
ಸುತ್ತೂರು: ಶಿವರಾತ್ರೀಶ್ವರ ಶಿವಯೋಗಿಗಳ ಆರು ದಿನಗಳ ಜಾತ್ರಾ ಮಹೋತ್ಸವಕ್ಕೆ ಗುರುವಾರ ಸಂಭ್ರಮದ ಚಾಲನೆ ದೊರೆತಿದ್ದು, ಮೊದಲ ದಿನದಂದು ಜನ ಜಾತ್ರೆಗೆ ಲಗ್ಗೆ ಇಟ್ಟರು.
‘ ಹತ್ತೂರ ಜಾತ್ರೆಗಿಂತ ಸುತ್ತೂರ ಜಾತ್ರೆ ನೋಡು’ ಎಂಬಂತೆ ಬೆಳಿಗ್ಗೆಯಿಂದಲೇ ಸುತ್ತಲಿನ ಹತ್ತೂರ ಜನರ ಚಿತ್ತ ಜಾತ್ರೆಯತ್ತ ಹರಿದಿತ್ತು. ದೂರದಿಂದಲೂ ಭಕ್ತರು ಬಂದಿದ್ದರು. ಮಧ್ಯಾಹ್ನದ ತರುವಾಯ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಸಂಕ್ರಾಂತಿ ಸಂಭ್ರಮದ ನಡುವೆಯೂ ಜನ ಸುತ್ತೂರಿನತ್ತ ಹೆಜ್ಜೆ ಇಟ್ಟರು. ನೋಟ–ಸುತ್ತಾಟ, ಸುಗ್ಗಿಕಾಲದ ಖರೀದಿಯೂ ಆರಂಭಗೊಂಡಿತು. ಭಜನೆ– ನಾಟಕಗಳು ಜನರನ್ನು ರಂಜಿಸಿದವು.
ಕೃಷಿ ಮೇಳ ಹಾಗೂ ವಸ್ತುಪ್ರದರ್ಶನವು ಗುರುವಾರ ಜನಾಕರ್ಷಣೆಯ ಕೇಂದ್ರವಾಗಿದ್ದವು. ಇದರೊಟ್ಟಿಗೆ ಆರೋಗ್ಯ ತಪಾಸಣಾ ಶಿಬಿರ, ದೋಣಿ ವಿಹಾರ ಸೇರಿದಂತೆ ಹಲವು ಹತ್ತು ಕಾರ್ಯಕ್ರಮಗಳು ಏಕಕಾಲದಲ್ಲಿ ಚಾಲನೆಗೊಂಡವು. ಜಾತ್ರೆಗೆ ಬಂದವರ ಆರೋಗ್ಯ ತಪಾಸಣೆಯೂ ನಡೆಯಿತು.
ಗ್ರಾಮೀಣ ಹಾಗೂ ಶ್ರಮ ಸಂಸ್ಕೃತಿಯನ್ನು ಬಿಂಬಿಸುವ ಕೃಷಿ ಮೇಳಕ್ಕೆ ಜನರು ಬೆಳಿಗ್ಗೆಯಿಂದಲೇ ಭೇಟಿ ಕೊಟ್ಟರು. ವಿವಿಧ ಬೆಳೆಗಳ ತಾಕುಗಳಲ್ಲಿ ಇಣುಕುತ್ತ, ವೈವಿಧ್ಯಮಯ ಕೃಷಿ ಪ್ರಯೋಗಗಳನ್ನು ಕಣ್ತುಂಬಿಕೊಂಡರು. ಚೆಂಡುಮಲ್ಲಿಗೆ– ಸೂರ್ಯಕಾಂತಿಯ ಚೆಲುವಿಗೆ ಮನಸೋತು ಸೆಲ್ಫಿ ಕ್ಲಿಕ್ಲಿಸುತ್ತ ಸಂಭ್ರಮಿಸಿದರು.
ವಿವಿಧ ಬಗೆಯ ಹಣ್ಣು–ತರಕಾರಿ, ಮೇವಿನ ಬೆಳೆಗಳು, ಫಲ–ಪುಷ್ಪಗಳ ಕೃಷಿಯಲ್ಲಿ ನೀರಾವರಿ, ರಸಾವರಿ, ವೈಜ್ಞಾನಿಕ ಮತ್ತು ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಆದಾಯ ದ್ವಿಗುಣಗೊಳಿಸುವ ತಂತ್ರಗಾರಿಕೆಯ ಹೂರಣವನ್ನು ಮೇಳ ರೈತರಿಗೆ ಉಣಬಡಿಸಿತು. ಸಾವಯವ ಕೃಷಿ ಮತ್ತು ಗೊಬ್ಬರ ಉತ್ಪಾದನೆಯ ಪಾಠವೂ ಇತ್ತು.
ಅಲ್ಲೇ ಪಕ್ಕದಲ್ಲೇ ದೇಸಿ ಜಾನುವಾರುಗಳ ಪ್ರದರ್ಶನವನ್ನೂ ಆಯೋಜಿಸಲಾಗಿತ್ತು. ಮಲೆನಾಡ ಗಿಡ್ಡದಿಂದ ಹಿಡಿದು ಪುಂಗನೂರು, ಗಿರ್, ಸಾಹಿವಾಲ್ ಮೊದಲಾದ ತಳಿಗಳ ಹಸುಗಳು ಆಕರ್ಷಿಸಿದವು. ಚೊಟ್ಟದ್ದ ಕಾಲಿನ ಬಂಡೂರು ಕುರಿಗಳ ಪ್ರದರ್ಶನವೂ ಇತ್ತು. ಕೃಷಿ ವಿಶ್ವವಿದ್ಯಾಲಯಗಳು ಮಾಹಿತಿ ಹಂಚಿಕೊಂಡವು. ಅಲ್ಲೇ ಇನ್ನೊಂದು ತುದಿಯಲ್ಲಿ ಕೃಷಿ ಸಂಬಂಧಿ ಪರಿಕರಗಳ ಪ್ರದರ್ಶನವೂ ಇತ್ತು.
ವಿಜ್ಞಾನ ಮತ್ತು ತಂತ್ರಜ್ಞಾನಗಳ ಪ್ರದರ್ಶನವೂ ಜಾತ್ರೆಯಲ್ಲಿದ್ದು, ವಿಜ್ಞಾನ ಮಾದರಿಗಳ ಪ್ರದರ್ಶನ ಗಮನ ಸೆಳೆಯಿತು. ಜೆಎಸ್‌ಎಸ್ ವೈದ್ಯಕೀಯ ಕಾಲೇಜುಗಳ ತಂಡಗಳು ಮಳಿಗೆಗಳಲ್ಲಿ ಆರೋಗ್ಯ ಮಾಹಿತಿ ಹಂಚಿಕೊಂಡವು. ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ವಿವಿಧ ಶಾಲಾ ವಿದ್ಯಾರ್ಥಿಗಳು ಗಣಿತ ಹಾಗೂ ವಿಜ್ಞಾನದ ವಿವಿಧ ವಿಷಯಗಳ ಮಾದರಿಗಳ ಪ್ರದರ್ಶನದ ಮೂಲಕ ಮಾಹಿತಿ ನೀಡಿದರು.
ಕಲೆಯ ಸ್ಪರ್ಶ:
ಸುತ್ತೂರು ಜಾತ್ರೆಗೆ ಕಲೆಯ ಸ್ಪರ್ಶವೂ ಇದ್ದು, 26 ಮಳಿಗೆಗಳಲ್ಲಿ ವಿವಿಧ ಕಲಾಕೃತಿಯ ಪ್ರದರ್ಶನ ನೋಡುಗರನ್ನು ಸೆಳೆಯಿತು. ತಮ್ಮಿಷ್ಟದ ಚಿತ್ರವನ್ನು ಖರೀದಿಸುವ ಅವಕಾಶವೂ ಇತ್ತು. ಕಲಾವಿದರೊಂದಿಗೆ ಚಿತ್ರಕಲಾ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡರು. ಮೇಳಕ್ಕೆ ಬಂದವರ ಕೈಗೆ ಸ್ಥಳದಲ್ಲೇ ಮೆಹಂದಿ ಹಚ್ಚುವ ವ್ಯವಸ್ಥೆಯೂ ಇತ್ತು. ಮೊಬೈಲ್ ಗೀಳಿನ ಕುರಿತ ಆಕರ್ಷಕ ಕಲಾಕೃತಿ ಎಲ್ಲರ ಮನಸೆಳೆಯಿತು.
ಚಾಲನೆ:
ಸಂಜೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹಾಗೂ ಮೈಸೂರು–ಕೊಡಗು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಗಾರಿ ಬಾರಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಜಗದೀಶ ಶೆಟ್ಟರ್ ಮಾತನಾಡಿ ‘ ಕಪಿಲಾ ನದಿಯ ತಟದಲ್ಲಿ ಶಿವರಾತ್ರಿಶ್ವರ ಶ್ರೀಗಳ ತಪಸ್ಸಿನಿಂದ ಸ್ಥಾಪಿತವಾದ ಈ ಪೀಠವು ಧಾರ್ಮಿಕ ಕೇಂದ್ರವಾಗಿದ್ದು, ಸಹಸ್ರಾರು ವರ್ಷಗಳಿಂದ ಜ್ಞಾನ ದಾಸೋಹ ಮಾಡುತ್ತ ಬಂದಿದೆ. ಶೈಕ್ಷಣಿಕ ಕೇಂದ್ರಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿದೆ. ಹೊರ ರಾಜ್ಯ – ದೇಶಗಳಲ್ಲೂ ಶಿಕ್ಷಣ ಸಂಸ್ಥೆಗಳನ್ನು ತೆರೆದಿದೆ. ಈಗಿನ ಶಿವರಾತ್ರಿಶ್ವರ ದೇಶಿಕೇಂದ್ರ ಶ್ರೀಗಳು ನಮ್ಮಂಥವರಿಗೆ ಮಾರ್ಗದರ್ಶಕರಾಗಿದ್ದಾರೆ. ಪ್ರಧಾನಿ ಮೋದಿ ಸಹಿತ ರಾಷ್ಟ್ರದ ಎಲ್ಲ ನಾಯಕರು ಸುತ್ತೂರು ಮಠದ ಬಗ್ಗೆ ಅಭಿಮಾನ ಹೊಂದಿದ್ದಾರೆ’ ಎಂದರು.
‘ ದೇಶದ ಸಾಂಸ್ಕೃತಿಕ ಪರಂಪರೆ ಈ ಜಾತ್ರೆಗಳಲ್ಲಿದೆ. ಸಮಾಜದಲ್ಲಿನ ಸಂಘರ್ಷಗಳಿಗೆ ಧರ್ಮ ಜಾಗೃತಿಯೇ ಉತ್ತರವಾಗಿದೆ’ ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ ‘ಸುತ್ತೂರಿಗೂ ಮೈಸೂರು ಅರಮನೆಗೆ ಅವಿನಾಭಾವ ಸಂಬಂಧವಿದೆ. ಗುರು ಪರಂಪರೆಯು ನಮಗೆಲ್ಲ ಮಾರ್ಗದರ್ಶನ ನೀಡುತ್ತ ಬಂದಿದೆ. ಈ ಜಾತ್ರೆಯು ಕೇವಲ ಧಾರ್ಮಿಕ ಉತ್ಸವ ಅಲ್ಲ. ನಮ್ಮ ಪರಂಪರೆ, ಸೌಹಾರ್ದತೆಯ ಪ್ರತೀಕವಾಗಿದೆ’ ಎಂದು ಬಣ್ಣಿಸಿದರು.
‘ ಸಮಾಜ ಎಷ್ಟೇ ಅಭಿವೃದ್ಧಿ ಆದರೂ ನಮ್ಮ ಅಧ್ಯಾತ್ಮದ ಬೇರು ಮರೆಯಬಾರದು. ಪರಂಪರೆಯ ರಕ್ಷಣೆಯಾದಾಗಲಷ್ಟೇ ಪರಿಪೂರ್ಣ ಭಾರತ ನಿರ್ಮಾಣ ಸಾಧ್ಯ’ ಎಂದರು.
ಅಥಣಿ ಗುಚ್ಚಿನಮಠದ ಶಿವಬಸವ ಸ್ವಾಮೀಜಿ, ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ, ಅಮೀನಗಡ ಪ್ರಭುಶಂಕರ ಮಠದ ಶಂಕರರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೇಲೂರು ಶಾಸಕ ಎಚ್.ಕೆ. ಸುರೇಶ್, ಚಿಕ್ಕಮಗಳೂರು ಶಾಸಕ ಎಚ್.ಡಿ. ತಿಮ್ಮಯ್ಯ, ತಮಿಳುನಾಡಿನ ಭವಾನಿಸಾಗರ ಶಾಸಕ ಎ. ಬಣ್ಣಾರಿ, ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಯುಕೇಶ್‌ಕುಮಾರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕರ್ತೃ ಗದ್ದುಗೆಗೆ ಪೂಜೆ:
ಗುರುವಾರ ಮುಂಜಾನೆ ನಾಲ್ಕಕ್ಕೆ ಕರ್ತೃ ಗದ್ದುಗೆಯಲ್ಲಿ ಅನುಜ್ಞೆ, ಮಹಾಸಂಕಲ್ಪಪೂರ್ವಕ ಮಹಾರುದ್ರಾಭಿಷೇಕ ನೆರವೇರಿತು. ಹೊಸಮಠದ ಸಿದ್ದಬಸವ ಸ್ವಾಮಿಗಳಿಂದ ಷಟ್ ಸ್ಥಲ ಧ್ವಜಾರೋಹಣ, ಮಳವಳ್ಳಿ ತಾಲ್ಲೂಕಿನ ಕುಂದೂರು ಬೆಟ್ಟದ ರಸಸಿದ್ದೇಶ್ವರ ಮಠದ ರುದ್ರಮಹಾಂತ ಸ್ವಾಮೀಜಿ ಧರ್ಮ ಸಂದೇಶ ನೀಡಿದರು. ಮಧ್ಯಾಹ್ನ ಉತ್ಸವಮೂರ್ತಿಯನ್ನು ಮಠದಿಂದ ಕರ್ತೃ ಗದ್ದುಗೆಗೆ ಮೆರವಣಿಗೆಯಲ್ಲಿ ಒಯ್ಯಲಾಯಿತು. ಈ ಸಂದರ್ಭ ವಿವಿಧ ಕಲಾತಂಡಗಳ ಪ್ರದರ್ಶನ, ಹೆಣ್ಣುಮಕ್ಕಳ ವೀರಗಾಸೆ ಕುಣಿತಗಳು ಆಕರ್ಷಕವಾಗಿದ್ದವು.
ದಾಸೋಹ ಸಂಭ್ರಮ: ಜಾತ್ರೆಗೆ ಬಂದ ಭಕ್ತರಿಗೆ ದಿನದ ಮೂರು ಹೊತ್ತು ದಾಸೋಹದ ವ್ಯವಸ್ಥೆಯೂ ಇದ್ದು, ಗುರುವಾರ ಭಕ್ತರು ಪ್ರಸಾದ ಸವಿದರು.
ಪ್ರತಿ ದಿನ ಉಪಾಹಾರಕ್ಕೆ ಕೇಸರಿಬಾತ್, ಕಿಚಡಿ, ಬಿಸಿಬೇಳೆ ಬಾತ್, ಉಪ್ಪಿಟ್ಟು ಮೊದಲಾದ ಆಹಾರದ ಜೊತೆಗೆ ಕಾಯಿ ಹಾಲು, ಸಿಹಿ ಬೂಂದಿ, ಬೆಲ್ಲದ ಸಜ್ಜಿಗೆ ಸಿದ್ಧಪಡಿಸಲಾಗುತ್ತಿದೆ. ವಿವಿಧ ತರಕಾರಿ ಹುಳಿ, ಅನ್ನ–ಸಾಂಬಾರ್ ಜೊತೆಗೆ ಲಡ್ಡು ಹಾಗೂ ಮೈಸೂರು ಪಾಕ್ ಸಹ ಸಿದ್ಧಪಡಿಸಲಾಗುತ್ತಿದೆ. ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಪ್ರಸಾದ ವಿತರಣೆ ನಡೆದಿದೆ.
ಗಮನ ಸೆಳೆದ ಕೃಷಿ ಮೇಳ ದೋಣಿ ವಿಹಾರ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಚಾಲನೆ ಇಂದು ಸಾಮೂಹಿಕ ವಿವಾಹ ಕಾರ್ಯಕ್ರಮ
ಸುತ್ತೂರು ಜಾತ್ರೆಯು ಕೇವಲ ಆಚರಣೆ ಆಗಿರದೇ ಮನುಷ್ಯನ ಜ್ಞಾನ ಹೆಚ್ಚಿಸುವ ವೇದಿಕೆಯೂ ಆಗಿದೆ. ಇಲ್ಲಿನ ಕೃಷಿ ಮೇಳ ವಸ್ತುಪ್ರದರ್ಶನಗಳು ಜಾಗೃತಿ ಸಂದೇಶ ಸಾರುತ್ತಿವೆಜಗದೀಶ ಶೆಟ್ಟರ್ ಬೆಳಗಾವಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.