ADVERTISEMENT

ಕೈಹಿಡಿದ ‘ರೆಡ್‌ ಲೇಡಿ’ ಪಪ್ಪಯಾ

ಆರ್ಥಿಕ ಸ್ವಾವಲಂಬಿಯಾದ ಪ್ರಗತಿಪರ ರೈತ ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 5:05 IST
Last Updated 15 ನವೆಂಬರ್ 2025, 5:05 IST
ಹುಣಸೂರು ತಾಲ್ಲೂಕಿನ ಹಳೆಪುರ ಗ್ರಾಮದ ಪ್ರಗತಿಪರ ರೈತ ಶ್ರೀನಿವಾಸ್‌ ತಮ್ಮ ಹೊಲದಲ್ಲಿ ಬೆಳೆದ ರೆಡ್‌ ಲೇಡಿ ತಳಿ ಪಪ್ಪಯಾ ಕಠಾವಿನಲ್ಲಿ ತೊಡಗಿದ್ದಾರೆ.
ಹುಣಸೂರು ತಾಲ್ಲೂಕಿನ ಹಳೆಪುರ ಗ್ರಾಮದ ಪ್ರಗತಿಪರ ರೈತ ಶ್ರೀನಿವಾಸ್‌ ತಮ್ಮ ಹೊಲದಲ್ಲಿ ಬೆಳೆದ ರೆಡ್‌ ಲೇಡಿ ತಳಿ ಪಪ್ಪಯಾ ಕಠಾವಿನಲ್ಲಿ ತೊಡಗಿದ್ದಾರೆ.   

ಹುಣಸೂರು: ತಾಲ್ಲೂಕಿನ ಹಳೆಪುರದ ಪ್ರಗತಿಪರ ರೈತ ಶ್ರೀನಿವಾಸ್‌ 10 ವರ್ಷದಿಂದ ಪಪ್ಪಾಯ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ.

5 ಎಕರೆ ಭೂಮಿಯಲ್ಲಿ 2 ಎಕರೆ 20 ಗುಂಟೆ ಪಪ್ಪಾಯ, ಉಳಿದ ಭೂಮಿಯಲ್ಲಿ ಶುಂಠಿ, ಸಿಹಿಕುಂಬಳ, ತೆಂಗು ಮತ್ತು ದಿನಬಳಕೆಗೆ ಬೇಕಾಗುವ ತರಕಾರಿ ಬೆಳೆಯುತ್ತಿದ್ದಾರೆ.

‘ರೆಡ್‌ ಲೇಡಿ’ ಪಪ್ಪಾಯ ತಳಿ ಬೆಳೆಯುವ ಮೊದಲು ಅವರು ‘ಪಂದ್ರ’ ತಳಿಯ ಸಸಿಗಳನ್ನು ತಲಾ ₹ 16 ರಂತೆ ಖರೀದಿಸಿ, 2 ಎಕರೆಯಲ್ಲಿ 1,700 ಸಸಿಗಳನ್ನು ಹನಿ ನೀರಾವರಿಯಲ್ಲಿ ಬೆಳೆಸಿದ್ದರು. ಸಸಿ ನಾಟಿ ಮಾಡಿ 8 ತಿಂಗಳ ಬಳಿಕ ಇಳುವರಿ ಆರಂಭವಾಗಿ ಪ್ರತಿ ವಾರಕ್ಕೆ 1.50 ಟನ್‌ ಪಪ್ಪಾಯ ಕಟಾವು ಮಾಡಿ, ಕೆ.ಜಿ.ಗೆ ₹ 15 ರಿಂದ ₹20 ರಂತೆ ಮಾರಾಟ ಮಾಡುತ್ತಿದ್ದರು. ಏಕಾಏಕಿ ಇಳುವರಿ ಕುಸಿತವಾದ ಬಳಿಕ ಅವರನ್ನು ಕೈ ಹಿಡಿದಿದ್ದು ‘ರೆಡ್‌ ಲೇಡಿ’.

ADVERTISEMENT

‘ಪಪ್ಪಾಯದಲ್ಲಿ ಹವಾಯಿಯನ್‌, ಮೆಕ್ಸಿಕನ್‌, ರೆಡ್‌ ಲೇಡಿ ಸೇರಿದಂತೆ ಹಲವು ತಳಿಗಳಿವೆ. ಸ್ಥಳೀಯವಾಗಿ ಭಾರತೀಯ, ಸೂರ್ಯೋದಯ, ಕೂರ್ಗ್‌ ಹನಿಡ್ಯೂ, ವಾಷಿಂಗ್ಟನ್‌ ಮತ್ತು ಹನಿಡ್ಯೂ ಜನಪ್ರಿಯ ತಳಿಗಳೂ ಇವೆ. ಈ ಪೈಕಿ ‘ರೆಡ್‌ ಲೇಡಿ’ ತಳಿ ತಾಲ್ಲೂಕಿನ ವಾತಾವರಣಕ್ಕೆ ಹೇಳಿ ಮಾಡಿಸಿದಂತಿದೆ. ಹಣ್ಣು ರುಚಿಕರ ಹಾಗೂ ದೊಡ್ಡಗಾತ್ರವಿದ್ದು ಹೆಚ್ಚಿನ ಬೇಡಿಕೆಯಿದೆ. ಪ್ರತಿ ಗಿಡಕ್ಕೆ ಕನಿಷ್ಠ 50 ಕೆ.ಜಿ. ಇಳುವರಿ ಸಿಗಲಿದ್ದು, ವಾರಕ್ಕೆ ಸರಾಸರಿ ಒಂದೂವರೆ ಟನ್‌ ಇಳುವರಿ ಸಿಗುತ್ತದೆ’ ಎಂದು ಅವರು ಹೇಳುತ್ತಾರೆ.

ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ತಲಪಿಸುವಲ್ಲಿ ಅವರು ಮಂಚೂಣಿಯಲ್ಲಿದ್ದಾರೆ. ಪಪ್ಪಾಯಕ್ಕೆ ಹಾನಿಯಾಗದಂತೆ ಕಾಗದದಿಂದ ಸುತ್ತಿ, ತಮ್ಮದೇ ಗೂಡ್ಸ್‌ ಆಟೊದಲ್ಲಿ ಮೈಸೂರಿನ ವಿವಿಧ ಬಡಾವಣೆಯಲ್ಲಿ ಸುತ್ತಿ ಮಾರಾಟ ಮಾಡುತ್ತಿದ್ದಾರೆ. ‘ಮೈಸೂರಿನ ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿ ಹಾಗೂ ಕಮಿಷನ್‌ ನೀಡಿ ಪದಾರ್ಥ ಮಾರಾಟ ಮಾಡುವುದು ಕಷ್ಟ’ ಎಂಬುದು ಅವರ ವಾದ.

ಪ್ರಗತಿಪರ ರೈತ ಶ್ರೀನಿವಾಸ್‌ ಬೆಳೆದ ಪಪ್ಪಾಯ ಮಾರುಕಟ್ಟೆಗೆ ಸಾಗಿಸಲು ಸಿದ್ದಗೊಳಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.