ಮೈಸೂರು: ಕಟ್ಟಡ ತ್ಯಾಜ್ಯದಿಂದ ತುಂಬಿಹೋಗಿದ್ದ ಹಿನಕಲ್ ಗ್ರಾಮದ ಐತಿಹಾಸಿಕ ‘ದೇವರ ಕೆರೆ’ಯನ್ನು ಗ್ರಾಮಸ್ಥರೇ ಹೋರಾಡಿ ಉಳಿಸಿಕೊಂಡರು. ಸಮುದಾಯ ಪ್ರಜ್ಞೆ ಎಂಬುದು ಜಾಗೃತವಾದರೆ ‘ಜಲನಿಧಿ’ಯನ್ನು ಮುಂದಿನ ಪೀಳಿಗೆಗೆ ಹೇಗೆ ಉಡುಗೊರೆಯಾಗಿ ಕೊಡಬಹುದು ಎಂಬುದಕ್ಕೆ ಈ ಕೆರೆ ಉದಾಹರಣೆ.
15 ವರ್ಷಗಳ ಹಿಂದೆ ಕೆರೆಯ ಅಸ್ತಿತ್ವವೇ ಮಾಯವಾಗುವಂತೆ ನಗರೀಕರಣದ ದಾಳಿ ನಡೆದಿತ್ತು. ಒಳಚರಂಡಿ ನೀರು, ಕಟ್ಟಡ ತ್ಯಾಜ್ಯ ತೊಂದರೆಯಿಂದ ಬಳಲಿದ್ದ ಕೆರೆಗೆ ಜೀವವನ್ನು ಗ್ರಾಮಸ್ಥರೇ ಬೆವರು ಬಸಿದು ನೀಡಿದರು. ಅವರಿಗೆ ಜಲತಜ್ಞ ಯು.ಎನ್.ರವಿಕುಮಾರ್ ನೆರವಾದರು.
ಐತಿಹಾಸಿಕ ಕೆರೆ: ಸಾವಿರ ವರ್ಷದ ನನ್ನೇಶ್ವರ ದೇವಾಲಯಕ್ಕೆ ಹೊಂದಿಕೊಂಡಿರುವ ಈ ಐತಿಹಾಸಿಕ ‘ದೇವರ ಕೆರೆ’ ಉಳಿಸಲು ದಶಕದಿಂದಲೂ ಸರಣಿ ಪ್ರತಿಭಟನೆಗಳು ನಡೆದಿವೆ. 2018ರಲ್ಲೂ ಕೆರೆಯ ಕೆಳಭಾಗದಲ್ಲಿದ್ದ ನನ್ನೇಶ್ವರ ದೇಗುಲದ ಕಲ್ಯಾಣಿ ಉಳಿವಿಗೂ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು.
ದೇವರ ಸರೋವರ: ಈ ಕೆರೆಯನ್ನು ‘ದೇವರ ಸರೋವರ’ ಎಂದೇ ಕರೆಯಲಾಗುತ್ತಿತ್ತು. 42 ಎಕರೆಯಷ್ಟು ವಿಸ್ತಾರವಾಗಿ ಚಾಚಿದ್ದ ಕೆರೆಯ ಬಫರ್ ವಲಯವನ್ನು ದಶಕಗಳ ಹಿಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸ್ವಾಧೀನ ಪಡಿಸಿಕೊಂಡಿತು. ಅದರಿಂದ 6.6 ಎಕರೆಗೆ ನೀರಿನ ಒಡಲು ಕುಗ್ಗಿತು.
ವಿಜಯನಗರದ ಒಳಚರಂಡಿ ನೀರು, ಕಟ್ಟಡ ತ್ಯಾಜ್ಯ ಗ್ರಾಮವನ್ನೂ ತೀವ್ರ ಹಾನಿಗೊಳಿಸಿತ್ತು. ಅದರಿಂದ ನನ್ನೇಶ್ವರ ದೇಗುಲ ಹಾಗೂ ಹಿನಕಲ್‌ನ ತಮ್ಮಡಗೇರಿಯ ಭಾಗದಲ್ಲಿ ತೀವ್ರ ಪ್ರವಾಹ ಆಗುತ್ತಿತ್ತು ಎಂಬುದನ್ನು ಗ್ರಾಮಸ್ಥರು ಈಗಲೂ ನೆನೆಯುತ್ತಾರೆ.
‘ಕೆರೆಯ ಜಾಗವನ್ನೆಲ್ಲ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳು ಹಾಗೂ ಸಮುದಾಯಗಳ ಸಂಘ ಸಂಸ್ಥೆಗಳಿಗೆ ಮುಡಾ ನೀಡಿದೆ. ಹನ್ನೆರಡು ವರ್ಷದ ಹಿಂದೆ ಕೆರೆಗೆ ಬರುತ್ತಿದ್ದ ಕೊಳಚೆ ನೀರು ನಿಲ್ಲಿಸಿ, ಬೇರೆ ಲೇನ್ ಮಾಡಿದರು. ಹೂಳು ತೆಗೆದರು. ಅದರಿಂದ ಕೆರೆ ಕಾಣುತ್ತಿದೆ’ ಎನ್ನುತ್ತಾರೆ ಇಲ್ಲಿನ ನಿವಾಸಿ ಹುಂಡಿಬೀದಿಯ ಸಿದ್ಧಪ್ಪ.
‘ದೇವರ ಅಭಿಷೇಕಕ್ಕೆ ಈ ನೀರನ್ನು ಬಳಸಲಾಗುತ್ತಿತ್ತು. ಈಗಲೂ ಹಬ್ಬಗಳು ನಡೆದರೆ, ಕೆರೆ ಹಾಗೂ ಕಲ್ಯಾಣಿಗೆ ಪೂಜೆ ಸಲ್ಲಿಸಲಾಗುತ್ತದೆ’ ಎಂದು ಸ್ಮರಿಸಿದರು.
‘2012–13ರಲ್ಲಿ ಕೆರೆಯಲ್ಲಿ ತುಂಬಿದ್ದ ಕಟ್ಟಡ ತ್ಯಾಜ್ಯ, ಮಣ್ಣನ್ನು ತೆಗೆಯಲಾಯಿತು. ಮಣ್ಣಿನ ಗುಡ್ಡ ಈಗಲೂ ಇದೆ. ಅಂತರ್ಜಲ ಮರುಪೂರಣಕ್ಕೆ ಈ ಕೆರೆ ನೆರವಾಗುತ್ತದೆಂದು ಆಗಿನ ಜಿಲ್ಲಾಧಿಕಾರಿ ಹರ್ಷಗುಪ್ತ ಅವರಿಗೆ ಮನವರಿಕೆ ಮಾಡಲಾಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಟ್ರಸ್ಟ್ ಕೂಡ ಕೆರೆಯ ಪುನರುಜ್ಜೀವನಕ್ಕೆ ನೆರವಾಯಿತು. ಈ ಕೆರೆಯು ತುಂಬಿದಾಗ ಹಿನಕಲ್ ಕೆರೆಗೆ ನೀರು ಹೋಗುತ್ತದೆ’ ಎಂದು ಜಲ ತಜ್ಞ ಯು.ಎನ್.ರವಿಕುಮಾರ್ ‘ಪ್ರಜಾವಾಣಿ’ಗೆ ವಿವರಿಸಿದರು.
ಪ್ರವಾಹದಿಂದ ನಲುಗಿದ್ದ ಗ್ರಾಮಸ್ಥರು ಐತಿಹಾಸಿಕ ಕೆರೆ ಉಳಿಸಲು ಹೋರಾಟ ಸಮುದಾಯ ಪ್ರಜ್ಞೆಯ ದ್ಯೋತಕ
ಒಡಲಿಗೆ ಪ್ಲಾಸ್ಟಿಕ್ ತ್ಯಾಜ್ಯ ಕೆರೆಯ ಆವರಣವನ್ನು ಅಭಿವೃದ್ಧಿ ಮಾಡಲಾಗಿದ್ದು ರಾಜಕಾಲುವೆಯಿಂದ ಪ್ಲಾಸ್ಟಿಕ್ ಬಾಟಲಿಗಳು ಕವರ್‌ಗಳು ಮಳೆ ಬಂದಾಗ ಸೇರುತ್ತಿವೆ. ಅವು ಬರದಂತೆ ತಡೆಯಬೇಕಿದೆ. ಉಳಿದಂತೆ ಉದ್ಯಾನ ಅಭಿವೃದ್ಧಿ ಮಾಡಲಾಗಿದ್ದು ಸೋಪಾನ ಕಟ್ಟೆ ಕೆರೆ ಏರಿ ಹಾಗೂ ಆವರಣವನ್ನು ನಿರ್ವಹಣೆ ಮಾಡಬೇಕಿದೆ. ಕೆರೆಯ ಬಫರ್ ವಲಯದಲ್ಲಿ ಆಗಿರುವ ಒತ್ತುವರಿ ತೆರವಿನ ಜೊತೆಗೆ ಉಳಿದಿರುವ ಖಾಲಿ ಜಾಗಗಳನ್ನು ‘ಹಸಿರು ವಲಯ’ವಾಗಿ ಘೋಷಣೆ ಮಾಡಿದರೆ ಅದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಎಂಬುದು ಪರಿಸರಪ್ರಿಯರ ಆಶಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.