ADVERTISEMENT

ಕೋವಿಡ್‌ ಹಾಟ್‌ಸ್ಪಾಟ್‌ಗೆ ಕಾರಣವಾದ ಜುಬಿಲೆಂಟ್‌ ಪುನರಾರಂಭಕ್ಕೆ ಸರ್ಕಾರ ಒಪ್ಪಿಗೆ

ನಂಜನಗೂಡು ಔಷಧ ತಯಾರಿಕಾ ಘಟಕ

​ಪ್ರಜಾವಾಣಿ ವಾರ್ತೆ
Published 21 ಮೇ 2020, 8:44 IST
Last Updated 21 ಮೇ 2020, 8:44 IST
   

ಬೆಂಗಳೂರು: ನಂಜನಗೂಡಿನಲ್ಲಿರುವ ಜುಬಿಲೆಂಟ್ ಜೆನೆರಿಕ್‌ ಔಷಧ ತಯಾರಿಕಾ ಕಂಪನಿ ಪುನರಾರಂಭಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ.

ಕೋವಿಡ್‌–19 ಚಿಕಿತ್ಸೆಗೆ ಬಳಸುವ ಔಷಧವೂ ಸೇರಿದಂತೆ ಹಲವು ಮಹತ್ವದ ಔಷಧಗಳಿಗೆ ದೇಶ ವಿದೇಶಗಳಿಂದ ವ್ಯಾಪಕ ಬೇಡಿಕೆ ಇರುವುದರಿಂದ ಘಟಕ ಆರಂಭಿಸಲು ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿತ್ತು ಅದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.

ನಮ್ಮ ಸಂಸ್ಥೆಯು ಜೀವ ರಕ್ಷಕವಾಗಿರುವ 46 ಬಗೆಯ ಅತ್ಯಾವಶ್ಯಕ ಔಷಧಗಳನ್ನು ತಯಾರಿಸುತ್ತದೆ. ಅವುಗಳೆಂದರೆ, ಅಝಿಥ್ರೊಮೈಸಿನ್‌, ಲೋರ್ಸಾತನ್, ವಲ್ಸತ್ರಾನ್, ಇಬ್ರೆಸ್ರಾತನ್, ಕಾರ್ಬಮಜೆಪೈನ್‌. ಅಲ್ಲದೆ, ಕೋವಿಡ್‌–19 ಚಿಕಿತ್ಸೆಗೆ ಬಳಸುವ ಅಝಿಥ್ರೊಮೈಸಿನ್‌ ಡೈಹೈಡ್ರೇಟ್‌ ಮತ್ತು ಅಝಿಥ್ರೊಮೈಸಿನ್‌ ಮೊನೊಹೈಡ್ರೇಟ್‌ ಕೂಡಾ ತಯಾರಿಸಲಾಗುತ್ತಿದೆ ಎಂದು ಕಂಪನಿ ಸರ್ಕಾರಕ್ಕೆ ಮನವಿ ಮಾಡಿತ್ತು.

ADVERTISEMENT

ಔಷಧ ತಯಾರಿಕಾ ಘಟಕ ಪುನರಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಂಕು ನಿವಾರಕಗಳನ್ನು ಬಳಸಿ ಸ್ವಚ್ಛ ಮಾಡಿಡಲಾಗಿದೆ. ಸರ್ಕಾರ ಸೂಚಿಸಿರುವ ಮಾರ್ಗಸೂಚಿಯನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ ಎಂದು ಹೇಳಿದೆ.

ರಾಜ್ಯದಲ್ಲಿ ಕೋವಿಡ್‌–19 ಸೋಂಕು ಆರಂಭವಾದ ಸಂದರ್ಭದಲ್ಲಿ ಜುಬಿಲೆಂಟ್ ನಲ್ಲಿ ಪ್ರಕರಣಗಳ ಪತ್ತೆ ಆಯಿತು. ಕಂಪನಿಯಲ್ಲಿ ಹಲವರಿಗೆ ಸೋಂಕು ಹರಡಿತು. ಆ ಮೂಲಕ ಮೈಸೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಯಿತು. ವೈರಾಣು ಹರಡಲು ಮೂಲ ಕಾರಣವೇನು ಎಂಬುದನ್ನು ತನಿಖೆ ನಡೆಸಲಾಯಿತು. ಆದರೆ, ಅದರ ಮೂಲವೇ ಪತ್ತೆ ಆಗಲಿಲ್ಲ ಎಂದು ತನಿಖಾ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.