ADVERTISEMENT

ಸ್ವಚ್ಛ ಶೌಚಾಲಯ ಅಭಿಯಾನಕ್ಕೆ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಚಾಲನೆ

ಮಹಾನಗರಪಾಲಿಕೆಯಿಂದ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 2:47 IST
Last Updated 20 ಫೆಬ್ರುವರಿ 2026, 2:47 IST
ಮೈಸೂರು ಮಹಾನಗರಪಾಲಿಕೆಯಿಂದ ಯುಜಿಡಿ ಸ್ವಚ್ಛತೆಗೆ ಬಳಸಲಾಗುವ ಅತ್ಯಾಧುನಿ ತಂತ್ರಜ್ಞಾನದ ‘ಬಂಡಿಕೂಟ್ ರೊಬೊಟ್’ ಯಂತ್ರವನ್ನು ಆಯುಕ್ತ ಶೇಖ್‌ ತನ್ವೀರ್‌ ಆಸೀಫ್ ವೀಕ್ಷಿಸಿದರು. ಸಿ. ಮಂಜು, ಶಿಲ್ಪಿ, ಶುಶ್ರುತ್, ಧನುಷ್, ನಾಗರಾಜ್‌ಗೌಡ ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ
ಮೈಸೂರು ಮಹಾನಗರಪಾಲಿಕೆಯಿಂದ ಯುಜಿಡಿ ಸ್ವಚ್ಛತೆಗೆ ಬಳಸಲಾಗುವ ಅತ್ಯಾಧುನಿ ತಂತ್ರಜ್ಞಾನದ ‘ಬಂಡಿಕೂಟ್ ರೊಬೊಟ್’ ಯಂತ್ರವನ್ನು ಆಯುಕ್ತ ಶೇಖ್‌ ತನ್ವೀರ್‌ ಆಸೀಫ್ ವೀಕ್ಷಿಸಿದರು. ಸಿ. ಮಂಜು, ಶಿಲ್ಪಿ, ಶುಶ್ರುತ್, ಧನುಷ್, ನಾಗರಾಜ್‌ಗೌಡ ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ   

ಮೈಸೂರು: ಸ್ವಚ್ಛತೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಎಂಬ ಧ್ಯೇಯವಾಕ್ಯದೊಂದಿಗೆ ಇಲ್ಲಿನ ಮಹಾನಗರ ಪಾಲಿಕೆಯಿಂದ ಕೈಗೊಂಡಿರುವ ಸ್ವಚ್ಛ ಶೌಚಾಲಯ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಪುರಭವನದಲ್ಲಿ ಬುಧವಾರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಲಾಯಿತು.

‘ಸ್ವಚ್ಛ ನಗರಗಳ ಪೈಕಿ ಮೈಸೂರು ನಗರವನ್ನು ನಂ.1 ಮಾಡುವ ಗುರಿಯೊಂದಿಗೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸ್ವಚ್ಛತೆ ಕಾಪಾಡಿಕೊಳ್ಳಲು ನಾಗರಿಕರೆಲ್ಲರೂ ಸಹಕಾರ ನೀಡಬೇಕು’ ಎಂದು ಕೋರಿದರು.

ADVERTISEMENT

ಪಾಲಿಕೆಯ ಶೌಚಾಲಯಗಳ ನಿರ್ವಹಣೆ ಮಾಡುತ್ತಿರುವ ಕಾರ್ಮಿಕರಿಗೆ ‘ಹೈಜಿನ್ ಕಿಟ್’ಗಳನ್ನು ವಿತರಿಸುವ ಮೂಲಕ ಅವರ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಯಿತು.

ಶೌಚಾಲಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶಾಲಾ ಮಕ್ಕಳೊಂದಿಗೆ ರ‍್ಯಾಲಿ ನಡೆಸಲಾಯಿತು. ಕಿರು ನಾಟಕ ಪ್ರದರ್ಶನದ ಮೂಲಕವೂ ಸ್ವಚ್ಛತೆಯ ಮಹತ್ವ ಸಾರಲಾಯಿತು. ಪಾಲಿಕೆ ಅಧಿಕಾರಿಗಳ ತಂಡವು ನಗರದ ವಿವಿಧೆಡೆ ಪಾಲಿಕೆ ವತಿಯಿಂದ ನಿರ್ವಹಿಸುತ್ತಿರುವ ಶೌಚಾಲಯಗಳನ್ನು ಪ್ರಾಯೋಗಿಕವಾಗಿ ಪರಿಶೀಲನೆ ನಡೆಸಿ, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿತು.

ಉಪ ಆಯುಕ್ತ (ಅಭಿವೃದ್ಧಿ) ಮಂಜು ಸಿ.ಎಸ್., ವಾಣಿವಿಲಾಸ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗಳಾದ ಶಿಲ್ಪಾ ಮತ್ತು ಅಶ್ವಿನ್, ಎಇಇ ಮುಸ್ತಫಾ, ಸುಶ್ರುತ್, ಧನುಷ್, ನಾಗರಾಜೇಗೌಡ ಮತ್ತು ರವಿಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.

ಗಮನಸೆಳೆದ ‘ಬಂಡಿಕೂಟ್ ರೊಬೊಟ್’ 

ಪುರಭವನದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಯಂತ್ರೋಪಕರಣಗಳ ಪ್ರದರ್ಶನದಲ್ಲಿ ‘ಬಂಡಿಕೂಟ್ ರೊಬೊಟ್’ ಗಮನಸೆಳೆಯಿತು. ಅದನ್ನು ವೀಕ್ಷಿಸಿದ ಆಯುಕ್ತ ತನ್ವೀರ್‌ ಅದರ ಕಾರ್ಯವೈಖರಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ‘ಇದನ್ನು ಯುಜಿಡಿ ಸ್ವಚ್ಛತೆಯ ಸಂದರ್ಭದಲ್ಲಿ ಬಳಸಲಾಗುತ್ತದೆ.

ಅದರಲ್ಲಿ ಸಣ್ಣದಾದ ಕ್ಯಾಮೆರಾ ಇದೆ. ಯುಜಿಡಿ ಮಾರ್ಗದಲ್ಲಿ ಎಲ್ಲಿಯಾದರೂ ಕಲ್ಲು ಸಿಕ್ಕಿಕೊಂಡಿದ್ದರೆ ಈ ಕ್ಯಾಮೆರಾ ಸಹಾಯದಿಂದ ಗುರುತಿಸಲಾಗುತ್ತದೆ. ಹೂಳು (ಸಿಲ್ಟ್‌) ಇದ್ದರೆ ಪತ್ತೆಹಚ್ಚಿ ತೆಗೆಯಬಹುದು. ಒಟ್ಟಿನಲ್ಲಿ ಯುಜಿಡಿ ಮಾರ್ಗದಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡುವುಲ್ಲಿ ಈ ಯಂತ್ರದ ಸಹಾಯವನ್ನು ಪಡೆಯಲಾಗುತ್ತದೆ. ಮೂರು ವರ್ಷಗಳಿಂದಲೂ ಇದನ್ನು ಬಳಸಲಾಗುತ್ತಿದೆ. ಕೈಯಲ್ಲಿ ಸ್ವಚ್ಛಗೊಳಿಸುವುದನ್ನು ತಪ್ಪಿಸುವುದಕ್ಕೆ ಇದು ಸಹಕಾರಿಯಾಗಿದೆ’ ಎಂದು ಎಂಜಿನಿಯರ್‌ ಮೇಘನಾ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.