ಮೈಸೂರು: ‘ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಹೇಳಲಾಗುತ್ತದೆ. ಆದರೆ, ವಾಸ್ತವದಲ್ಲಿ ಅದನ್ನು ಅಡಗಿಸಲಾಗಿದೆ. ಅದಕ್ಕೆ ಕಾನೂನಿನ ಅಭಯವಿದ್ದರೂ, ಮಾತನಾಡದಂತೆ ಭಯದ ವಾತಾವರಣ ಸೃಷ್ಟಿಸಲಾಗಿದೆ’ ಎಂದು ಲೇಖಕ ಗೋಪಾಲಕೃಷ್ಣ ಗಾಂಧಿ ಕಳವಳ ವ್ಯಕ್ತಪಡಿಸಿದರು.
ಇಲ್ಲಿ ಶನಿವಾರ ನಡೆದ ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ‘ಎ ನೇಮ್ ಇನ್‌ಹೆರಿಟೆಡ್, ಎ ವಾಯ್ಸ್ ಅರ್ನಡ್’ ಕುರಿತ ಗೋಷ್ಠಿಯಲ್ಲಿ, ‘ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ದೀರ್ಘ ಉಪನ್ಯಾಸ ಕೊಡುವವರು ಸತ್ಯವನ್ನೇ ಹೇಳುತ್ತಿಲ್ಲ. ಅವರು ಸ್ವವಿಮರ್ಶೆ ಮಾಡಿಕೊಳ್ಳಬೇಕಿದೆ. ಸತ್ಯವನ್ನು ಅದು ಇದ್ದಂತೆಯೇ ನಿರ್ಭಿಡೆಯಿಂದ ಹೇಳುವ ವಾತಾವರಣವು ಮಾಧ್ಯಮಗಳು ಸೇರಿದಂತೆ ಎಲ್ಲಕ್ಕೂ ಬರಬೇಕಿದೆ’ ಎಂದರು.
‘ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ರಾಜೀವ್ ಗಾಂಧಿ ಕೂಡ ತುರ್ತುಪರಿಸ್ಥಿತಿಯನ್ನು ಬಹಿರಂಗವಾಗಿ ವಿರೋಧಿಸಿದ್ದರು. ಸಂಸತ್‌ನಲ್ಲೂ ತುರ್ತು ಪರಿಸ್ಥಿತಿ ಘಟಿಸಬಾರದಿತ್ತು ಎಂದಿದ್ದರು. ಕೆಲವರಿಗೆ ಮಾತ್ರ ಇಂಥ ಧೈರ್ಯವಿರುತ್ತದೆ. ಜನರು ಮೌನವಾಗಿಯೇ ಚುನಾವಣೆ ಮೂಲಕ ಉತ್ತರ ಕೊಟ್ಟಿದ್ದರು’ ಎಂದು ಸ್ಮರಿಸಿದರು.
‘ತುರ್ತು ಪರಿಸ್ಥಿತಿ ಮತ್ತೆ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಮರುಕಳಿಸಬಹುದು. ಅಧಿಕಾರಶಾಹಿ ಹಾಗೂ ಸರ್ವಾಧಿಕಾರ ಶಕ್ತಿಯ ವಿರುದ್ಧ ಗಟ್ಟಿಯಾಗಿ ಮಾತಾಡುವ ಧೈರ್ಯ ಎಲ್ಲರಿಗೂ ಬೇಕಾಗುತ್ತದೆ. ರವೀಂದ್ರನಾಥ ಟ್ಯಾಗೋರ್ ಅವರ ‘ಭಯವಿಲ್ಲದ ಮನಸ್ಸು ಮಾತ್ರವೇ ತಲೆಯೆತ್ತಿ ನಡೆಯುತ್ತದೆ’ ಎಂಬ ಮಾತನ್ನು ನಾವು ನೆನಪಿಸಿಕೊಳ್ಳಬೇಕು’ ಎಂದರು.
ವಿಭಜನೆಯ ಕಥೆಗಳು: ಪತ್ರಕರ್ತೆ ಭಾವನಾ ಸೊಮಾಯ ಅವರ ದೇಶ ವಿಭಜನೆಯ ಕಥೆಗಳಿಗೆ ಸಹೃದಯರು ಕಿವಿಯಾದರು. ಅಮಿತಾಬ್ ಬಚ್ಚನ್, ಹೇಮಾ ಮಾಲಿನಿ ಸೇರಿದಂತೆ ಬಾಲಿವುಡ್ ತಾರೆಗಳ ಜೀವನ ಕಥೆಯನ್ನು ಪುಸ್ತಕವಾಗಿಸಿದ ಕಥೆಯನ್ನು ಹೇಳುತ್ತಲೇ, ತಮ್ಮದೇ ಪುಸ್ತಕ ‘ಫೇರ್‌ವೆಲ್ ಕರಾಚಿ’ಯ ಕೆಲ ಪುಟಗಳನ್ನು ಓದಿದರು. ಅವರ ತಂದೆಯವರು ಹೇಳುತ್ತಿದ್ದ ಕರಾಚಿಯ ಕಥೆಗಳನ್ನು ನೆನಪಿಸಿಕೊಂಡರು.
‘ಸೇನಾ ಶಕ್ತಿಯ ಅನಾವರಣ’
‘ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಪಾಕಿಸ್ತಾನದ ಸುಳ್ಳು ಹಾಗೂ ಚೀನಾದ ಶಸ್ತ್ರಾಸ್ತ್ರಗಳ ಟೊಳ್ಳನ್ನು ತೋರಿತಲ್ಲದೆ. ದೇಶದ ಸೇನೆಯ ಶಕ್ತಿ ಅನಾವರಣಗೊಳಿಸಿತು’ ಎಂದು ಪತ್ರಕರ್ತ ವಿಷ್ಣು ಸೋಮ್ ಹೇಳಿದರು. ‘ಆಪರೇಷನ್ ಸಿಂಧೂರ ಆ್ಯಂಡ್ ದ ಎಸ್ಕಲೇಷನ್ ಮ್ಯಾಟ್ರಿಕ್ಸ್’ ಕುರಿತ ಗೋಷ್ಠಿಯಲ್ಲಿ ಮಾತನಾಡಿ ‘ಪಹಲ್ಗಾಮ್ ದಾಳಿಯ ನಂತರ ಭಾರತೀಯ ಸೇನೆ ತಿರುಗೇಟು ನೀಡಿತು. ವಾಯುಪಡೆಯ ನಿಖರವಾದ ದಾಳಿಯು ಪಾಕಿಸ್ತಾನವನ್ನು ಕಂಗೆಡಿಸಿತು. ನೌಕಾಪಡೆಯು ಪಾಕ್ ಕರಾವಳಿ ತೀರವನ್ನು ಸುತ್ತುವರಿದಿತ್ತು. ಹೀಗಾಗಿಯೇ ಕದನ ವಿರಾಮಕ್ಕೆ ಮುಂದಾಗಬೇಕಾಯಿತು’ ಎಂದರು. ಪತ್ರಕರ್ತ ಶಿವ್ ಅರೂರ್ ಮಾತನಾಡಿ ‘ಪಾಕಿಸ್ತಾನವು ಹಬ್ಬಿಸಿದ ಸುಳ್ಳು ಸುದ್ದಿಗಳು ಜಾಗತಿಕ ಮಾಧ್ಯಮಗಳಲ್ಲೂ ಬಿತ್ತರಗೊಂಡವು. ಅವುಗಳೊಂದಿಗೆ ಹೋರಾಡುವ ಪರಿಸ್ಥಿತಿ ಉದ್ಭವವಾಗಿತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.