ADVERTISEMENT

ನಂಜನಗೂಡು | ಸುತ್ತೂರು ಜಾತ್ರೆ ಎಲ್ಲ ವರ್ಗಗಳ ಜನರ ಜಾತ್ರೆ: ನರೇಂದ್ರ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 18:48 IST
Last Updated 17 ಜನವರಿ 2026, 18:48 IST
   

ನಂಜನಗೂಡು (ಮೈಸೂರು ಜಿಲ್ಲೆ): ‘ಗ್ರಾಮೀಣ ಭಾಗದಲ್ಲಿ ನಮ್ಮ ಕಲೆ, ಸಂಸ್ಕೃತಿ ನಶಿಸಿಹೋಗುತ್ತಿರುವ ಕಾಲಘಟ್ಟದಲ್ಲಿ ಸುತ್ತೂರು ಜಾತ್ರೆಯು ಎಲ್ಲ ವರ್ಗಗಳ ಜನರನ್ನು ಒಳ್ಳಗೊಳ್ಳುವ, ನಮ್ಮ ನಾಡಿನ ಜನಪದ, ಕಲೆ, ಸಂಸ್ಕೃತಿಯನ್ನು ಬೆಳೆಸುವ ಜಾತ್ರೆಯಾಗಿದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಹೇಳಿದರು.

ತಾಲ್ಲೂಕಿನ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಶನಿವಾರ ಚಿತ್ರಕಲೆ, ಗಾಳಿಪಟ ಹಾಗೂ ದನಗಳ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸುತ್ತೂರು ಶ್ರೀಗಳು ಎಲ್ಲ ವರ್ಗಗಳನ್ನು ಸಮನಾಗಿ ಕಾಣುವ ಮಾನವೀಯ ಪರಿಕಲ್ಪನೆಯ ಜವಾಬ್ದಾರಿಯಿಂದಾಗಿ ಎಲ್ಲ ಜಾತೀಯ ಬಡವರ ಸಾಮೂಹಿಕ ವಿವಾಹಗಳನ್ನು ನಡೆಸುವ ಮೂಲಕ ಸಾಮಾಜಿಕ, ಆರ್ಥಿಕ ಬದಲಾವಣೆಗೆ ಕಾರಣರಾಗಿದ್ದಾರೆ. ಪ್ರತಿ ವರ್ಷ ದನಗಳ ಜಾತ್ರೆ ನಡೆಸಿ ನಮ್ಮ ದೇಸಿ ತಳಿಗಳ ಪೋಷಣೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದರು.

ADVERTISEMENT

ಚಲನಚಿತ್ರ ನಟ ಡಾಲಿ ಧನಂಜಯ್ ಮಾತನಾಡಿ, ‘ಸುತ್ತೂರಿಗೆ ಭೇಟಿ ನೀಡುವುದು ಹೆಮ್ಮೆಯ ವಿಚಾರ. ಈ ಸಂಸ್ಥೆಯಲ್ಲಿ ನಾನು ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದೆ. ಜಾತ್ರೆ ಎಲ್ಲರನ್ನೂ ಒಳಗೊಳ್ಳುವುದನ್ನು ಕಲಿಸುತ್ತದೆ. ನನ್ನಲ್ಲಿರುವ ಹೊಂದಿಕೊಳ್ಳುವ ಗುಣಕ್ಕೆ ಮಠಗಳ ಪರಿಸರದಲ್ಲಿ ಬೆಳೆದು ಬಂದದ್ದು ಕಾರಣ’ ಎಂದು ಹೇಳಿದರು.

‘ಜನರನ್ನು ಕೆರಳಿಸುವುದು ಸುಲಭ. ಅದರಿಂದ ಯುವಕರ ಬದುಕು ನಾಶವಾಗುತ್ತದೆ. ನೋಡಿ, ಕೇಳಿದ ಪ್ರತಿಯೊಂದರಲ್ಲೂ ಸತ್ಯಾಂಶವನ್ನು ವಿಮರ್ಶಿಸಬೇಕು. ನಮಗಾಗಿ ಹೊಡೆದಾಡುವ ಅಗತ್ಯವಿಲ್ಲ. ಕೋಪದ ಕೈಗೆ ಬುದ್ಧಿ ಕೊಟ್ಟಾಗ ಬದುಕು ನಾಶವಾಗುತ್ತದೆ. ಯುವಕರು ಬದುಕನ್ನು ಸರಿಯಾಗಿ ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.

ಚಲನಚಿತ್ರ ನಟ ನೀನಾಸಂ ಸತೀಶ್ ಮಾತನಾಡಿ, ‘ನಮ್ಮ ಚಿತ್ರಗಳನ್ನು ನೋಡಿ, ಆಶೀರ್ವದಿಸಿ, ಪ್ರೋತ್ಸಾಹಿಸುವ ಜನರನ್ನು ಈ ರೀತಿ ಸಮಾರಂಭಗಳಲ್ಲಿ ಪ್ರತ್ಯಕ್ಷವಾಗಿ ಕಂಡಾಗ ಖುಷಿಯಾಗುತ್ತದೆ. ಮನುಷ್ಯ ಕುಲ ಒಂದೇ, ಅದೊಂದೇ ಸತ್ಯ, ಸಕಲ ಚರಾಚರಗಳಲ್ಲಿ, ಮಕ್ಕಳಲ್ಲಿ ದೇವರನ್ನು ಕಾಣಬೇಕು’ ಎಂದರು.

‘ದಿ ರೈಸ್ ಆಫ್ ಅಶೋಕ’ ಚಿತ್ರದ ಗೀತೆಯನ್ನು ಹಾಡಿ ರಂಜಿಸಿದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಟ ಎನ್.ಎಸ್.ನಾಗಭೂಷಣ್, ಗಾಯಕ ವಾಸುಕಿ ವೈಭವ್, ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ.ಗೀತಾ, ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ, ಶಾಸಕ ಸಿ.ಕೆ.ರಾಮಮೂರ್ತಿ, ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ದೇವನೂರು ಮಹಾಂತ ಸ್ವಾಮೀಜಿ, ರಬಕವಿಯ ಗುರು ಸಿದ್ದೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.