ಮೈಸೂರು: ‘ಖಗೋಳ ವಿಜ್ಞಾನ ಅರ್ಥೈಸಿಕೊಂಡರೆ ಜಾತಿ, ಧರ್ಮ, ಜನಾಂಗ ಎಂಬ ಭೇದಗಳಲ್ಲ ಕೊನೆಯಾಗುತ್ತವೆ. ಜ್ಞಾನ, ಮಾನವೀಯತೆಯಷ್ಟೇ ಮುಖ್ಯವಾಗುತ್ತದೆ’ ಎಂದು ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಯ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಪ್ರೊ.ನೀರುಜ್ ಮೋಹನ್ ರಾಮಾನುಜಂ ಪ್ರತಿಪಾದಿಸಿದರು.
ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ನಡೆಯುತ್ತಿರುವ 8ನೇ ಆವೃತ್ತಿಯ ‘ಮೈಸೂರು ವಿಜ್ಞಾನ ನಾಟಕೋತ್ಸವ’ದಲ್ಲಿ ಶುಕ್ರವಾರ ‘ಖಗೋಳ ವಿಜ್ಞಾನ ಹಾಗೂ ಮಾನವರ ಅವರೋಹಣ’ ಕುರಿತು ಮಾತನಾಡಿದರು.
‘ಖಗೋಳ ವಿಜ್ಞಾನದಲ್ಲಿ ನಡೆದ ಸಂಶೋಧನೆಗಳು ವಿಶ್ವದ ಮೇಲೆ ಕ್ರಾಂತಿಕಾರಕ ಪರಿಣಾಮ ಉಂಟು ಮಾಡಿದವು. ಶತಮಾನದಿಂದ ಮತ್ತೊಂದು ಭೂಮಿಯ ಹುಡುಕಾಟದಲ್ಲಿ ನಾವಿದ್ದೇವೆ’ ಎಂದರು.
‘ವಿಶ್ವವು ಭೂಮಿ ಕೇಂದ್ರಿತವಲ್ಲ. ಭೂಮಿ ಸೂರ್ಯನ ಸುತ್ತಲು ಸುತ್ತುವ ಗ್ರಹ ಎಂಬುದನ್ನು ನಿಕೋಲಸ್ ಕೋಪರ್ನಿಕಸ್ 15ನೇ ಶತಮಾನದಲ್ಲಿ ಪ್ರಪಂಚಕ್ಕೆ ಹೇಳಿದ್ದನು. ಅಲ್ಲಿಂದ ಖಗೋಳ ಭೌತವಿಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಆದವು. ಆಗ ಕ್ಯಾಥೋಲಿಕ್ ಚರ್ಚ್ ಇದನ್ನು ಬಲವಾಗಿ ವಿರೋಧಿಸಿತ್ತು’ ಎಂದರು.
‘ಖಗೋಳ ವಿಜ್ಞಾನದ ಸಂಶೋಧನೆಗಳನ್ನು ಪ್ರತಿಪಾದಿಸಲು ಗಣಿತ, ರಾಸಾಯನಿಕ ವಿಜ್ಞಾನ, ಭೌತವಿಜ್ಞಾನದ ನೆರವನ್ನು ಪಡೆಯಲಾಯಿತು. ಆಕಾಶಗಂಗೆ ಗ್ಯಾಲಕ್ಸಿಯಲ್ಲಿ ಸೂರ್ಯ ಒಂದು ಸಣ್ಣ ನಕ್ಷತ್ರವೆಂದು ತಿಳಿಯಿತು. 1910ರ ನಂತರ ಟೆಲಿಸ್ಕೋಪ್‌ಗಳ ಸಹಾಯದಿಂದ ಸಾವಿರಾರು ನಕ್ಷತ್ರಪುಂಜಗಳನ್ನು ಗುರುತಿಸಲಾಯಿತು. ಖಗೋಳ ವಿಜ್ಞಾನ ಬೃಹತ್ತಾಗಿ ಬೆಳೆಯುತ್ತಲೇ ಇದೆ’ ಎಂದು ತಿಳಿಸಿದರು.
‘ಲಕ್ಷಾಂತರ, ಕೋಟ್ಯಾಂತರ ನಕ್ಷತ್ರಗಳಲ್ಲಿ ಒಂದಾದರೂ ಭೂಮಿಯನ್ನು ಹೋಲುವ ಗ್ರಹವಿದೆ ಎಂಬ ನಂಬಿಕೆಯೇ ಬಾಹ್ಯಾಕಾಶ, ಗಗನಯಾನಕ್ಕೆ ಕಾರಣವಾಗಿದೆ. ಕಾಸ್ಮೋಲಾಜಿಯನ್ನು ಅರ್ಥೈಸಿಕೊಳ್ಳಲು ‘ಬಿಗ್‌ಬ್ಯಾಂಗ್’ ಥಿಯರಿಯಂಥ ಸಂಶೋಧನೆಗಳು ನಡೆಯುತ್ತಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.