ADVERTISEMENT

ತಲಕಾಡು: ಸೇತುವೆ ಇದ್ದರೂ ಬಸ್‌ ಸೇವೆ ಇಲ್ಲ, ಖಾಸಗಿ ವಾಹನ ನೆಚ್ಚಿಕೊಂಡ ಗ್ರಾಮಸ್ಥರು

ಟಿ.ಎಂ.ವೆಂಕಟೇಶಮೂರ್ತಿ
Published 2 ಫೆಬ್ರುವರಿ 2022, 2:46 IST
Last Updated 2 ಫೆಬ್ರುವರಿ 2022, 2:46 IST
ತಲಕಾಡು ಹೋಬಳಿಯ ಕಾವೇರಿಪುರ ಸೇತುವೆ
ತಲಕಾಡು ಹೋಬಳಿಯ ಕಾವೇರಿಪುರ ಸೇತುವೆ   

ತಲಕಾಡು: ಹೋಬಳಿಯ ಕಾವೇರಿಪುರ ಸೇತುವೆ ಉದ್ಘಾಟನೆಗೊಂಡು ನಾಲ್ಕು ವರ್ಷ ಕಳೆದರೂ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಆರಂಭವಾಗಿಲ್ಲ. ಇದರಿಂದ ಕಾವೇರಿಪುರ, ಕಾಳಿಹುಂಡಿ, ಪರಣಮಿಪುರ, ಬಣವೆ, ಮೇದನಿ ಗ್ರಾಮಸ್ಥರು ಖಾಸಗಿ ವಾಹನಗಳನ್ನೇ ನೆಚ್ಚಿಕೊಳ್ಳಬೇಕಿದೆ.

ಕೊಳ್ಳೇಗಾಲದ ದಾಸನಪುರಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆ ನಿರ್ಮಾಣಕ್ಕೂ ಮೊದಲು ಸತ್ತೇಗಾಲ ಗ್ರಾಮದ ಸೇತುವೆ ಮೂಲಕ ಕೊಳ್ಳೇಗಾಲ, ಮಹದೇಶ್ವರ ಬೆಟ್ಟಕ್ಕೆ ತೆರಳಬೇಕಿತ್ತು. ಹೆಚ್ಚುವರಿ 20 ಕಿ.ಮೀ ಬಳಸು ಹಾದಿಯನ್ನು ಕ್ರಮಿಸಬೇಕಿತ್ತು. ಸೇತುವೆ ಉದ್ಘಾಟನೆಯಿಂದ ಈ ಭಾಗದ ಜನರು ಸಂತಸ ವ್ಯಕ್ತಪಡಿಸಿದ್ದರು.

ಮೊದಲೆಲ್ಲ ಕೊಳ್ಳೇಗಾಲಕ್ಕೆ ತೆರಳಲು ಕಾವೇರಿ ನದಿ ದಾಟಬೇಕಿತ್ತು. ತೆಪ್ಪ, ದೋಣಿಗಳಲ್ಲಿ ತೆರಳುವುದು ಅಪಾಯವಿದ್ದುದರಿಂದ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಸ್ಟೀಮರ್‌ ಸೇವೆ ಒದಗಿಸಲಾಗಿತ್ತು. ಹೊಸ ಸೇತುವೆ ನಿರ್ಮಾಣದ ನಂತರ ಬಸ್‌ ಸೇವೆ ಆರಂಭಿಸಬೇಕಾದ
ಕೆಎಸ್‌ಆರ್‌ಟಿಸಿ ನಿರ್ಲಕ್ಷ್ಯ ತಾಳಿದೆ. ಇದರಿಂದ ಈಗಲೂ ಸ್ವಂತ ಅಥವಾ ಖಾಸಗಿ ವಾಹನಗಳನ್ನು ಅವಲಂಬಿಸಬೇಕಿದೆ.

ADVERTISEMENT

‘ತಿ.ನರಸೀಪುರ ತಾಲ್ಲೂಕಿನ ಗ್ರಾಮಗಳಲ್ಲದೆ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ, ಬಿ.ಜಿ.ಪುರ ಗ್ರಾಮಸ್ಥರಿಗೂ ಹೊಸ ಸೇತುವೆ ನಿರ್ಮಾಣದಿಂದ ಅನುಕೂಲ ಆಗಿದೆ. ಕೊಳ್ಳೇಗಾಲ ಮಾರ್ಗವಾಗಿ ಮುಡುಕುತೊರೆ, ತಲಕಾಡು ಸೇರಿದಂತೆ ಪ್ರವಾಸಿ ಸ್ಥಳಗಳಿಗೆ ಬರಲು ಸೇತುವೆ ಸಹಕಾರಿಯಾಗಿದೆ. ಆದರೂ, ಕೆಎಸ್‌ಆರ್‌ಟಿಸಿ ಸೇವೆ ಆರಂಭಿಸಿಲ್ಲ’ ಎಂದು ಹೊಳೆಸಾಲು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಬೇಸರ ವ್ಯಕ್ತಪ‍ಡಿಸಿದರು.

‘ಬಸ್‌ ಸೇವೆ ಒದಗಿಸುವುದ ರಿಂದ ಗ್ರಾಮೀಣ ಭಾಗದ ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ, ರೈತರು, ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗಲಿದೆ. ಹೀಗಾಗಿ, ಕೂಡಲೇ ಸಾರಿಗೆ ಬಸ್‌ ಸಂಚಾರವನ್ನು ಆರಂಭಿಸಬೇಕು’ ಎಂದು ಕಾವೇರಿಪುರದ ನಿವಾಸಿ ಹರೀಶ್‌ ಹೇಳಿದರು.

***

ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಸಾರಿಗೆ ಬಸ್‌ ಸೇವೆ ಒದಗಿಸಲು ಸಾಧ್ಯವಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಬಸ್‌ ಸೇವೆ ಒದಗಿಸಲಾಗುವುದು.
–ವಿಭಾಗೀಯ ಸಂಚಾರ ಅಧಿಕಾರಿ, ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.