ADVERTISEMENT

ಅಂತ್ಯಗೊಂಡ ಮುಷ್ಕರ: ವಿರಳ ಜನ ಸಂಚಾರ

ಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿಯದ ಸಾರಿಗೆ ಬಸ್‌ಗಳು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 16:30 IST
Last Updated 22 ಏಪ್ರಿಲ್ 2021, 16:30 IST
ಸಾರಿಗೆ ನೌಕರರ ಮುಷ್ಕರ ಅಂತ್ಯದ ನಂತರ ಮೈಸೂರಿನ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದಿಂದ ಗುರುವಾರ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ನಡೆಸಿದವು
ಸಾರಿಗೆ ನೌಕರರ ಮುಷ್ಕರ ಅಂತ್ಯದ ನಂತರ ಮೈಸೂರಿನ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದಿಂದ ಗುರುವಾರ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ನಡೆಸಿದವು   

ಮೈಸೂರು: ಸಾರಿಗೆ ನೌಕರರ ಮುಷ್ಕರ ಅಂತ್ಯಗೊಂಡಿದೆ. ಗುರುವಾರ ನೌಕರರೆಲ್ಲರೂ ಪೂರ್ಣ ಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೂ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳು ಸಂಚಾರ ನಡೆಸಲಿಲ್ಲ.

‘ಮೈಸೂರು ಗ್ರಾಮಾಂತರ ವಿಭಾಗದmysಲ್ಲಿನ 2600 ನೌಕರರು ಕರ್ತವ್ಯಕ್ಕೆ ಹಾಜರಾದರು. ಸೆಮಿ ಲಾಕ್‌ಡೌನ್‌ನ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಗುರುವಾರ ನಮ್ಮ ವಿಭಾಗದಿಂದ ಕೇವಲ 270 ಬಸ್‌ ಸಂಚರಿಸಿದವು. ಜನ ಸಂಚಾರವೇ ವಿರಳವಾಗಿದ್ದರಿಂದ ಕಲೆಕ್ಷನ್‌ ಸಹ ಕುಸಿತಗೊಂಡಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್‌ ತಿಳಿಸಿದರು.

‘ಮೈಸೂರು ನಗರ ವಿಭಾಗದಲ್ಲಿ 370 ಬಸ್‌ಗಳಿವೆ. 1800 ನೌಕರರು ಮುಷ್ಕರದಿಂದ ಕರ್ತವ್ಯಕ್ಕೆ ಮರಳಿದ್ದಾರೆ. ಆದರೂ ಗುರುವಾರ ಪೂರ್ಣ ಪ್ರಮಾಣದ ಕಾರ್ಯಾಚರಣೆ ನಡೆಸಲಾಗಲಿಲ್ಲ. ಮಧ್ಯಾಹ್ನದ ವೇಳೆಗೆ ಮೈಸೂರಿನಲ್ಲಿ ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿದವು. ಜನರು ವಹಿವಾಟಿಗಾಗಿ ಮಾರುಕಟ್ಟೆಗಳಿಗೆ ಬರದಿದ್ದರಿಂದ ಬಸ್‌ ಸಂಚಾರವೂ ವಿರಳವಾಯಿತು’ ಎಂದು ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಪಿ.ನಾಗರಾಜ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.‌

ADVERTISEMENT

‘ಜನರ ಬೇಡಿಕೆ ಬಂದ ಮಾರ್ಗಗಳಲ್ಲಷ್ಟೇ 244 ವಾಹನ ಓಡಿಸಿದೆವು. ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಿದರೂ ನಿರೀಕ್ಷೆಯಷ್ಟು ಜನರು ಬಸ್‌ ಹತ್ತುತ್ತಿಲ್ಲ. ತಿಂಗಳ ಆರಂಭದಿಂದ ಶುರುವಾಗಿರುವ ನಷ್ಟ ಈಗಲೂ ಮುಂದುವರೆದಿದೆ’ ಎಂದು ಅವರು ಹೇಳಿದರು.

ನಗರ ಹಾಗೂ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಗುರುವಾರ ಜನದಟ್ಟಣೆ ಕಡಿಮೆ ಕಂಡು ಬಂದಿತು. ಆಯಾ ಪ್ಲಾಟ್‌ ಫಾರ್ಮ್‌ಗಳಲ್ಲಿ ಬಸ್‌ಗಳು ಜನರಿಗಾಗಿ ತಾಸುಗಟ್ಟಲೇ ಕಾದು ನಿಂತಿದ್ದ ಚಿತ್ರಣ ಗೋಚರಿಸಿತು. ಹಲವು ದಿನದ ಬಳಿಕವೂ ಬಸ್‌ ನಿಲ್ದಾಣದಲ್ಲಿನ ಅಂಗಡಿ–ಮಳಿಗೆಗಳ ವಹಿವಾಟು ಚೇತರಿಸಿಕೊಳ್ಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.