ADVERTISEMENT

ಕೋವಿಡ್‌–19 ಪರೀಕ್ಷೆಯಲ್ಲಿ ಇಳಿಮುಖ? ಹಳ್ಳಿ ಜನರಲ್ಲಿ ಆತಂಕ

ತಪಾಸಣೆಗೆ ಪರದಾಟ: ಗ್ರಾಮೀಣರ ಸಂಕಟ

ಡಿ.ಬಿ, ನಾಗರಾಜ
Published 7 ಮೇ 2021, 4:23 IST
Last Updated 7 ಮೇ 2021, 4:23 IST
ಮೈಸೂರಿನ ಜಯನಗರದ ಆರೋಗ್ಯ ಕೇಂದ್ರದಲ್ಲಿ ಕೋವಿಡ್‌–19 ತಪಾಸಣೆ
ಮೈಸೂರಿನ ಜಯನಗರದ ಆರೋಗ್ಯ ಕೇಂದ್ರದಲ್ಲಿ ಕೋವಿಡ್‌–19 ತಪಾಸಣೆ   

ಮೈಸೂರು: ಕೊರೊನಾ ವೈರಸ್‌ನ ಎರಡನೇ ಅಲೆ ಗ್ರಾಮಗಳಿಗೂ ದಾಂಗುಡಿಯಿಟ್ಟಿದೆ. ಸೋಂಕಿನ ಲಕ್ಷಣವಿರುವವರು ತಪಾಸಣೆಗೆ ಪರದಾಡುವ ಪರಿಸ್ಥಿತಿ, ಇದೀಗ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.

ಕೋವಿಡ್‌ನಿಂದ ಹಳ್ಳಿಗಳಲ್ಲೂ ಜನರು ಮೃತಪಡುತ್ತಿದ್ದಾರೆ. ಸೋಂಕು ಹಲವರನ್ನು ತೀವ್ರವಾಗಿ ಬಾಧಿಸುತ್ತಿದೆ. ತಮ್ಮ ನೆರೆ–ಹೊರೆಯಲ್ಲೇ ಸಂಭವಿಸುತ್ತಿರುವ ಸಾವು, ಕೆಲವರನ್ನು ತೀವ್ರ ಆತಂಕಕ್ಕೆ ದೂಡಿದೆ.

ಸೋಂಕಿನ ಲಕ್ಷಣ ಗೋಚರಿಸಿದವರು ಇದೀಗ ಸ್ವಯಂಪ್ರೇರಿತರಾಗಿ ಪರೀಕ್ಷಾ ಕೇಂದ್ರಗಳತ್ತ ದಾಪುಗಾಲಾಕುತ್ತಿದ್ದಾರೆ. ಆದರೆ ತಪಾಸಣೆ ಮಾಡಿಸಿಕೊಳ್ಳಲು ಪರದಾಡುವಂತಾಗಿದೆ. ಬಹುತೇಕ ಕಡೆ ತಪಾಸಣಾ ಕೇಂದ್ರಗಳೇ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತಿಲ್ಲ. ತಾಲ್ಲೂಕು ಕೇಂದ್ರಕ್ಕೆ ಎಡತಾಕಿದರೂ ತಪಾಸಣೆ ಮಾಡಿಸಿಕೊಳ್ಳಲಾಗುತ್ತಿಲ್ಲ ಎಂಬ ಅಳಲು ಗ್ರಾಮೀಣರದ್ದಾಗಿದೆ.

ADVERTISEMENT

‘ಮನೆಯಲ್ಲಿ ತಮ್ಮನಿಗೆ ಕೋವಿಡ್‌ ದೃಢಪಟ್ಟಿತು. ಆತ ಪ್ರತ್ಯೇಕ ವಾಸದಲ್ಲೇ ಇದ್ದಾನೆ. 15 ದಿನ ಕಳೆಯಿತು. ಇದೀಗ ನನಗೂ ಸೋಂಕಿನ ಲಕ್ಷಣ ಕಾಣಿಸಿಕೊಂಡವು. ಆತನೇ ಬಲವಂತವಾಗಿ ತಪಾಸಣೆಗೊಳಗಾಗು ಎಂದು ಕಳುಹಿಸಿದ. ಆದರೆ ನನಗೆ ಎಲ್ಲಿಯೂ ಪರೀಕ್ಷೆ ಮಾಡಿಸಿಕೊಳ್ಳಲಾಗಲಿಲ್ಲ’ ಎಂದು ಹಂಚ್ಯಾ ಗ್ರಾಮದ ಕೃಷ್ಣ ತಿಳಿಸಿದರು.

‘ನಮ್ಮೂರಲ್ಲೇ ಪರೀಕ್ಷೆ ಮಾಡಲ್ಲ. ವಿಧಿಯಿಲ್ಲದೇ ಮೈಸೂರಿಗೆ ಬಂದೆ. ಜಾಕಿ ಕ್ವಾಟ್ರಸ್‌, ಮಕ್ಕಳ ಕೂಟ, ಟೌನ್‌ಹಾಲ್‌, ಚಿಕ್ಕ ಗಡಿಯಾರ, ಚಾಮುಂಡಿಪುರಂನ ರಾಮಾನುಜ ರಸ್ತೆ ಸೇರಿದಂತೆ ಎಲ್ಲೆಡೆ ಸುತ್ತಾಡಿದೆ. ಎಲ್ಲ ತಪಾಸಣಾ ಕೇಂದ್ರಗಳಲ್ಲೂ ನನ್ನ ಪರೀಕ್ಷೆಯನ್ನೇ ಮಾಡಲಿಲ್ಲ. ನಾನೇನು ಮಾಡಬೇಕು? ಎಂಬುದೇ ತೋಚದಂತಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.

‘ನಮ್ಮೂರು ಮಾದಾಪುರ. ಎಚ್‌.ಡಿ.ಕೋಟೆ ತಾಲ್ಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿದೆ. ಸೋಮವಾರ ತಪಾಸಣೆಗೊಳಪಟ್ಟಿದ್ದೇವೆ. ಇದೂವರೆವಿಗೂ ಪರೀಕ್ಷೆಯ ವರದಿ ಬಂದಿಲ್ಲ. ಇದು ನಿತ್ಯವೂ ನಮ್ಮನ್ನು ಆತಂಕದಲ್ಲೇ ಕಾಲ ಕಳೆಯುವಂತೆ ಮಾಡಿದೆ’ ಎಂದು ತಾಯಿ–ಮಗಳಿಬ್ಬರು ತಿಳಿಸಿದರು.

‘ನಮ್ಮ ಮನೆಯಲ್ಲಿ 11 ಜನರಿದ್ದೇವೆ. ನಮ್ಮಿಬ್ಬರಿಗೆ ಸೋಂಕಿನ ಲಕ್ಷಣ ಹೆಚ್ಚಿದ್ದವು. ಅನಿವಾರ್ಯವಾಗಿ ಸೋಮವಾರ ನಸುಕಿನಲ್ಲೇ ಎಚ್‌.ಡಿ.ಕೋಟೆಯ ಕೋವಿಡ್‌ ತಪಾಸಣಾ ಕೇಂದ್ರದಲ್ಲಿ ಪರೀಕ್ಷೆಗಾಗಿ ಕಾದು ಕುಳಿತಿದ್ದೆವು. ಬೆಳಿಗ್ಗೆ 11.30 ಆದರೂ ಅಲ್ಲಿದ್ದ ಸಿಬ್ಬಂದಿ ನಮ್ಮ ಗಂಟಲು ದ್ರವ ಪಡೆಯಲಿಲ್ಲ. ನಮ್ಮಂತೆ ತಪಾಸಣೆಗೆ ಬಿಸಿಲಲ್ಲೇ ಕಾದಿದ್ದವರು ಜೋರು ಮಾಡಿದ ಬಳಿಕ ಕೆಲಸ ಶುರು ಮಾಡಿದರು’ ಎಂದು ಅವರು ಹೇಳಿದರು.

‘24 ತಾಸಿನಲ್ಲೇ ವರದಿ ಬರಲಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ ನಾಲ್ಕು ದಿನವಾದರೂ ನಮ್ಮ ವರದಿ ಬಂದಿಲ್ಲ. ಮನೆಯಲ್ಲಿ ಎಲ್ಲರೂ ಆತಂಕಿತರಾಗಿದ್ದೇವೆ. ದೈನಂದಿನ ಬದುಕು ಸ್ಥಗಿತವಾಗಿದೆ. ಏನೊಂದು ತೋಚದೆ ನಾವೇ ಕೋವಿಡ್‌ನ ಔಷಧೋಪಚಾರ ಆರಂಭಿಸಿದ್ದೇವೆ. ಇದು ಎಷ್ಟು ಒಳ್ಳೆಯದು, ಕೆಟ್ಟದ್ದು ಎಂಬುದು ಗೊತ್ತಾಗದಾಗಿದೆ’ ಎಂದು ‘ಪ್ರಜಾವಾಣಿ’ ಬಳಿ ತಮ್ಮ ಕುಟುಂಬ ಎದುರಿಸುತ್ತಿರುವ ಸದ್ಯದ ಚಿತ್ರಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.