ADVERTISEMENT

ಗಿಡದಲ್ಲಿ ಅರಳದ ಬಿ.ಟಿ. ಹತ್ತಿ

ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ, ನಂಜನಗೂಡು ತಾಲ್ಲೂಕಿನ ಹತ್ತಿ ಬೆಳೆಗಾರರಿಗೆ ನಷ್ಟ

ಡಿ.ಬಿ, ನಾಗರಾಜ
Published 14 ಅಕ್ಟೋಬರ್ 2020, 7:53 IST
Last Updated 14 ಅಕ್ಟೋಬರ್ 2020, 7:53 IST
ನಂಜನಗೂಡು ತಾಲ್ಲೂಕಿನ ಸಿದ್ದಯ್ಯನ ಹುಂಡಿಯ ಹೊಲವೊಂದರಲ್ಲಿ ಹತ್ತಿಗಿಡ ಸಮೃದ್ಧವಾಗಿ ಬೆಳೆದಿದ್ದು, ಕಾಯಿ ಕಟ್ಟಿಲ್ಲ
ನಂಜನಗೂಡು ತಾಲ್ಲೂಕಿನ ಸಿದ್ದಯ್ಯನ ಹುಂಡಿಯ ಹೊಲವೊಂದರಲ್ಲಿ ಹತ್ತಿಗಿಡ ಸಮೃದ್ಧವಾಗಿ ಬೆಳೆದಿದ್ದು, ಕಾಯಿ ಕಟ್ಟಿಲ್ಲ   

ಮೈಸೂರು: ಹೊಲದಲ್ಲಿ ಆಳೆತ್ತರಕ್ಕೆ ಬೆಳೆದು ನಿಂತ ಬಿ.ಟಿ ಹತ್ತಿ ಗಿಡದಲ್ಲಿ ಹೂ ಬಿಡದೇ, ಕಾಯಿ ಕಟ್ಟದೇ, ಜಿಲ್ಲೆಯ ಎಚ್‌.ಡಿ.ಕೋಟೆ ಹಾಗೂ ನಂಜನಗೂಡು ತಾಲ್ಲೂಕಿನ ಹತ್ತಿ ಬೆಳೆಗಾರರು ಕಂಗಾಲಾಗಿದ್ದಾರೆ.

ಹತ್ತಿ ಕೃಷಿಗಾಗಿ ಮಾಡಿದ ಖರ್ಚು ಕೂಡ ಕೈಗೆ ಮರಳದಂತಾಗಿದ್ದು, ಕೋವಿಡ್‌ ಸಂಕಷ್ಟದ ಕಾಲದಲ್ಲಿ ರೈತರು ದಿಕ್ಕು ತೋಚದಂತಾಗಿದ್ದಾರೆ.

ಜಿಲ್ಲೆಯ ವ್ಯಾಪ್ತಿಯಲ್ಲಿ 40,860 ಹೆಕ್ಟೇರ್‌ ಪ್ರದೇಶದಲ್ಲಿ ಬಿ.ಟಿ.ಕಾಟನ್ ಬೆಳೆ ಇದೆ. ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ 26,025 ಹೆಕ್ಟೇರ್‌ ಹಾಗೂ ನಂಜನಗೂಡು ತಾಲ್ಲೂಕಿನ 12,421 ಹೆಕ್ಟೇರ್‌ನಲ್ಲಿ ಹತ್ತಿ ಬೆಳೆಯಿದೆ. ಹುಣಸೂರು, ಮೈಸೂರು ತಾಲ್ಲೂಕಿನಲ್ಲೂ ಸ್ವಲ್ಪ ಪ್ರಮಾಣದಲ್ಲಿ ಬೆಳೆಯಲಾಗಿದೆ.

ADVERTISEMENT

‘ಏಳು ಎಕರೆ ಭೂಮಿಗೆ ಐದು ತರಹದ ಹತ್ತಿ ಬೀಜ ಹಾಕಿದ್ದೆ. ಸಕಾಲಕ್ಕೆ ಮಳೆಯಾಗಿದ್ದರಿಂದ ಗಿಡಗಳೂ ಸಮೃದ್ಧಿಯಾಗಿ ಬೆಳೆದವು. ಆದರೆ ಮೊಗ್ಗು ಹೂವಾಗಿ, ಹೂವು ಕಾಯಿ ಕಟ್ಟುವ ಪ್ರಕ್ರಿಯೆ ಗಿಡದಲ್ಲಿ ನಡೆಯಲಿಲ್ಲ. ವಾರ– ಹದಿನೈದು ದಿನ ತಡವಾಗಬಹುದು ಎಂದು ಕಾದರೂ ಹತ್ತಿ ಅರಳಲಿಲ್ಲ’ ಎಂದು ನಂಜನಗೂಡು ತಾಲ್ಲೂಕಿನ ಸಿದ್ದಯ್ಯನಹುಂಡಿಯ ಸಿದ್ದರಾಜು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಕೆಲವೆಡೆ ಈಗ ಕಾಯಿ ಕಟ್ಟುತ್ತಿದೆ. ಆದರೆ ಪ್ರಯೋಜನವಾಗದು. ಮಾಡಿದ ಖರ್ಚಿನ ಕಾಲು ಭಾಗವೂ ಕೈಗೆ ಮರಳದು. ನಮ್ಮೂರಲ್ಲಿ 350 ಕುಳ (ಕೃಷಿಕರು) ಇದ್ದು, ಅವರಲ್ಲಿ 300 ಮಂದಿ ಹತ್ತಿ ಹಾಕಿದ್ದರು. ಎಲ್ಲರ ಬೆಳೆಯೂ ಇದೇ ಸ್ಥಿತಿ. ಕೆಲವರು ಕಾಟನ್‌ ಕಿತ್ತು ಹುರುಳಿ ಬಿತ್ತಿದ್ದಾರೆ’ ಎಂದರು.

‘ಮೂರು ಎಕರೆಯಲ್ಲಿನ ಹತ್ತಿ ಕೃಷಿಗಾಗಿ ₹ 20 ಸಾವಿರ ಖರ್ಚು ಮಾಡಿದ್ದೆ. ಹೊಲದಲ್ಲಿನ ಎಲ್ಲ ಬದುಕನ್ನು ಮನೆಯವರೇ ಮಾಡಿದ್ವಿ. ಕೂಲಿ ಆಳುಗಳನ್ನು ಕೆಲಸಕ್ಕೆಂದು ಕರೆದುಕೊಂಡಿದ್ದರೆ ಖರ್ಚಿನ ಹೊರೆ ಮತ್ತಷ್ಟು ಹೆಚ್ಚುತ್ತಿತ್ತು. ಇಷ್ಟಾದರೂ ನಯಾಪೈಸೆ ಕೈಗೆ ಮರಳದಾಗಿದೆ’ ಎಂದು ಕೃಷ್ಣಾಪುರದ ನಂಜುಂಡಸ್ವಾಮಿ ಗದ್ಗದಿತರಾದರು.

ಕೃಷಿ ವಿಜ್ಞಾನಿಗಳಿಂದ ಪರಿಶೀಲನೆ

‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ರೈತರ ಜಮೀನಿನಲ್ಲಿ ಪರಿಶೀಲನೆ ನಡೆಸಿದೆ. ನಿರ್ವಹಣೆ ಕೊರತೆ, ವಾತಾವರಣದಲ್ಲಿನ ವ್ಯತ್ಯಾಸ ಹಾಗೂ ಫಲವತ್ತತೆ ಕಡಿಮೆಯಾಗಿದ್ದರಿಂದ ಹತ್ತಿ ಅರಳಿಲ್ಲ. ಇಳುವರಿಯೂ ತುಂಬಾ ಕ್ಷೀಣಿಸಿದೆ ಎಂಬ ವರದಿ ನೀಡಿದೆ’ ಎಂದು ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.