ADVERTISEMENT

ಎಚ್.ಡಿ.ಕೋಟೆ: ಗುರುಭವನ ವ್ಯವಹಾರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 4:06 IST
Last Updated 2 ಮಾರ್ಚ್ 2026, 4:06 IST
ಗುರುಭವನದ ವ್ಯವಹಾರಗಳ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಎಚ್.ಡಿ.ಕೋಟೆ ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ಶಿಕ್ಷಕರು ಮೌನ ಪ್ರತಿಭಟನೆ ನಡೆಸಿದರು
ಗುರುಭವನದ ವ್ಯವಹಾರಗಳ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಎಚ್.ಡಿ.ಕೋಟೆ ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ಶಿಕ್ಷಕರು ಮೌನ ಪ್ರತಿಭಟನೆ ನಡೆಸಿದರು   

ಎಚ್.ಡಿ.ಕೋಟೆ: ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ಗುರುಭವನದ ವ್ಯವಹಾರಗಳ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಹಲವು ಶಿಕ್ಷಕರು ಪಟ್ಟಣದ ಗುರುಭವನದ ಆವರಣದಲ್ಲಿ ಶನಿವಾರ ಮೌನ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಜಿ. ಚಿಕ್ಕದೇವು ನೇತೃತ್ವ ವಹಿಸಿ ಮಾತನಾಡಿ, ‘ತಾಲ್ಲೂಕಿನಲ್ಲಿ ಪ್ರಥಮವಾಗಿ ಶಿಕ್ಷಕರ ಪರಿಶ್ರಮದಿಂದ ನಿರ್ಮಾಣಗೊಂಡ ಗುರುಭವನ ಹಲವು ವರ್ಷಗಳಿಂದ ಯಾವುದೇ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪುತ್ತಿದೆ. ಗುರುಭವನದಲ್ಲಿ ನಡೆಯುವ ಶುಭ ಕಾರ್ಯಗಳು ಹಾಗೂ ಖಾಸಗಿ ಕಂಪನಿಗಳ ವಸ್ತುಗಳ ಮಾರಾಟಕ್ಕೆ ತಿಂಗಳುಗಟ್ಟಲೆ ಬಾಡಿಗೆ ಆಧಾರದ ಮೇಲೆ ಗುರುಭವನವನ್ನ ನೀಡಿದ್ದರೂ ಎಷ್ಟು ಹಣ ಬಂತು. ಇಲ್ಲಿಯ ತನಕ ಎಷ್ಟು ಕಾರ್ಯಕ್ರಮಗಳು ನಡೆದಿವೆ, ಅದರಲ್ಲಿ ಗಳಿಸಿದ ಹಣ ಎಷ್ಟು ಖರ್ಚಾಗಿದೆ ಎನ್ನುವ ಯಾವುದೇ ಲೆಕ್ಕಪತ್ರಗಳ ದಾಖಲೆ ಇಲ್ಲ’ ಎಂದು ಆರೋಪಿಸಿದರು.

‘ಶಿಕ್ಷಕರ ಪರಿಶ್ರಮದ ಹಣದಿಂದ ನಿರ್ಮಾಣಗೊಂಡ ಗುರುಭವನದ ಲೆಕ್ಕಚಾರದಲ್ಲಿ ಯಾವುದೇ ದಾಖಲೆ ಇಲ್ಲದೇ ಇರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, 3 ತಿಂಗಳಿಂದ ಗುರುಭವನದ ಲೆಕ್ಕಚಾರ ಮತ್ತು ಸಮಿತಿ ಸದಸ್ಯರ ಮಾಹಿತಿ ವಿವರ ನೀಡುವಂತೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ’ ಎಂದರು.

ADVERTISEMENT

‘ಗುರುಭವನದ ಅವ್ಯವಹಾರಗಳ ಸಮಗ್ರ ತನಿಖೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಸಮಿತಿ ರಚಿಸಿ ಗುರುಭವನದ ಲೆಕ್ಕಪತ್ರಗಳನ್ನು ನಿಭಾಯಿಸಬೇಕು ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಗುರುಭವನದ ಉಳಿವಿಗಾಗಿ ತಾಲ್ಲೂಕಿನ ಶಿಕ್ಷಕರು ಉಗ್ರ ಹೋರಾಟ ನಡೆಸುಸಲಾಗುವುದು’ ಎಂದು ಎಚ್.ಜಿ. ಚಿಕ್ಕದೇವು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎನ್.ವಿ. ಸುರೇಶ್, ಮಾಜಿ ಅಧ್ಯಕ್ಷ ಚಂದ್ರಕುಮಾರ್, ತಾಲ್ಲೂಕು ಉಪಾಧ್ಯಾಯರ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಗಿರೀಶ್ ಮೂರ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬಿ.ಎಸ್. ಮಂಜುನಾಥ್, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ. ಸೋಮಸುಂದರ್, ಸಾವಿತ್ರಿ ಬಾಯಿಫುಲೆ, ಶಿಕ್ಷಕಿಯರ ಸಂಘದ ಅಧ್ಯಕ್ಷೆ ಪ್ರತಿಭಾ, ಶಿಕ್ಷಕರಾದ ಪ್ರಸನ್ನ, ರಂಗಸ್ವಾಮಿ ಶೆಟ್ಟಿ, ಕೃಷ್ಣಪ್ಪ, ಮಹದೇವ ಸ್ವಾಮಿ, ಮಗ್ಗೆ ಮಹೇಶ್, ರೂಪ ಪ್ರಮೋದ್, ನಾಗೇಂದ್ರ, ಮಧು, ಶೇಖರ್, ಧರ್ಮೇಂದ್ರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.