ತಿ.ನರಸೀಪುರ: ಕೊರಚ ಸಮುದಾಯಕ್ಕೆ ನಿವೇಶನಕ್ಕಾಗಿ ಕಲ್ಪಿಸಿರುವ ಜಾಗದಲ್ಲಿ ಮೂಲ ಸೌಲಭ್ಯಗಳಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಕೊರಚ ಸಮುದಾಯದ 30ಕ್ಕೂ ಹೆಚ್ಚು ಕುಟುಂಬಗಳು ಕೆಲ ದಶಕಗಳಿಂದ ವಾಸಿಸುತ್ತಿದ್ದವು. ಅದರೆ ಮೇಲ್ಸೇತುವೆ ನಿರ್ಮಾಣದ ಬಳಿಕ ಆ ಸ್ಥಳ ಹೆದ್ದಾರಿಗೆ ಸ್ವಾಧೀನವಾಗಿದ್ದರಿಂದ ಅವರು ಸ್ಥಳ ಬಿಡಬೇಕಾಯಿತು. ಸ್ಥಳೀಯವಾಗಿ ತಿ.ನರಸೀಪುರ ಕ್ಷೇತ್ರದ ಮತದಾರರಾಗಿರುವ ಈ ಸಮುದಾಯಕ್ಕೆ ವಸತಿ ಸೌಲಭ್ಯವಿರಲಿಲ್ಲ. ಈ ಸಂಬಂಧ ಒಂದು ದಶಕದಿಂದ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿರಲಿಲ್ಲ.
ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಕಳೆದ ಜನವರಿ ತಿಂಗಳಲ್ಲಿ ಐದು ದಿನಗಳ ಕಾಲ ಅನಿರ್ದಿಷ್ಟಾವಧಿ ಧರಣಿ ನಡೆಸಿದ ನಂತರ ತಾಲ್ಲೂಕು ಆಡಳಿತ ಕಳೆದ 15 ದಿನಗಳ ಹಿಂದೆ ಪಟ್ಟಣದ ಹೊರ ವಲಯದಲ್ಲಿ ಕೊರಚ ಸಮುದಾಯಕ್ಕೆ ಸರ್ವೇ ನಂಬರ್ 462ರಲ್ಲಿ ಒಂದು ಎಕರೆ ಪ್ರದೇಶವನ್ನು ಮಂಜೂರು ಮಾಡಿಕೊಟ್ಟಿದೆ. ಆದರೆ ಅದು ಸಮುದಾಯದ ಹೆಸರಿಗೆ ಖಾತೆಯಾಗಿಲ್ಲ.
ಮೂಲ ಸವಲತ್ತುಗಳಿಲ್ಲದೇ ತಮಗೆ ದೊರೆತ ನಿವೇಶನಕ್ಕೆ ಸ್ಥಳಾಂತರಗೊಂಡಿರುವ ಅಲೆಮಾರಿ ಕೊರಚ ಸಮುದಾಯಕ್ಕೆ ಶಾಶ್ವತ ವಸತಿ ಯೋಜನೆ ಕಲ್ಪಿಸುವವರೆವಿಗೂ ತಾತ್ಕಾಲಿಕವಾಗಿ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಒದಗಿಸಬೇಕು ಎಂಬುದು ನಿವಾಸಿಗಳ ಒತ್ತಾಯ.
ಈ ಸ್ಥಳಕ್ಕೆ ‘ಶಿವ ಪಾರ್ವತಿ’ ನಗರ ಎಂದು ಹೆಸರಿಟ್ಟಿದ್ದು, ಸಮುದಾಯದ ಕೆಲ ಕುಟುಂಬಗಳು ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸಲು ಪ್ರಾರಂಭಿಸಿದ್ದಾರೆ. ಆದರೆ ಇಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲ. ಮಕ್ಕಳು ಓದಲು ರಾತ್ರಿ ವೇಳೆ ವಿದ್ಯುತ್ ಸೌಲಭ್ಯವಿಲ್ಲ. ಸುಮಾರು 15ಕ್ಕೂ ಹೆಚ್ಚು ಮಕ್ಕಳಿಗೆ ಶಾಲೆಗಳಿಗೆ ಹೋಗಲು ತೊಂದರೆಯಾಗಿದೆ.
ಪುರಸಭೆಯಿಂದ ತಾತ್ಕಾಲಿಕ ಕಂಬ ಹಾಕಿ ಬಲ್ಬ್ ಹಾಕಿದ್ದರೂ ರಾತ್ರಿ ವೇಳೆ ಸರಿಯಾಗಿ ಬೆಳಗುತ್ತಿಲ್ಲ. ಇದರಿಂದ ಕತ್ತಲಲ್ಲಿ ಕಾಲ ಕಳೆಯಬೇಕಾಗಿದೆ. ವಸತಿ ಯೋಜನೆಗೆ ಪೂರಕವಾಗಿ ಶಾಶ್ವತ ಯೋಜನೆ ಕಲ್ಪಿಸುವವರೆಗೂ ನಮಗೆ ಕುಡಿಯುವ ನೀರು ಹಾಗೂ ವಿದ್ಯುತ್ ದೀಪ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿಕೊಡಬೇಕೆಂದು ಹಾಗೂ ಶೆಡ್‌ಗಳ ನಿರ್ಮಾಣಕ್ಕೆ ಟಾರ್ಪಾಲ್ ಕೊಡಿಸಬೇಕು’ ಎಂದು ಕೊರಚ ಸಮುದಾಯದ ಮುಖಂಡ ವೆಂಕಟೇಶ್ ಮನವಿ ಮಾಡಿದರು.
‘ನಾವು ನಿರಂತರವಾಗಿ ಹೋರಾಟ ಮಾಡಿದ್ದರಿಂದ ತಾಲ್ಲೂಕು ಆಡಳಿತ ಒಂದು ಎಕರೆ ಜಮೀನು ಮಂಜೂರು ಮಾಡಿದೆ. ಆದರೆ ಸಮುದಾಯದವರ ಹೆಸರಿಗೆ ಕಂದಾಯ ಇಲಾಖೆ ಇನ್ನೂ ಖಾತೆ ಮಾಡಿ ಕೊಟ್ಟಿಲ್ಲ. ಖಾತೆ ಮಾಡಿ ಕೊಡುವುದು ಸೇರಿದಂತೆ ಜಮೀನನ್ನು ಮಟ್ಟ ಮಾಡಿ ಅವರಿಗೆ ಬಡಾವಣೆ ಮಾದರಿಯಲ್ಲಿ ಮನೆಗಳ ನಿರ್ಮಾಣ ಮಾಡಿಕೊಡಬೇಕು ’ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಆಗ್ರಹಿಸಿದರು.
ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಭೇಟಿ:
ಕೊರಚ ಸಮುದಾಯ ಮಂಜೂರಾಗಿರುವ ಪ್ರದೇಶಕ್ಕೆ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ರಾಮೇಗೌಡ ಮಂಗಳವಾರ ಭೇಟಿ ನೀಡಿ ಅಲ್ಲಿನ ಕುಟುಂಬಗಳ ಬಗ್ಗೆ ಮಾಹಿತಿ ಪಡೆದು ನಿವಾಸಿಗಳ ಮನವಿ ಆಲಿಸಿದರು.
‘ಕೊರಚ ಸಮುದಾಯದ ಕುಟುಂಬಗಳಿಗೆ ನಿವೇಶನ ದೊರಕಿಸಲು ತಾಲ್ಲೂಕು ಆಡಳಿತ ಒಂದು ಎಕರೆ ಪ್ರದೇಶ ಭೂಮಿ ನೀಡಿದೆ. ಇಲ್ಲಿ ಮೂಲ ಸೌಲಭ್ಯಗಳು ಬೇಕಿದೆ. ತಾಲ್ಲೂಕು ಆಡಳಿತ ಹಾಗೂ ಪುರಸಭೆಯಿಂದ ಆಗಬೇಕಿರುವ ಕಾರ್ಯಗಳ ಬಗ್ಗೆ ಗಮನಕ್ಕೆ ತರುತ್ತೇನೆ’ ಎಂದು ರಾಮೇಗೌಡ ತಿಳಿಸಿದರು.
'ಮಕ್ಕಳ ಶಿಕ್ಷಣಕ್ಕೆ ಕೊರತೆಯಾಗದಂತೆ 6ನೇ ತರಗತಿಯಿಂದ ಮೇಲ್ಪಟ್ಟ ತರಗತಿ ಓದುತ್ತಿರುವ ಮಕ್ಕಳಿಗೆ ಎಲ್ಲಾ ಸೌಲಭ್ಯಗಳಿರುವ ತಾಲ್ಲೂಕಿನ ವಸತಿ ಶಾಲೆಗಳಲ್ಲಿ ಉಚಿತ ಪ್ರವೇಶ ದೊರಕಿಸಿಕೊಡುತ್ತೇವೆ. ಒಂದನೇ ತರಗತಿಯಿಂದ 5ನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ಆಶ್ರಮ ಶಾಲೆಯಲ್ಲಿ ಪ್ರವೇಶ ದೊರಕಿಸಿ ಕೊಡಲಾಗುವುದು’ ಎಂದು ಭರವಸೆ ನೀಡಿದರು.
ಒಂದು ಎಕರೆ ಜಾಗ ಮಂಜೂರು 30ಕ್ಕೂ ಹೆಚ್ಚು ಕುಟುಂಬಗಳು ವಾಸ ವಿದ್ಯುತ್, ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಆಗ್ರಹ
ಈ ಸ್ಥಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣಾ ಕ್ಷೇತ್ರಕ್ಕೆ ಬರಲಿದ್ದು ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು.ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು.ಆಲಗೂಡು ಶಿವಕುಮಾರ್ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ
ಕೊರಚ ಸಮುದಾಯಕ್ಕೆ ಮಂಜೂರಾಗಿರುವ ಪ್ರದೇಶಕ್ಕೆ ಇಲಾಖೆಯಿಂದ ಸಿಗಬಹುದಾದ ಸೌಲಭ್ಯಗಳನ್ನು ಒದಗಿಸಿಕೊಡಲು ಅಗತ್ಯ ಕ್ರಮ ವಹಿಸಲಾಗುವುದುರಾಮೇಗೌಡ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.