ADVERTISEMENT

ತಿ.ನರಸೀಪುರ‌: ತುಂಬಲ ಶಾಲೆಗೆ ಪಿಎಂಶ್ರೀ‌ ಪ್ರಶಸ್ತಿ

ತಾಲ್ಲೂಕು ಶಿಕ್ಷಕರ ದಿನಾಚರಣೆ ವೇಳೆ ಶಾಲೆಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 5:36 IST
Last Updated 6 ಸೆಪ್ಟೆಂಬರ್ 2025, 5:36 IST
ತಿ.ನರಸೀಪುರ‌ ತಾಲ್ಲೂಕಿನ ತುಂಬಲ ಸರ್ಕಾರಿ ಶಾಲೆಯು ಅತ್ಯುತ್ತಮ ಪಿಎಂಶ್ರೀ ಶಾಲೆ ಗೌರವಕ್ಕೆ ಪಾತ್ರವಾಗಿದೆ
ತಿ.ನರಸೀಪುರ‌ ತಾಲ್ಲೂಕಿನ ತುಂಬಲ ಸರ್ಕಾರಿ ಶಾಲೆಯು ಅತ್ಯುತ್ತಮ ಪಿಎಂಶ್ರೀ ಶಾಲೆ ಗೌರವಕ್ಕೆ ಪಾತ್ರವಾಗಿದೆ   

ತಿ.ನರಸೀಪುರ‌: ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುಂಬಲ ಗ್ರಾಮದ ಸರ್ಕಾರಿ  ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯು 'ಅತ್ಯುತ್ತಮ ಪಿಎಂಶ್ರೀ ಶಾಲೆ' ರಾಜ್ಯ ಪ್ರಶಸ್ತಿಗೆ ಭಾಜನವಾಗಿದೆ. ತಾಲ್ಲೂಕಿನ ಗ್ರಾಮೀಣ  ಸರ್ಕಾರಿ ಶಾಲೆಯೊಂದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪಿಎಂಶ್ರೀ ಯೋಜನೆ ( ಪ್ರಧಾನ ಮಂತ್ರಿ ಸ್ಕೂಲ್ಸ್‌ ಫಾರ್‌ ರೈಸಿಂಗ್‌ ಇಂಡಿಯ)  ಯಶಸ್ವಿ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ ಈ ಶಾಲೆಗೆ ಗೌರವ ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ ತನ್ನ ಬದ್ಧತೆ, ಸಮರ್ಪಣೆ ಮತ್ತು ಗುಣಮಟ್ಟದ ಕಾರ್ಯಕ್ಷಮತೆಯಿಂದಾಗಿ ಈ ಸರ್ಕಾರಿ ಶಾಲೆ ಈ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದೆ.  

ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ನಡೆಯುವ ಎನ್‌ಎಂಎಂಎಸ್ ವಿದ್ಯಾರ್ಥಿ ವೇತನ‌ ಅರ್ಹತಾ ಪರೀಕ್ಷೆಯಲ್ಲಿ ಇಲ್ಲಿಯ ವಿದ್ಯಾರ್ಥಿಗಳು ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿರುವುದು  ವಿಶೇಷ.  ಕ್ರೀಡೆ, ವೈಜ್ಞಾನಿಕ ಮನೋಭಾವ ಮೂಡಿಸುವ ವಿಜ್ಞಾನ ಪ್ರಯೋಗ ಕಲಿಕೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಇಂಗ್ಲಿಷ್ ಕಲಿಕೆಗೆ ವಿಶೇಷ ಒತ್ತು ನೀಡಲಾಗಿದೆ.

ADVERTISEMENT

ಶಾಲೆಯ ಮುಖ್ಯಶಿಕ್ಷಕ ರಾಯಪ್ಪ ಗೌಂಡಿ, ಸಮಸ್ತ ಶಿಕ್ಷಕ ವೃಂದ, ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಹಾಗೂ ಗ್ರಾಮಸ್ಥರ ಸಾಮೂಹಿಕ ಪ್ರಯತ್ನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ಇದು ಗ್ರಾಮದ ಸಮುದಾಯದ ಸಹಭಾಗಿತ್ವ ಮತ್ತು ಸತತ ಪ್ರಯತ್ನಗಳಿಗೆ ಸಿಕ್ಕಿರುವ ಗೌರವ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ತಿ.ನರಸೀಪುರ‌ ತಾಲ್ಲೂಕಿನ ತುಂಬಲ ಸರ್ಕಾರಿ ಶಾಲೆಯು ಅತ್ಯುತ್ತಮ ಪಿಎಂಶ್ರೀ ಶಾಲೆ ಗೌರವಕ್ಕೆ ಪಾತ್ರವಾಗಿದೆ
ಇಲಾಖೆಯ ಸಹಕಾರ ಅಧಿಕಾರಿಗಳ ಪ್ರೋತ್ಸಾಹ ಎಸ್‌ಡಿಎಂಸಿ‌– ಗ್ರಾಮಸ್ಥರ ಬೆಂಬಲ ಶಿಕ್ಷಕರ ಕಾರ್ಯ ತತ್ಪರತೆಯಿಂದ ಶಾಲೆಯ ಕಾರ್ಯ ವೈಖರಿ ಉತ್ತಮವಾಗಿದ್ದು ಪ್ರಶಸ್ತಿ ದೊರಕಿದೆ.
ರಾಯಪ್ಪ ಬಿ. ಗೌಂಡಿ ಮುಖ್ಯ ಶಿಕ್ಷಕ

ಅಭಿನಂದನೆ ಇಂದು

ಶಾಲೆಯ ಕಾರ್ಯ ವೈಖರಿ ಉತ್ತಮವಾಗಿದ್ದು ಮುಖ್ಯ ಶಿಕ್ಷಕರು ಸಹ ಶಿಕ್ಷಕರೊಂದಿಗೆ ಶಾಲಾಭಿವೃದ್ದಿ ಸಮಿತಿ ಹಾಗೂ ಗ್ರಾಮಸ್ಥರೊಡನೆ ಉತ್ತಮ‌ ಬಾಂಧವ್ಯ ದೊಂದಿಗೆ ಪ್ರಗತಿ ಪೂರಕವಾಗಿ ಉತ್ತಮ ಬೋಧನೆ ಸೃಜನ‌ಶೀಲ ಕಲಿಕೆಗೆ ಒತ್ತು ನೀಡುತ್ತಿರುವುದರಿಂದ ಶಾಲೆಗೆ ಗೌರವ ದೊರಕಿದೆ.  ಸೆ.6ರಂದು ನಡೆಯಲಿರುವ ತಾಲ್ಲೂಕು ಶಿಕ್ಷಕರ ದಿನಾಚರಣೆ ವೇಳೆ ಶಾಲೆಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ  ಎಸ್. ಸಿ. ಶಿವಮೂರ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.