ADVERTISEMENT

ಕಳ್ಳತನ ಆರೋಪ: ಮೂವರು ಯುವಕರಿಗೆ ತಲೆ ಬೋಳಿಸಿ ಶಿಕ್ಷೆ?

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 3:10 IST
Last Updated 12 ಜನವರಿ 2021, 3:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ತಾಲ್ಲೂಕಿನ ಬೀರಿಹುಂಡಿ ಗ್ರಾಮದ ಅಂಚೆ ಕಚೇರಿಯಲ್ಲಿ ಕಳ್ಳತನ ಮಾಡಿದ್ದಕ್ಕಾಗಿ, ಮೂವರು ಯುವಕರ ತಲೆ ಬೋಳಿಸಿದ್ದಾರೆನ್ನಲಾದ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ. ಇದರಿಂದ ಬೇಸರಗೊಂಡ ಯುವಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ಯುವಕ ವಿಡಿಯೊವೊಂದ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ‘ನಾನು ನಿರಪರಾಧಿಯಾಗಿದ್ದು, ತನ್ನ ಮೇಲೆ ಅನವಶ್ಯಕವಾಗಿ ಆರೋಪ ಹೊರಿಸಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ವಾಮಿ ಮತ್ತು ಅಂಚೆ ಕಚೇರಿ ಸಿಬ್ಬಂದಿ ರಾಣಿ ಎಂಬುವವರು ತಲೆ ಬೋಳಿಸಿದ್ದಾರೆ’ ಎಂದು ಹೇಳಿದ್ದಾರೆ. ಇನ್ನುಳಿದ ಯುವಕರು ಗ್ರಾಮದಿಂದ ಪರಾರಿಯಾಗಿದ್ದಾರೆ.

ಇದೊಂದು ಅಮಾನವೀಯ ಕೃತ್ಯ ಎಂದು ಖಂಡಿಸಿರುವ ಜಾತ್ಯತೀತ ಮಹಿಳಾ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಪ್ರಕರಣ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ. ಆದರೆ, ಈ ಕುರಿತು ಯಾವುದೇ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹೆಸರು ಬಹಿರಂಗಪಡಿಸಲು ಬಯಸದ ಪೊಲೀಸರೊಬ್ಬರು, ‘ಗ್ರಾಮದಲ್ಲಿ ಎರಡು ಬಣಗಳಿದ್ದು, ಅವುಗಳಲ್ಲಿ ಒಂದು ಬಣ ಮತ್ತೊಂದು ಬಣದ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದೆ. ಈಗ ಎರಡು ಬಣದವರೂ ರಾಜಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ನೊಂದವರು ಯಾರೂ ದೂರು ನೀಡಿಲ್ಲ’ ಎಂದು ತಿಳಿಸಿದ್ದಾರೆ.

ಬೀರಿಹುಂಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾಂತಪ್ಪ ಪ್ರತಿಕ್ರಿಯಿಸಿ, ‘ಈ ಕೃತ್ಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದಿಲ್ಲ. ಪಂಚಾಯಿತಿ ಸಿಬ್ಬಂದಿ ವಿರುದ್ಧ ಕೇಳಿ ಬಂದಿರುವ ಆರೋಪ ಕುರಿತು ಪರಿಶೀಲಿಸಲಾಗುವುದು. ಘಟನೆ ಸಂಬಂಧ ಯಾವುದೇ ದೂರು ಬಂದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.