ಹಂಪಾಪುರ ಸಮೀಪದ ಎಚ್.ಮಟಕೆರೆ-ಹೊಸತೊರವಳ್ಳಿ ಸಂಪರ್ಕ ಸೇತುವೆ ಸಮೀಪ ಅಪಾಯ ಮಟ್ಟ ಮೀರಿ ನೀರು ಹರಿಯುತ್ತಿದೆ
ಚಿತ್ರ– ರವಿಕುಮಾರ್
ಹಂಪಾಪುರ: ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ 30,000 ಕ್ಯೂಸೆಕ್ ಮತ್ತು ತಾರಕ ಜಲಾಶಯದಿಂದ 9,500 ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟಿರುವುದರಿಂದ ಎಚ್.ಡಿ. ಕೋಟೆ ತಾಲ್ಲೂಕಿನ ಹಂಪಾಪುರ ಸಮೀಪದ ಮಾದಾಪುರ-ಚಕ್ಕೂರು ಸೇತುವೆ ಮುಳುಗಡೆಯ ಹಂತ ತಲುಪಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಕೇರಳ ರಾಜ್ಯದ ವಯನಾಡು ಮತ್ತು ನಾಗರಹೊಳೆ ಅಭಯಾರಣ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ನದಿಗಳಿಂದ ಹೆಚ್ಚಿನ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದಾಗಿ ಹೊಮ್ಮರಗಳ್ಳಿ-ಸಂಗಮ ಸಂಪರ್ಕ ಕಲ್ಪಿಸುವ ಸೇತುವೆಯು ಇನ್ನೇನು ಮುಳುಗುವ ಹಂತ ತಲುಪಿದೆ. ಅಲ್ಲದೆ ತಾರಕ ನದಿಗೆ ಅಡ್ಡಲಾಗಿ ಕಟ್ಟಿರುವ ಹೊಸತೊರವಳ್ಳಿ-ಎಚ್.ಮಟಕೆರೆ ಸಂಪರ್ಕ ಸೇತುವೆಯೂ ಮುಳುಗಡೆ ಹಂತ ತಲುಪುವುದರಲ್ಲಿದೆ.
ತಾರಕ ನದಿಯಿಂದಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನಲೆ ನದಿ ಪಾತ್ರದಲ್ಲಿ ವಾಸಿಸುವ ಹೊಸ ತೊರವಳ್ಳಿ ಗ್ರಾಮದ ಕೆಲ ಕುಟುಂಬಗಳಿಗೆ ಪ್ರವಾಹದ ಭೀತಿ ಎದುರಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಈ ಕುಟುಂಬಗಳು ತಮ್ಮ ಮನೆಯ ವಸ್ತುಗಳನ್ನು ಟ್ರ್ಯಾಕ್ಟರ್ ನಲ್ಲಿ ತುಂಬಿಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಿವೆ.
ಹಂಪಾಪುರ ಸಮೀಪದ ಎಚ್.ಮಟಕೆರೆ-ಹೊಸತೊರವಳ್ಳಿ ಸಂಪರ್ಕ ಸೇತುವೆ ಸಮೀಪ ಅಪಾಯ ಮಟ್ಟ ಮೀರಿ ನೀರು ಹರಿಯುತ್ತಿದ್ದು ಜಮೀನು ಮತ್ತು ಮನೆಗಳಿಗೆ ನೀರು ನುಗ್ಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.