ADVERTISEMENT

ಎಚ್.ವಿಶ್ವನಾಥರ ಮಾತಿಗೂ ಕೃತಿಗೂ ಸಾಕಷ್ಟು ವ್ಯತ್ಯಾಸವಿದೆ: ಸಾ.ರಾ.ಮಹೇಶ್

‘ಸಾಮರಸ್ಯದ ರಾಜಕಾರಣಕ್ಕೆ ಧಕ್ಕೆ ತಂದಿಲ್ಲ’

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 7:11 IST
Last Updated 13 ಫೆಬ್ರುವರಿ 2022, 7:11 IST
ಸಾ.ರಾ.ಮಹೇಶ್‌
ಸಾ.ರಾ.ಮಹೇಶ್‌   

ಕೆ.ಆರ್.ನಗರ: ‘ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್ ಅವರ ಮಾತಿಗೂ ಕೃತಿಗೂ, ನಡೆಗೂ ನುಡಿಗೂ ಸಾಕಷ್ಟು ವ್ಯತ್ಯಾಸವಿದೆ’ ಎಂದು ಶಾಸಕ ಸಾ.ರಾ.ಮಹೇಶ್ ದೂರಿದರು.

‘ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ ಅಡಗೂರು ಗ್ರಾಮಕ್ಕೆ ₹1.82 ಕೋಟಿ, ಗಳಿಗೆಕೆರೆ ಗ್ರಾಮಕ್ಕೆ ₹4.27 ಕೋಟಿ, ಮಾರಗೌಡನಹಳ್ಳಿಗೆ ₹1.47 ಕೋಟಿ, ದೊಡ್ಡಕೊಪ್ಪಲು ಗ್ರಾಮಕ್ಕೆ ₹2.4 ಕೋಟಿ, ಕಾರ್ಗಳ್ಳಿ ಕೊಪ್ಪಲಿಗೆ ₹16 ಲಕ್ಷ ಅನುದಾನ ನೀಡಿದ್ದೇನೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಜನರು ಮತ ನೀಡಲಿಲ್ಲ ಎನ್ನುವ ಕಾರಣಕ್ಕೆ ಈ ಭಾಗದ ರಸ್ತೆಗಳಿಗೆ ಒಂದು ಹಿಡಿ ಮಣ್ಣು ಹಾಕುವ ಕೆಲಸ ಮಾಡಲಿಲ್ಲ ಎಂದು ಎಚ್.ವಿಶ್ವನಾಥ್ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ, ಇದರಲ್ಲಿ ಯಾವುದೇ ಹುರುಳಿಲ್ಲ’ ಎಂದರು.

ADVERTISEMENT

‘ಮಾಜಿ ಸಚಿವ ಎಸ್.ನಂಜಪ್ಪ ಅವರ ಆರೋಗ್ಯ ಸರಿಯಿಲ್ಲದಿದ್ದಾಗ ಕುರುಬ ಸಮಾಜದ ಮಂಚನಹಳ್ಳಿ ಮಹದೇವ್ ಅವರಿಗೆ ಜೆಡಿಎಸ್‌ನಿಂದ ಟಿಕೆಟ್ ಕೊಟ್ಟು ಶಾಸಕರನ್ನಾಗಿ ಮಾಡಲಾಗಿತ್ತು. ಎಚ್.ವಿಶ್ವನಾಥ್ ಅವರು ವಿಧಾನಸಭೆ ಚುನಾವಣೆಯಲ್ಲಿ ನನ್ನ ವಿರುದ್ಧ ಸೋತಾಗ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಕರೆತಂದು ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ನಿಲ್ಲಿಸಿ ಶಾಸಕರನ್ನಾಗಿ ಮಾಡಲಾಯಿತು. ದೊಡ್ಡಕೊಪ್ಪಲು ಗ್ರಾಮದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ನಾಮಫಲಕದಲ್ಲಿ ನನ್ನ ಹೆಸರು ಹಾಕಿರಲಿಲ್ಲ. ಈ ಬಗ್ಗೆ ನಾನು ಈವರೆಗೂ ಕೇಳಿಲ್ಲ. ಸಾಮರಸ್ಯ ಮತ್ತು ವಿಶ್ವಾಸದ ರಾಜಕಾರಣ ಎಂದರೆ ಇದು’ ಎಂದು ಹೇಳಿದರು.

ನವನಗರ ಅರ್ಬನ್ ಕೋ–ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹಂಪಾಪುರ ಕುಮಾರ್, ಸಾಲಿಗ್ರಾಮ ಘಟಕದ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಚಂದ್ರಶೇಖರ್, ಹನಸೋಗೆ ನಾಗರಾಜ್, ವಕ್ತಾರ ಕೆ.ಎಲ್.ರಮೇಶ್, ಪುರಸಭೆ ಸದಸ್ಯರಾದ ಕೆ.ಎಲ್.ಜಗದೀಶ್, ಮಂಜುಳಾ, ಮುಖಂಡರಾದ ಎಂ.ಟಿ.ಕುಮಾರ್, ಪ್ರಕಾಶ್, ನಾಗಣ್ಣ ಇದ್ದರು.

‘₹5.5 ಕೋಟಿ ತಂದಿದ್ದು ನಾನು’

‘ತಾಲ್ಲೂಕಿನ ಗಳಿಗೆಕೆರೆ, ಮಾರಗೌಡನಹಳ್ಳಿ, ಅಡಗೂರಿನ 5 ಕಿ.ಮೀ ಸಂಪರ್ಕ ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿಗಳಿಂದ ₹5.5 ಕೋಟಿ ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಭೂಮಿಪೂಜೆಗೆ ಶಾಸಕ ಸಾ.ರಾ.ಮಹೇಶ್ ಅವರನ್ನೂ ಕರೆಯುತ್ತೇನೆ ಎಂದು ಎಚ್.ವಿಶ್ವನಾಥ್ ಹೇಳಿದ್ದಾರೆ. ವಿಶ್ವನಾಥ್ ಅನುದಾನಕ್ಕಾಗಿ ಪತ್ರ ಬರೆದಿರಬಹುದು. ಆದರೆ, ₹5.5 ಕೋಟಿ ಮಂಜೂರಾತಿ ಮಾಡಿಸಿಕೊಂಡು ಬಂದಿದ್ದು ನಾನು. ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಎಲ್ಲ ಸರ್ಕಾರಿ ಕಾರ್ಯಕ್ರಮಗಳು ಇಲ್ಲಿನ ಶಾಸಕರ ಅಧ್ಯಕ್ಷತೆಯಲ್ಲೇ ನಡೆಯುತ್ತವೆ. ಅಧ್ಯಕ್ಷತೆ ವಹಿಸುವ ಭಾಗ್ಯ ತಾಲ್ಲೂಕಿನ ಮತದಾರರು ನನಗೆ ನೀಡಿದ್ದಾರೆ’ ಎಂದು ಸಾ.ರಾ. ಮಹೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.