ADVERTISEMENT

ಸುತ್ತೂರು ಜಾತ್ರಾ ಮಹೋತ್ಸವ: ಸಂವಿಧಾನ–ಶರಣರ ವಿಚಾರಗಳಲ್ಲಿ ಸಾಮ್ಯತೆ; ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 13:20 IST
Last Updated 31 ಜನವರಿ 2025, 13:20 IST
<div class="paragraphs"><p>ಸುತ್ತೂರು ಜಾತ್ರಾ ಮಹೋತ್ಸವ</p></div>

ಸುತ್ತೂರು ಜಾತ್ರಾ ಮಹೋತ್ಸವ

   

ಸುತ್ತೂರು (ಮೈಸೂರು ಜಿಲ್ಲೆ): ‘ಸಂವಿಧಾನ ಹಾಗೂ ಬಸವಾದಿ ಶರಣರ ವಿಚಾರಗಳಲ್ಲಿ ಸಾಮ್ಯತೆ ಇದ್ದು, ನಾವು ಮತ್ತು ಸರ್ಕಾರಗಳು ಅವುಗಳನ್ನು ಪಾಲಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿ ಸುತ್ತೂರು ಮಠದಿಂದ ಶುಕ್ರವಾರ ಆಯೋಜಿಸಿದ್ದ ‘ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

‘ಮೂಢನಂಬಿಕೆ ಹಾಗೂ ಗೊಡ್ಡು ಸಂಪ್ರದಾಯಗಳನ್ನು ಬಿಡಬೇಕು. ಆಗ ಮಾತ್ರ ಪರಿವರ್ತನೆ ಸಾಧ್ಯ’ ಎಂದು ತಿಳಿಸಿದರು.

‘ಬಸವಣ್ಣನವರ ಆಶಯಗಳೆಲ್ಲಾ ನಮ್ಮ ಸಂವಿಧಾನದಲ್ಲಿ ಅಡಕವಾಗಿವೆ. ಇದನ್ನು ಇಡೀ ಸಮಾಜ ಅರಿಯಬೇಕು. ಜಾತ್ಯತೀತ ಸಮಾಜ ನಿರ್ಮಾಣ ಸಂವಿಧಾನದ ಮೂಲ ಉದ್ದೇಶ. ಬಸವಾದಿ ಶರಣರ ಆಶಯವೂ ಆಗಿದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಬಸವಣ್ಣನವರ ಆಶಯದಂತೆ ಜಾತಿ, ಧರ್ಮದ ಹೆಸರಿನ ಮನುಷ್ಯ ತಾರತಮ್ಯ ಹಾಗೂ ಮೌಢ್ಯಗಳನ್ನು ತೊರೆಯಬೇಕು’ ಎಂದು ಕರೆ ನೀಡಿದರು.

ಬಸವಣ್ಣನವರ ಅಪ್ಪಟ ಹಿಂಬಾಲಕ:

‘ನಮಗೆ ರಾಜಕೀಯ ಸಿಕ್ಕದೆಯೇ ಹೊರತು ಸ್ವಾತಂತ್ರ್ಯ ಆರ್ಥಿಕ ಹಾಗೂ ಸಾಮಾಜಿಕವಾಗಿ ದೊರೆತಿಲ್ಲ. ಇದು ಸಿಗದ ಹೊರತು ಸ್ವಾತಂತ್ರ್ಯದ ಆಶಯ ಪೂರ್ಣಗೊಳ್ಳುವುದಿಲ್ಲ ಎಂಬ ಮಾತನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಜಾರಿ ಸಭೆಯಲ್ಲೇ ಹೇಳಿದ್ದರು. ಅವರ ಮಾತು ಇಂದಿಗೂ ಸತ್ಯ. ಈಗಲೂ ನಾವು ಜಾತಿ ಕೇಳುವುದನ್ನು ನಿಲ್ಲಿಸಿಲ್ಲ, ಜಾತಿ– ಧರ್ಮದ ಅನಿಷ್ಠ ತಾರತಮ್ಯವನ್ನು ಇವತ್ತಿಗೂ ಕಾಣುತ್ತಿದ್ದೇವೆ’ ಎಂದು ವಿಷಾದ ವ್ಯಕ್ತ‍ಪಡಿಸಿದರು.

‘ನಾನು ವೈಯುಕ್ತಿಕವಾಗಿ ಬಸವಣ್ಣನವರ ಅಪ್ಪಟ ಹಿಂಬಾಲಕ. ಅವರ ವಿಚಾರಗಳಿಂದ ಪ್ರಭಾವಿತನಾಗಿದ್ದೇನೆ. ಅದಕ್ಕಾಗಿಯೇ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೊ ಹಾಕುವುದನ್ನು ಕಡ್ಡಾಯಗೊಳಿಸಿದೆ’ ಎಂದು ತಿಳಿಸಿದರು.

‘ನಮ್ಮದು ಕೃಷಿ ಪ್ರಧಾನ ಹಾಗೂ ಗುಡಿ ಕೈಗಾರಿಕೆಗಳಿಂದ ಕೂಡಿದ ದೇಶ. ಕೃಷಿ ಹಾಗೂ ಕೈಗಾರಿಕೆ ಬೆಳವಣಿಗೆಯಾದರೆ ನಾಡು ಅಭಿವೃದ್ಧಿ ಆಗುತ್ತದೆ’ ಎಂದರು.

ಕಲೆಗಳಿಗೆ ಸುತ್ತೂರು ಮಠದ ಪ್ರೋತ್ಸಾಹ:

‘ಅವಿಭಜಿತ ಮೈಸೂರು ಜಿಲ್ಲೆ ಜಾನಪದದ ತವರು. ಬಹಳಷ್ಟು ‌ಕಲಾಪ್ರಾಕಾರ‌ ಇಲ್ಲಿವೆ. ಹೀಗಾಗಿಯೇ ಇದನ್ನು ಸಾಂಸ್ಕೃತಿಕ ರಾಜಧಾನಿ ಎನ್ನುತ್ತಾರೆ. ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ಸುತ್ತೂರು ಮಠ ಕೊಡುತ್ತಿದೆ. ಧರ್ಮ ಪ್ರಚಾರ ಮಾಡುವುದಕ್ಕಷ್ಟೇ ಸೀಮಿತವಾಗದೆ ಶೈಕ್ಷಣಿಕವಾಗಿಯೂ ಬಹಳ ಕೊಡುಗೆ ಕೊಡುತ್ತಿದೆ. ಶಿಕ್ಷಣ ಎಲ್ಲರಿಗೂ ಸಿಗದೇ ಹೋದರೆ ಸಾಮಾಜಿಕ ಬೆಳವಣಿಗೆ ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.

‘ಸಂವಿಧಾನವನ್ನು ಚಾಚೂತಪ್ಪದೇ ಪಾಲಿಸುವುದು ಪ್ರಮುಖ ಜವಾಬ್ದಾರಿ ಎಂಬುದನ್ನು ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಅರಿಯಬೇಕು’ ಎಂದರು.

ಜಾತಿ ವ್ಯವಸ್ಥೆಗೆ ಚಲನೆ ಸಿಗಬೇಕು:

‘ಸಮಾಜದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಗಟ್ಟಿಯಾಗಿ ಬೇರು ಬಿಟ್ಟಿದೆ. ಅದಕ್ಕೆ ಚಲನೆ ಸಿಗಲು ಆರ್ಥಿಕ ಹಾಗೂ ಸಾಮಾಜಿಕ ಸ್ವಾವಲಂಬನೆ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸುತ್ತೂರು ಮಠ ಶಿಕ್ಷಣದ ಮೂಲಕ ಬದಲಾವಣೆ ತರಲು ಪ್ರಯತ್ನಿಸುತ್ತಿದೆ’ ಎಂದು ಶ್ಲಾಘಿಸಿದರು.

‘ಸಮ ಸಮಾಜ ನಿರ್ಮಾಣವಾಗದಿದ್ದರೆ ಶೋಷಣೆ ತಪ್ಪುವುದಿಲ್ಲ. ಬಲಾಢ್ಯರ ಕೈಯಲ್ಲಷ್ಟೆ ಅಧಿಕಾರ ಇರಬಾರದು. ಎಲ್ಲರಿಗೂ ಸಿಗಬೇಕು. ಸಮಾನ ಅವಕಾಶ‌ ಸಿಗದ ಕಾರಣ ಅಸಮಾನತೆಯ ಸಮಾಜ ನಿರ್ಮಾಣವಾಗಿದೆ. ಹಿಂದೆ ಜಾತಿಯಿಂದ ನೋಡಿ ಪ್ರತಿಭೆ, ವ್ಯಕ್ತಿತ್ವ ಅಳೆಯಲಾಗುತ್ತಿತ್ತು. ಅದು ಈಗ ಇರಬಾರದು. ಅವಕಾಶ ಬಳಸಿಕೊಳ್ಳಲು ಎಲ್ಲರೂ ವಿದ್ಯಾವಂತರಾಗಬೇಕು’ ಎಂದು ಆಶಯ ವ್ಯಕ್ತ‍ಪಡಿಸಿದರು.

‘ಜಾತಿ ವ್ಯವಸ್ಥೆ ಇರುವವರೆಗೂ ಸಮಾನತೆ ಬರುವುದಿಲ್ಲ’ ಎಂದರು.

‘ನಮ್ಮ ‘ಭಾಗ್ಯ’ ಹಾಗೂ ‘ಗ್ಯಾರಂಟಿ’ ಯೋಜನೆಗಳು ಕೆಲವರು ಟೀಕಿಸುತ್ತಾರೆ. ನಾವು ಅಕ್ಕಿಯನ್ನು ಉಚಿತವಾಗಿ ಕೊಟ್ಟಿದ್ದಕ್ಕೆ ಯಾರಾದರೂ ಸೋಮಾರಿಗಳಾಗಿದ್ದಾರೆಯೇ? ಜಾತಿ ಹೋಗಬೇಕಾದರೆ ಕೇವಲ ಭಾಷಣದಿಂದ ಆಗಲ್ಲ, ಆ ದಿಕ್ಕಿನಲ್ಲಿ ಹೋಗಬೇಕು. ಗ್ಯಾರಂಟಿ ಜಾರಿಗೊಳಿಸಿದರೆ ಖಜಾನೆ ಖಾಲಿ ಆಗುತ್ತದೆ ಎಂದು ಕೆಲವರು ಹೇಳಿದ್ದರು. ಈಗ ನಮ್ಮಲ್ಲಿ ಖಜಾನೆ ಖಾಲಿ ಆಗಿದೆಯೇ? ದಿವಾಳಿ ಆಗುತ್ತದೆ ಎಂದು ಹೇಳುತ್ತಿದ್ದವರು ಹಾಗೂ ವಿರೋಧ ಮಾಡುತ್ತಿದ್ದ ಗಿರಾಕಿಗಳೇ ಈಗ ನಮ್ಮ ಯೋಜನೆ ಕಾಪಿ ಮಾಡುತ್ತಿದ್ದಾರೆ ’ಎಂದು ಟೀಕಿಸಿದರು.

‘ನಾವು ಗ್ಯಾರಂಟಿ ಅನುಷ್ಠಾನದೊಂದಿಗೆ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತಿದ್ದೇವೆ. ಯಾವುದಾದರೂ ಪಿಂಚಣಿ ಕೊಡುವುದು ನಿಲ್ಲಿಸಿದ್ದೇವೆಯೇ? ನೀರಾವರಿ, ರಸ್ತೆ ನಿರ್ಮಾಣ ಸೇರಿದಂತೆ ಯಾವುದೂ ನಿಂತಿಲ್ಲ’ ಎಂದರು.

ಸಾನ್ನಿಧ್ಯ ವಹಿಸಿದ್ದ ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ, ‘ದೇಶದ ಎಲ್ಲೇ ಸುತ್ತಿದರೂ ಸುತ್ತೂರಿನಲ್ಲಿ ಸಿಗುವಷ್ಟು ಶಾಂತಿ, ಸಮಾಧಾನ, ಖುಷಿ ಸಿಗುವುದಿಲ್ಲ. ಪ್ರಪಂಚದ ಬೇರೆ ಬೇರೆ ಭಾಗದಲ್ಲಿ ಭಾರತೀಯ ಸಂಸ್ಕೃತಿಯನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪಸರಿಸುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಪ್ರಾಮಾಣಿಕ ಹಾಗೂ ಆದರ್ಶವಾದ ಕೆಲಸವನ್ನು ಮಾಡುತ್ತಿದ್ದಾರೆ’ ಎಂದರು.

‘ದೇಶದಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಮಹತ್ವವನ್ನು ಕೊಡಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣವಾಗಬೇಕು. ಹಿಂದೆ, ಜಾತ್ರೆಗೆ ಬಂದರೆ ಪಾತ್ರೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಕಾಲವಿತ್ತು. ಈಗ ಸೇವೆ ಪ್ರೀತಿಯ ಭಾವನೆಗಳನ್ನು ಬೆಳೆಸಿಕೊಂಡು ಹೋಗುತ್ತಿದ್ದಾರೆ’ ಎಂದು ಹೇಳಿದರು.

ಸಣ್ಣ ನೀರಾವರಿ ಸಚಿವ ಎನ್‌.ಎಸ್. ಬೋಸರಾಜು ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕರಾದ ಕೆ.ಹರೀಶ್‌ ಗೌಡ, ದರ್ಶನ್‌ ಧ್ರುವನಾರಾಯಣ, ವೀರೇಂದ್ರ ಪಪ್ಪಿ, ಡಿ.ರವಿಶಂಕರ್, ಎಚ್.ಎಂ. ಗಣೇಶ್‌ಪ್ರಸಾದ್, ಎಸ್‌.ಟಿ. ಸೋಮಶೇಖರ್, ಮಂಜುನಾಥ್‌, ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ಕಾಡಾ ಅಧ್ಯಕ್ಷ ಮರಿಸ್ವಾಮಿ, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.