ADVERTISEMENT

‘ಹನುಮಾನ್‌ ಚಾಲೀಸಾ ಪಾರಾಯಣ’ಕ್ಕೆ ಸಜ್ಜು

ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 5:07 IST
Last Updated 14 ಫೆಬ್ರುವರಿ 2026, 5:07 IST
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹನುಮಾನ್‌ ಚಾಲೀಸಾ ಪಾರಾಯಣ ಮಹಾಯಜ್ಞಕ್ಕೆ ವೇದಿಕೆ ಸಿದ್ಧಗೊಂಡಿದೆ– ಪ್ರಜಾವಾಣಿ ಚಿತ್ರ
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹನುಮಾನ್‌ ಚಾಲೀಸಾ ಪಾರಾಯಣ ಮಹಾಯಜ್ಞಕ್ಕೆ ವೇದಿಕೆ ಸಿದ್ಧಗೊಂಡಿದೆ– ಪ್ರಜಾವಾಣಿ ಚಿತ್ರ   

ಮೈಸೂರು: ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ಹನುಮಾನ್‌ ಚಾಲೀಸಾ ಪಾರಾಯಣ ಮಹಾಯಜ್ಞಕ್ಕೆ ಇಲ್ಲಿನ ಮಹಾರಾಜ ಕಾಲೇಜು ಮೈದಾನ ಶುಕ್ರವಾರ ಸಜ್ಜುಗೊಂಡಿದೆ. ಫೆ.14ರ ಶನಿವಾರ (ಇಂದು) ಬೆಳಿಗ್ಗೆ 9ರಿಂದ ಸಾವಿರಾರು ಕಂಠಗಳಲ್ಲಿ ಮೊಳಗಲಿದೆ. 

75 ಸಾವಿರದಿಂದ ಒಂದು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಬೃಹತ್‌ ವೇದಿಕೆ ಮತ್ತು ಅಂಗಳ ನಿರ್ಮಾಣ ಮಾಡಲಾಗಿದೆ. ಜರ್ಮನ್‌ ಟೆಂಟ್‌ ನಿರ್ಮಿಸಲಾಗಿದೆ. ರೈತರು, ಸೈನಿಕರು, ಜನಸಾಮಾನ್ಯರು ಹಾಗೂ ನಾಡಿನ ಒಳಿತಿಗಾಗಿ ನಾಗರಿಕರು ಪಾರಾಯಣ ಮಾಡಲಿದ್ದಾರೆ. 50 ಸಾವಿರ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವೇಶ ಉಚಿತವಾಗಿದ್ದು, ಅನ್ನ ಪ್ರಸಾದ ವಿತರಿಸಲಾಗುವುದು. ಹನುಮದ್‌ ರಕ್ಷೆ ನೀಡಲಾಗುವುದು.

ಶುಕ್ರವಾರ ಸಿದ್ಧತೆ ಪರಿಶೀಲಿಸಿದ ಬಳಿಕ ಮಾತನಾಡಿದ ಶಾಸಕ ಕೆ.ಹರೀಶ್‌ಗೌಡ, ‘ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೊಂದವರು, ಜನ ಸಾಮಾನ್ಯರ ‍ಪರವಾಗಿ ಯೋಚಿಸುತ್ತಾರೆ. ಜನರನ್ನು ಭಕ್ತಿ ಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದಾರೆ. ಅವರ ಸಾನ್ನಿಧ್ಯದಲ್ಲಿ ಹನುಮಂತನ ಪಾರಾಯಣದ ಜೊತೆಗೆ ಶಿವ ಪಾರ್ವತಿ ಕಲ್ಯಾಣವೂ ನಡೆಯಲಿದೆ’ ಎಂದರು. 

ADVERTISEMENT

ಶಾಸಕ ಟಿ.ಎಸ್‌.ಶ್ರೀವತ್ಸ, ‘ಪಾರಾಯಣವು ಮೈಸೂರಿನ ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಲಕ್ಷಕ್ಕೂ ಹೆಚ್ಚು ಮಂದಿ ಬರುವ ವಿಶ್ವಾಸವಿದೆ’ ಎಂದು ಹೇಳಿದರು. 

ಮಾಜಿ ಮೇಯರ್ ನಾರಾಯಣ ಮಾತನಾಡಿ, ‘ಪೌರಕಾರ್ಮಿಕರ ಮಕ್ಕಳಿಗೆ ಸಂಸ್ಕೃತ ಮತ್ತು ಪೂಜಾ ವಿಧಿವಿಧಾನವನ್ನು ಗಣಪತಿ ಸಚ್ಚಿದಾನಂದ ಶ್ರೀಗಳು ಕಲಿಸಿ ಧಾರ್ಮಿಕ ಅರಿವು ಮೂಡಿಸಿದ್ದಾರೆ. ಅರಸು ಬಡಾವಣೆ ಸೇರಿದಂತೆ ವಿವಿಧೆಡೆ ದೇಗುಲಗಳ ಜೀರ್ಣೋದ್ಧಾರ ಮಾಡಿದ್ದಾರೆ. ಪಾರಾಯಣದಲ್ಲಿ ಪೌರಕಾರ್ಮಿಕ ಮಹಿಳೆಯರೂ ಪಾಲ್ಗೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು. 

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ, ನಗರ ಘಟಕದ ಅಧ್ಯಕ್ಷ ಎಲ್‌.ನಾಗೇಂದ್ರ, ಅವಧೂತ ದತ್ತಪೀಠದ ಕಾರ್ಯದರ್ಶಿ ಎಚ್‌.ವಿ.ಪ್ರಸಾದ್ ಪಾಲ್ಗೊಂಡಿದ್ದರು.

ಎಚ್‌.ವಿ. ರಾಜೀವ್‌

‘ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ 

‘2016ರ ನಂತರ 2ನೇ ಬಾರಿ ನಡೆಯುತ್ತಿರುವ ಬೃಹತ್‌ ಪಾರಾಯಣ ಇದಾಗಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೆಪಿಸಿಸಿ ಸದಸ್ಯ ಎಚ್‌.ವಿ.ರಾಜೀವ್ ಕೋರಿದರು.  ‘ಹನುಮಂತ ಎಲ್ಲರ ಪ್ರಾಣಶಕ್ತಿ ಆಗಿದ್ದಾನೆ. ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಂದ ದೊಡ್ಡಮಟ್ಟದಲ್ಲಿ ಆಯೋಜನೆಯಾಗುತ್ತಿದ್ದು ಪಾರಾಯಣದಿಂದ ನಾಡಿಗೆ ಒಳ್ಳೆಯದಾಗಲಿದೆ. ಲಕ್ಷಕ್ಕಿಂತಲೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದರು.  ‘ಪ್ರತಿ ವ್ಯಕ್ತಿಯ ಸಾಧನೆಗೆ ಆಧ್ಯಾತ್ಮಿಕ ಶಕ್ತಿಯೂ ಅಷ್ಟೇ ಮುಖ್ಯ. ಯೋಗ ಧ್ಯಾನದಂತೆ ಪಾರಾಯಣವು ಶಕ್ತಿಯನ್ನು ತಂದುಕೊಡುತ್ತದೆ. ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಮೈಸೂರಿಗರೂ ಸಾಕ್ಷಿಯಾಗಬೇಕು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.