ADVERTISEMENT

ಜಯಪುರ: ದಾರಿಪುರದಲ್ಲಿ 22ರಂದು ದೇವಸ್ಥಾನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 3:00 IST
Last Updated 20 ಫೆಬ್ರುವರಿ 2026, 3:00 IST
<div class="paragraphs"><p>ಜಯಪುರ ಹೋಬಳಿಯ ದಾರಿಪುರ ಗ್ರಾಮದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿರುವ ಮಂಟೇಸ್ವಾಮಿ, ಸಿದ್ದಪ್ಪಾಜಿ ಮತ್ತು ಮಹಾಗಣಪತಿ ನೂತನ ದೇವಾಲಯ</p></div>

ಜಯಪುರ ಹೋಬಳಿಯ ದಾರಿಪುರ ಗ್ರಾಮದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿರುವ ಮಂಟೇಸ್ವಾಮಿ, ಸಿದ್ದಪ್ಪಾಜಿ ಮತ್ತು ಮಹಾಗಣಪತಿ ನೂತನ ದೇವಾಲಯ

   

ಜಯಪುರ: ಹೋಬಳಿಯ ದಾರಿಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಂಟೇಸ್ವಾಮಿ, ಸಿದ್ದಪ್ಪಾಜಿ ಮತ್ತು ಮಹಾಗಣಪತಿ ದೇವಾಲಯ ಉದ್ಘಾಟನೆ, ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಫೆ.22ರಂದು ನಡೆಯಲಿದೆ. 23ರಂದು ಗುರುಕರೂರು ಸ್ವಾಮಿ ಪುಣ್ಯರಾಧನೆ ಮಹೋತ್ಸವ ನಡೆಯಲಿದೆ.

21ರಂದು ಸಂಜೆ ಪ್ರಧಾನ ಹೋಮಹವನಗಳು ನಡೆಯಲಿದ್ದು, ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಯಲಿದೆ. ವೀರಗಾಸೆ, ಮಂಗಳವಾದ್ಯ, ನಂದಿ ಧ್ವಜಕಂಬ ಕುಣಿತ ಮೆರವಣಿಗೆಯಲ್ಲಿ ಸಾಗಲಿದ್ದು ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ.

ADVERTISEMENT

22ರಂದು ಭಾನುವಾರ ಮಂಟೇಸ್ವಾಮಿ, ಸಿದ್ದಪ್ಪಾಜಿ, ಮಹಾಗಣಪತಿ ವಿಗ್ರಹ ಪ್ರತಿಷ್ಠಾಪನೆ, ಪ್ರಾಣಪ್ರತಿಷ್ಠಾಪನೆ ಮಾಡಿ, ಬೆ.6ಕ್ಕೆ ಮಹಾಮಂಗಳಾರತಿ ಜರುಗಲಿದೆ. ಈ ವೇಳೆ ಮಳವಳ್ಳಿ ತಾಲ್ಲೂಕು ರಾಜಬೊಪ್ಪೇಗೌಡನಪುರ ಕ್ಷೇತ್ರ ಧರೆಗೆದೊಡ್ಡವರ ಸಂಸ್ಥಾನಮಠ ಪೀಠಾಧಿಪತಿ ಬಿ.ಎಸ್. ಜ್ಞಾನಾನಂದ ಚನ್ನರಾಜೇ ಅರಸ್ ಸ್ವಾಮೀಜಿ ಪಾಲ್ಗೊಳ್ಳುವರು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅವರು ಸಾನಿಧ್ಯ ವಹಿಸಲಿದ್ದು, ಹುಲ್ಲಹಳ್ಳಿ ವಿರಕ್ತಮಠದ ಇಮ್ಮಡಿ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಮೈಸೂರು ಕುದೇರು ಮಠದ ಗುರುಶಾಂತ ಸ್ವಾಮೀಜಿ, ಬರಡನಪುರ ಗುರುಮಹಂತೇಶ್ವರ ಮಠದ ಪರಶಿವಮೂರ್ತಿ ಸ್ವಾಮೀಜಿ, ಶಾಸಕ ಜಿ.ಟಿ. ದೇವೇಗೌಡ, ಪುರ ಬಸವೇಶ್ವರ ಪಟ್ಟದ ಮಠದ ಚಂದ್ರಶೇಖರ ಸ್ವಾಮೀಜಿ, ಕುದೇರು ಮಠದ ಕಿರಿಯ ಶ್ರೀಗಳಾದ ಇಮ್ಮಡಿ ಗುರುಲಿಂಗ ಸ್ವಾಮೀಜಿ ಅವರು ಭಾಗವಹಿಸಲಿದ್ದಾರೆ.

‘23ರಂದು ಸೋಮವಾರ ಪುಣ್ಯಾರಾಧನೆಯ ಪ್ರಯುಕ್ತ ಬೆ.8ಕ್ಕೆ ಗುರುಕರೂರು ಸ್ವಾಮಿ ಮತ್ತು ಮುರುಡ ಬಸವೇಶ್ವರಸ್ವಾಮಿ ರಥೋತ್ಸವ ನಡೆಯಲಿದ್ದು, ಮೂರು ದಿವಸ ರಾತ್ರಿಯವರೆಗೆ ನಿರಂತರ ದಾಸೋಹ ನಡೆಯಲಿದೆ’ ಎಂದು ಗ್ರಾಮದ ಮುಖಂಡರಾದ ಗೌಡಿಕೆ ಚಿಕ್ಕಣ್ಣನ ಮುರುಡಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘₹4 ಲಕ್ಷ ಶಾಸಕರ ಅನುದಾನ, ₹5 ಲಕ್ಷ ಜಯಪುರ ಗ್ರಾಮ ಪಂಚಾಯಿತಿಯ ಅನುದಾನ ಹಾಗೂ ದಾನಿಗಳು ನೀಡಿದ ದೇಣಿಗೆ ಸೇರಿ ₹30 ಲಕ್ಷ ವೆಚ್ಚದಲ್ಲಿ ದೇವಸ್ಥಾನ ನಿರ್ಮಿಸಿ ಲೋಕಾರ್ಪಣೆಗೆ ಅಣಿಗೊಳಿಸಲಾಗಿದೆ’ ಎಂದು ಜಯಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಬಸವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಜಯಪುರ ಹೋಬಳಿಯ ದಾರಿಪುರ ಗ್ರಾಮದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿರುವ ಮಂಟೇಸ್ವಾಮಿ ಸಿದ್ದಪ್ಪಾಜಿ ಮತ್ತು ಮಹಾಗಣಪತಿ ನೂತನ ದೇವಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.