ರಕ್ತ
ಸಾಂದರ್ಭಿಕ ಚಿತ್ರ
ಮೈಸೂರು: ತುರ್ತು ಸಂದರ್ಭ ಹಾಗೂ ಶಸ್ತ್ರಚಿಕಿತ್ಸೆಯ ವೇಳೆ ರಕ್ತ ಸಂಗ್ರಹ ಇದ್ದರೆ ರೋಗಿಯ ಶಸ್ತ್ರಚಿಕಿತ್ಸೆ ಮತ್ತು ಅಗತ್ಯಕ್ಕೆ ತಕ್ಕಂತೆ ರಕ್ತ ಪೂರೈಕೆ ಮಾಡಲು ಸಾಧ್ಯವಾಗುತ್ತದೆ. ಆದರೆ, ನಗರದಲ್ಲಿ ರಕ್ತದ ಅಭಾವವಿದ್ದು, ಇರುವ ಸಂಗ್ರಹಣೆಯಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ.
ಮೈಸೂರಿನಲ್ಲಿ 9 ರಕ್ತನಿಧಿ ಕೇಂದ್ರ ಇದೆ. ಇಲ್ಲಿನ ಆಸ್ಪತ್ರೆಗಳಿಗೆ ಜಿಲ್ಲೆಯ ವಿವಿಧ ಭಾಗದ ಜನರು ಆಗಮಿಸುವುದರಿಂದ ಬೇಡಿಕೆಗೆ ಅನುಗುಣವಾಗಿ ರಕ್ತದ ಪೂರೈಕೆಯಾಗುತ್ತಿಲ್ಲ. ರಕ್ತದಾನ ಶಿಬಿರಗಳಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದರಿಂದ ಈ ಕೊರತೆ ನೀಗಿಸಲು ಸಾಧ್ಯ. ಸಂಘ ಸಂಸ್ಥೆಗಳು ನಡೆಸುವ ರಕ್ತದಾನ ಶಿಬಿರದಲ್ಲಿ ನಿಗದಿತ ಜನರಷ್ಟೇ ಸೇರುತ್ತಿದ್ದು, ರಕ್ತದಾನ ಮಾಡಲು ಸಾರ್ವಜನಿಕರು ಮುಂದೆ ಬರಬೇಕಿದೆ.
ಸದ್ಯ A+, A-, B+, B-, AB+, AB-, O ಮಾದರಿಯ ರಕ್ತದ ಕೊರತೆ ಎದುರಾಗಿದೆ. ನಗರದಲ್ಲಿ ಸರಾಸರಿ ಶೇ 15ರಷ್ಟು ರಕ್ತದ ಕೊರತೆ ಇದೆ. ಇದರಿಂದ ಶಸ್ತ್ರಚಿಕಿತ್ಸೆ ವಿಳಂಬವಾಗುವ ಸಾಧ್ಯತೆಗಳು ಇವೆ. ಇದರ ನಡುವೆಯೂ ರಕ್ತನಿಧಿ ಕೇಂದ್ರಗಳು ಪರ್ಯಾಯ ರಕ್ತದ ವ್ಯವಸ್ಥೆಯನ್ನು ಮಾಡಿ, ಜನರಿಗೆ ತೊಂದರೆ ಆಗದಂತೆ ಕ್ರಮವಹಿಸುತ್ತಿದ್ದಾರೆ.
ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳೆರಡಕ್ಕೂ ಬೇಡಿಕೆಗೆ ಅನುಗುಣವಾಗಿ ರಕ್ತದ ಪೂರೈಕೆ ಸಾಧ್ಯವಾಗುತ್ತಿಲ್ಲ. ‘ಕೆ.ಆರ್. ಆಸ್ಪತ್ರೆಯಲ್ಲಿ ದಿನಕ್ಕೆ 60 ಪ್ಯಾಕ್ ಕೆಂಪು ರಕ್ತ ಕಣಗಳು, 12 ಯುನಿಟ್ ಪ್ಲೇಟ್ಲೇಟ್, 10 ಎಫ್‌ಎಫ್‌ಪಿ (ಫ್ರೆಶ್ ಫ್ರಾಜನ್ ಪ್ಲಾಸ್ಮಾ) ಅವಶ್ಯಕತೆ ಇದ್ದು, ನಿತ್ಯ 30 ಯುನಿಟ್ ಕೊರತೆ ಉಂಟಾಗಿದೆ. ಇಲ್ಲಿನ ರಕ್ತನಿಧಿ ಕೇಂದ್ರದಲ್ಲಿ 800 ಯುನಿಟ್ ರಕ್ತ ಶೇಖರಿಸುವ ಸಾಮರ್ಥ್ಯವಿದ್ದು, ಸದ್ಯ 115 ಯುನಿಟ್ ರಕ್ತವಿದೆ. ಹಿಂದೆ 350 ರಿಂದ 400 ಯುನಿಟ್ ರಕ್ತ ಶೇಖರಣೆ ಇರುತ್ತಿತ್ತು’ ಎಂದು ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಮುಖ್ಯಸ್ಥೆ ಡಾ.ಕುಸುಮಾ ತಿಳಿಸಿದರು.
‘ಜಿಲ್ಲೆಯಲ್ಲಿ ತಿಂಗಳಿಗೆ ಸರಾಸರಿ ಐದರಿಂದ ಆರು ಸಾವಿರ ಬಾಟಲ್ ರಕ್ತದ ಅವಶ್ಯಕತೆ ಇದೆ. ಪ್ರತಿ ತಿಂಗಳು 600 ಬಾಟಲ್‌ನಷ್ಟು ಕೊರತೆ ಎದುರಿಸುತ್ತಿದ್ದೇವೆ. ತಿಂಗಳಿಗೆ ಸುಮಾರಿ ಐದರಿಂದ ಆರು ರಕ್ತದಾನ ಶಿಬಿರಗಳನ್ನು ನಮ್ಮ ಸಂಸ್ಥೆಯಿಂದ ನಡೆಸುತ್ತೇವೆ. ಅಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಕಡಿಮೆ ಇರುತ್ತದೆ. ನಮ್ಮ ಸಂಸ್ಥೆಯಲ್ಲಿ 800 ಬಾಟಲ್ ಶೇಖರಣಾ ಸಾಮರ್ಥ್ಯವಿದ್ದು, ಸದ್ಯ 200 ಬಾಟಲ್ ಇದೆ’ ಎಂದು ಜೀವಾಧಾರ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಎಸ್.ಇ.ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.