ರವು ಏಷ್ಯಾ ಮತ್ತು ಆಫ್ರಿಕಾದಲ್ಲಿ ರೈತರ ಗುಂಪುಗಳು ಬಂಡವಾಳಶಾಹಿಗಳ ಬೀಜ ಏಕಸಾಮ್ಯವನ್ನು ಹೇಗೆ ಒಡೆದವೆಂಬುದನ್ನು ಹೇಳಿದರೆ ‘ಟಿಂಬಕ್‌ಟು’ ರೈತ ಬಬ್ಲೂ ಗಂಗೂಲಿ ಅವರು ಏನೂ ಬೆಳೆಯದ ಮಣ್ಣಿನಲ್ಲಿ ಮಾಡಿದ ಕೃಷಿ ಪ್ರಯೋಗಗಳನ್ನು ದರ್ಶಿಸಿತು. ‘ಪೆಸ್ಟಿಸೈಡ್ ಸೂಸೈಡ್ ಪ್ರಿವೆನ್ಶನ್ ಸೊಸೈಟಿ’ ಚಿತ್ರವು ಆಂಧ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡ 3.5 ಲಕ್ಷ ರೈತ ಕುಟುಂಬಗಳಿಗೆ ಸಾವಯವ ಕೃಷಿ ಪ್ರೀತಿಯ ನೆರವನ್ನು ತೋರಿಸಿಕೊಟ್ಟಿತು.
ಸಮ್ಮೇಳನದಲ್ಲಿ ಇಂದು ಘಟಿಕೋತ್ಸವ ಸಭಾಂಗಣ: ರೈತ– ವನ್ಯಜೀವಿ ಸಂಘರ್ಷ ಶಮನ– ಎಂ.ಡಿ.ಮಧುಸೂದನ ವಿಷ್ಣುದಾಸ್ ಮಾಳವಿಕಾ ಸೋಲಂಕಿ ವಿಪಿನ್ ಚೌಧರಿ ಟಿ.ವಿಜಯಕುಮಾರ್. ಬೆಳಿಗ್ಗೆ 9. ವಿಶೇಷ ಅಧಿವೇಶನ– ಆಂಧ್ರಪ್ರದೇಶ ಸಮುದಾಯ ನೈಸರ್ಗಿಕ ಕೃಷಿ– ಟಿ.ವಿಜಯಕುಮಾರ್. ಬೆಳಿಗ್ಗೆ 10.30. ಸಮಾರೋಪ– ಶೌರಿ ದೇವಸೇನಾಪತಿ ಲೇಖಕ ಪಾಮಯನ್ ಜೂಲಿ ಕಾರಿಯಪ್ಪ ರವಿ ಕನ್ನೆಗಂಟಿ. ಮಧ್ಯಾಹ್ನ 2 ವಿಜ್ಞಾನ ಭವನ ಕೊಠಡಿಗಳು: ಬೀಜ ಸಾರ್ವಭೌಮತ್ವ ಕಳೆನಾಶ ಸಹಿಷ್ಣು ಬೆಳೆಗಳು ರೈತ ವನ್ಯಜೀವಿ ಸಂಘರ್ಷ ಪರಿಹಾರ ಕೃಷಿಯಲ್ಲಿ ಕಾರ್ಮಿಕರು ಏಕಕಾಲಕ್ಕೆ ಅನುವಾದಗಳು ಸಾವಯವ ಮಾರುಕಟ್ಟೆ. ಬೆಳಿಗ್ಗೆ 11.45ರಿಂದ ಮಧ್ಯಾಹ್ನ 1 ನಳ ಸಭಾಂಗಣ: ಚಲನಚಿತ್ರ ಸಾಕ್ಷ್ಯಾಚಿತ್ರ ಪ್ರದರ್ಶನ. ಬೆಳಿಗ್ಗೆ 11ರಿಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.