
ಮೈಸೂರು: ರಾಜ್ಯ ಹಾಗೂ ನಗರದ ಆಡಳಿತ, ರಾಜಕೀಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿರುವ 130 ವರ್ಷಗಳ ಪರಂಪರೆಯುಳ್ಳ ಇಲ್ಲಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡವು ಶಿಥಿಲಗೊಳ್ಳುತ್ತಿದೆ.
ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವಧಿಯಲ್ಲಿ ಬ್ರಿಟಿಷರ ಅಠಾರ ಕಚೇರಿ ಮಾದರಿಯಂತೆ ಇಂಡೋ-ಸಾರ್ಸೆನಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡ ಕಟ್ಟಡವು ಇಂದು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
‘2023ರಲ್ಲಿ ಸಿದ್ದಾರ್ಥ ನಗರದಲ್ಲಿನ ನೂತನ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣಕ್ಕೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಗೊಂಡ ಬಳಿಕ ಇತ್ತ ಯಾರೂ ಗಮನಿಸುತ್ತಿಲ್ಲ’ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಕಟ್ಟಡದ ಅಲ್ಲಲ್ಲಿ ಗೋಡೆಗಳ ಹೊರ ಪದರವು ಉದುರುತಿದ್ದು, ಬಿರುಕುಗಳಲ್ಲಿ ಗಿಡ ಗಂಟಿಗಳು ಬೆಳೆಯುತ್ತಿವೆ. ಕಳಸದಂತಿರುವ ಎತ್ತರದ ಗೋಪುರದಲ್ಲಿ ಅಳವಡಿಸಿರುವ ಹಲಗೆಗಳು ಒಡೆದು ಉದುರಿದೆ. ಪಡಸಾಲೆಗಳು ಪಾರಿವಾಳ, ಬಾವಲಿಗಳ ವಾಸಸ್ಥಾನವಾಗಿ ಗಬ್ಬು ನಾರುತ್ತಿದೆ.
ಈ ಹಿಂದೆ ಜನಸ್ಪಂದನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದ, ಕಟ್ಟಡದಲ್ಲಿನ ಕೌಂಟರ್ ಬಳಿಯ ಕೊಠಡಿಯೊಂದರಲ್ಲಿ ಕಸದ ರಾಶಿ ಸಂಗ್ರಹವಾಗಿದೆ. ಶೌಚಾಲಯದ ಸ್ಥಳವು ಇಲಿ, ಹೆಗ್ಗಣಗಳ ಒಡಾಟದ ಸ್ಥಳವಾಗಿದ್ದು, ಕಾಲಿಡಲು ಅಸಾಧ್ಯವಾಗಿದೆ.
ಪಡಸಾಲೆಯಲ್ಲೇ ಪಾರ್ಕಿಂಗ್: ಕಟ್ಟಡದ ಪಡಸಾಲೆಯಲ್ಲಿ ಖಾಸಗಿಯವರು ದ್ವಿಚಕ್ರವಾಹನಗಳನ್ನು ನಿಲ್ಲಿಸುವುದು ಕಂಡುಬರುತ್ತಿದೆ. ಮೂಲೆಗಳಲ್ಲಿ ಬಿದ್ದಿದ್ದ ಮದ್ಯ ಹಾಗೂ ಸಿಗರೇಟ್ ಪಾಕೆಟ್‌ಗಳು ಅನೈತಿಕ ಚಟುವಟಿಗಳ ‘ಕುರುಹು’ಗಳನ್ನು ಬಿಂಬಿಸಿದವು.
ಬೀಗ ಹಾಕಲಾದ ಬಾಗಿಲುಗಳ ಹಿಂದೆಯೂ ದೂಳು ಕಣ್ಣಿಗೆ ರಾಚುತ್ತದೆ. ಕೆಲ ಕಿಟಕಿ, ಬಾಗಿಲುಗಳಿಗೆ ಅಳವಡಿಸಿರುವ ಗಾಜುಗಳು ಒಡೆದಿದ್ದು, ಪಕ್ಷಿಗಳು ಒಳ ನುಗ್ಗುತ್ತಿವೆ.
ಹಾಳಾದ ಉದ್ಯಾನ: ನಾಲ್ವಡಿ ಅವರ ರಾಜಾಧಿಕಾರ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ, 1878-81ರ ಅವಧಿಯ ಮೈಸೂರಿನ ಮುಖ್ಯ ಆಯುಕ್ತ ಸರ್ ಜೇಮ್ಸ್ ಡೇವಿಡ್‌ಸನ್ ಗಾರ್ಡನ್ ಸ್ಮರಣಾರ್ಥ ನಿರ್ಮಿಸಿರುವ ಕಟ್ಟಡದ ಎದುರಿನ ಗಾರ್ಡನ್ ಉದ್ಯಾನವು ನಿರ್ವಹಣೆಯಿಲ್ಲದೇ ಸೊರಗುತ್ತಿದೆ.
‘ಮಳೆಯ ವಾತಾವರಣದಲ್ಲೂ ಗಿಡಗಳು ಒಣಗಿವೆ. ಜಾನುವಾರುಗಳು ಒಳ ಹೊಕ್ಕಿ ಮೇಯುತ್ತಿದ್ದು ಸೂಕ್ತ ಬೇಲಿಯೂ ಇಲ್ಲ. ಕಟ್ಟಡ ಹಿಂಭಾಗದ ಕಿರು ಉದ್ಯಾನದಲ್ಲೂ ಮರ ಬುಡಮೇಲಾಗಿ ಬಿದ್ದಿದ್ದರೂ ತೆರವಿಗೆ ಯಾವುದೇ ಕ್ರಮ ವಹಿಸಿಲ್ಲ’ ಎಂದು ಸ್ಥಳೀಯ ನಿವಾಸಿ ರಾಜೇಶ್ ದೂರಿದರು.
ವಸ್ತುಸಂಗ್ರಹಾಲಯ: ಸಲ್ಲಿಕೆಯಾಗದ ಡಿಪಿಆರ್ ಈ ಕಟ್ಟಡವನ್ನು ವಸ್ತುಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸಿ ಮೈಸೂರು ರಾಜರು ದಿವಾನರು ನೀಡಿರುವ ಆಡಳಿತ ಸುಧಾರಣೆ ಕೊಡುಗೆಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿತ್ತು. ವರ್ಷದ ಹಿಂದೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ಇನ್ನೂ ಸಲ್ಲಿಕೆಯಾಗದೆ ವಸ್ತುಸಂಗ್ರಹಾಲಯ ಯೋಜನೆ ನನೆಗುದಿಗೆ ಬಿದ್ದಿದೆ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಮೋತಿಲಾಲ್ ಕೃಷ್ಣ ಲಮಾಣಿ ‘ಕಟ್ಟಡದ ಅಭಿವೃದ್ಧಿ ಮತ್ತು ಬಳಕೆ ಉದ್ದೇಶದ ಯೋಜನೆ ಜಾರಿಯಲ್ಲಿದೆ. ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ (ಕೆಟಿಐಎಲ್) ಸಂಸ್ಥೆಯು ಇದರಲ್ಲಿ ಭಾಗಿಯಾಗಲಿದೆ. ಈ ಬಗ್ಗೆ ಪರಿಷ್ಕೃತ ಡಿಪಿಆರ್ ಸಲ್ಲಿಸಲು ಸಿದ್ಧತೆ ನಡೆದಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.