ADVERTISEMENT

ನಗರಸಭೆಯಾದರೂ ಸರ್ಕಾರಿ ಆಸ್ಪತ್ರೆಯಿಲ್ಲ, ಬೇಡಿಕೆಗೆ ಸ್ಪಂದಿಸೋರೆ ಯಾರಿಲ್ಲ: ಅಳಲು

ಖಾಸಗಿ ಕ್ಲಿನಿಕ್‌ನ ಚಿಕಿತ್ಸೆ ದರ ಭರಿಸೋ ಶಕ್ತಿ ನಮಗಿಲ್ಲ

ಡಿ.ಬಿ, ನಾಗರಾಜ
Published 31 ಮೇ 2021, 2:41 IST
Last Updated 31 ಮೇ 2021, 2:41 IST
ಹೂಟಗಳ್ಳಿಯಲ್ಲಿ ಪಾಳು ಬಿದ್ದಿರುವ ಸರ್ಕಾರಿ ಪ್ರೌಢಶಾಲೆ
ಹೂಟಗಳ್ಳಿಯಲ್ಲಿ ಪಾಳು ಬಿದ್ದಿರುವ ಸರ್ಕಾರಿ ಪ್ರೌಢಶಾಲೆ   

ಮೈಸೂರು: ನಮ್ಮೂರು ನಗರಸಭೆಯಾಗಿ ಘೋಷಣೆಯಾಯ್ತು. ಒಂದರ ಬೆನ್ನಿಗೆ ಒಂದರಂತೆ ಎಲ್ಲದರ ಬೆಲೆಯೂ ಗಗನಕ್ಕೇರಿತು. ಆದರೆ, ಇಲ್ಲಿರುವ ಬಡವರು, ಶ್ರಮಿಕರು, ಮಧ್ಯಮ ವರ್ಗದವರಿಗೆ ಇಂದಿಗೂ ಕನಿಷ್ಠ ಸೌಕರ್ಯ ಸಿಗದಾಗಿದೆ. ಸರ್ಕಾರಿ ಸೌಲಭ್ಯ ಗಗನ ಕುಸುಮವಾಗಿದೆ.

ಇದೀಗ ಎಲ್ಲೆಡೆಯೂ ಕೊರೊನಾ ಸೋಂಕು ಬಾಧಿಸುತ್ತಿದೆ. ನಮ್ಮೂರಿಗೂ ಪಿಡುಗಿನ ಬಾಧೆ ಕೊಂಚ ಹೆಚ್ಚಿದೆ. ಇಂತಹ ಸಂಕಷ್ಟದ ಹೊತ್ತಲ್ಲೂ 40 ಸಾವಿರ ಜನಸಂಖ್ಯೆಯಿರುವ ಊರಿಗೊಂದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದಿರುವುದು ನಮ್ಮ ದೌರ್ಭಾಗ್ಯವೋ? ನಮ್ಮನ್ನಾಳುವ ಆಡಳಿತಾರೂಢರು, ಅಧಿಕಾರಿ ವರ್ಗದ ವೈಫಲ್ಯವೋ? ನಮಗೇನೊಂದು ಅರಿಯದಾಗಿದೆ.

ಮೈಸೂರಿಗೆ ಹೊಂದಿಕೊಂಡಿರುವ ಹೂಟಗಳ್ಳಿ ಗ್ರಾಮಸ್ಥರ ಆಕ್ರೋಶ–ಅಳಲಿದು.

ADVERTISEMENT

‘ಕೋವಿಡ್‌ನಿಂದ ಸಂಪಾದನೆಯೇ ಇಲ್ಲವಾಗಿದೆ. ಮನೆ ಬಾಡಿಗೆ ಕಟ್ಟೋದೆ ದುಸ್ತರವಾಗಿದೆ. ಆತಂಕದ ಈ ಹೊತ್ತಲ್ಲಿ ಸ್ವಲ್ಪ ಕೆಮ್ಮು–ನೆಗಡಿ ಬಂದರೂ ಭಯ ಬೀಳು ವಂತಾಗಿದೆ. ನಮ್ಮೂರಿನಲ್ಲಿ ಸರ್ಕಾರಿ ಆಸ್ಪತ್ರೆಯೇ ಇಲ್ಲ. ಅನಿವಾರ್ಯವಾಗಿ ಖಾಸಗಿ ಕ್ಲಿನಿಕ್‌ಗೆ ಹೋಗಲು ಕನಿಷ್ಠ ₹500 ಬೇಕಿದೆ. ಕೈಯಲ್ಲಿ ಕಾಸಿಲ್ಲದ ಹೊತ್ತಲ್ಲಿ ವಿಚಿತ್ರ ಸಂಕಟವೇ ನಮಗೆ ಎದುರಾಗುತ್ತಿದೆ’ ಎಂದು ಹೂಟಗಳ್ಳಿಯ ಪೂರ್ಣಿಮಾ ‘ಪ್ರಜಾವಾಣಿ’ ಬಳಿ ಅಲವತ್ತುಕೊಂಡರು.

‘ಪಕ್ಕದೂರಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ಬರಲು ಇದೀಗ ಬಸ್‌ ಸಂಚಾರವೂ ಇಲ್ಲ. ಆಟೊ ಮಾಡಿ ಕೊಂಡು ಹೋಗಿ ಬರೋವಷ್ಟು ಶಕ್ತಿ ನಮ್ಮಲ್ಲಿಲ್ಲ. ಮಕ್ಕಳು ದೂರವಾಗಿರುವ ವಯೋವೃದ್ಧರ ಸಂಕಷ್ಟ ಹೇಳತೀರದು. ನಮ್ಮೂರಿಗೊಂದು ಸರ್ಕಾರಿ ಆಸ್ಪತ್ರೆ ಮಾಡಿಕೊಡಿ ಎಂಬ ನಮ್ಮ ಕೂಗು ಇಂದಿಗೂ ಅರಣ್ಯ ರೋದನವಾಗಿದೆ’ ಎಂದು ಅವರು ಗದ್ಗದಿತರಾದರು.

‘ನಮ್ಮೂರಿನ ಸಂತೆಮಾಳದ ಬಳಿ ಪಾಳು ಬಿದ್ದ ಶಾಲೆಯೊಂದಿದೆ. ದಶಕದಿಂದಲೂ ಬಳಕೆಯಾಗುತ್ತಿಲ್ಲ. ಕೆಲ ತಿಂಗಳ ಹಿಂದಷ್ಟೇ ಶಾಸಕ ಜಿ.ಟಿ.ದೇವೇಗೌಡ ಅಧಿಕಾರಿಗಳೊಂದಿಗೆ ಇಲ್ಲಿಗೆ ಭೇಟಿ ನೀಡಿ, ಆರೋಗ್ಯ ಕೇಂದ್ರ ಆರಂಭಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಸ್ವಾಮಿ ತಿಳಿಸಿದರು.

‘ನಾವು ಕೋವಿಡ್‌–19 ಲಸಿಕೆ ಹಾಕಿಸಿಕೊಳ್ಳಬೇಕು ಎಂದರೆ ಪಕ್ಕದ ಇಲವಾಲಕ್ಕೆ ಹೋಗಬೇಕು. ಆ ಊರಿನ ಜನರೇ ನಸುಕಿನಿಂದಲೇ ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ವಾರವಿಡೀ ಅಲ್ಲಿಗೆ ಹೋದರೂ, ನಮ್ಮ ಪಾಳಿ ಬರೋದೇ ಇಲ್ಲ. ಆದ್ದರಿಂದ ನಮ್ಮೂರಿನಲ್ಲಿ ಲಸಿಕೆ ಹಾಕಿಸಿಕೊಂಡಿರುವವರ ಸಂಖ್ಯೆ ಕಡಿಮೆಯಿದೆ.

ಇಂತಹ ಸ್ಥಿತಿಯಲ್ಲಿ ಕೋವಿಡ್‌ನಿಂದ ರಕ್ಷಿಸಿಕೊಳ್ಳಲಿರುವ ಏಕೈಕ ಪ್ರಬಲ ಆಯುಧ ಎಂದು ಆಡಳಿತಾರೂಢರು ಹೇಳುತ್ತಿರುವ ಲಸಿಕೆಯನ್ನು ನಾವು ಹಾಕಿಸಿಕೊಳ್ಳೋದು ಯಾವಾಗ’ ಎಂದು ಅವರು ಪ್ರಶ್ನಿಸಿದರು.

‘ಇದು ನನ್ನೊಬ್ಬನ ಸ್ಥಿತಿಯಲ್ಲ. ಹೂಟಗಳ್ಳಿಯ ಬಹುತೇಕರು ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸರ್ಕಾರಿ ಆರೋಗ್ಯ ಸೇವೆ ಎಂಬುದು ನಮ್ಮೂರಿನ ಪಾಲಿಗೆ ಮರೀಚಿಕೆಯಾಗಿದೆ’ ಎಂದು ಸ್ವಾಮಿ ಅಸಮಾಧಾನ ತೋಡಿ ಕೊಂಡರು.

ಜಮೀನು ಮಂಜೂರು: ₹52 ಲಕ್ಷದ ಪ್ರಸ್ತಾವ

‘ಹಲವು ವರ್ಷದ ಬೇಡಿಕೆಯಿದು. ಕೂರ್ಗಳ್ಳಿಯಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕಾಗಿ ಎರಡು ಎಕರೆ ಭೂಮಿ ಮಂಜೂರಾಗಿತ್ತು. ಈ ಜಮೀನಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರಕರಣ ಗ್ರಾಮ ಪಂಚಾಯಿತಿಯಂತೆಯೇ ಆಗಿದೆ. ಪಹಣಿಯಲ್ಲಿ ಸರ್ಕಾರಿ ಆಸ್ಪತ್ರೆ ಎಂದು ನಮೂದಾಗಿದೆ. ಜಾಗ ಹಸ್ತಾಂತರ ಪ್ರಕ್ರಿಯೆ ನಡೆಯಬೇಕಿದೆಯಷ್ಟೇ’ ಎಂದು ಕೂರ್ಗಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಬಸವಣ್ಣ ತಿಳಿಸಿದರು.

‘ಶಾಸಕ ಜಿ.ಟಿ.ದೇವೇಗೌಡರು ಹೂಟಗಳ್ಳಿಯಲ್ಲಿನ ಪಾಳು ಬಿದ್ದಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಕೇಂದ್ರ ಆರಂಭಿಸಲು ಪ್ರಸ್ತಾವ ಸಿದ್ದಪಡಿಸಲು ಸೂಚಿಸಿದ್ದರು. ಅದರಂತೆ ಗ್ರಾಮ ಪಂಚಾಯಿತಿ ಆಡಳಿತ ₹52 ಲಕ್ಷ ವೆಚ್ಚದ ಪ್ರಸ್ತಾವವನ್ನು ಸಿದ್ದಪಡಿಸಿ ಸಲ್ಲಿಸಿದೆ. ಇದಕ್ಕೆ ಅನುಮತಿ ಸಿಕ್ಕಿಲ್ಲ’ ಎಂದರು.

‘ಹೂಟಗಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಉಪಕೇಂದ್ರವೊಂದಿದೆ. ಆದರೆ, ಅಲ್ಲಿ ಯಾವೊಂದು ಸೌಕರ್ಯ, ಸೌಲಭ್ಯವಿಲ್ಲ. ಸಮೀಪದ ಆರೋಗ್ಯ ಕೇಂದ್ರದಿಂದ ನೆರವು ಪಡೆದು, ಜನರಿಗೆ ಆರೋಗ್ಯ ಸೇವೆ ಒದಗಿಸಲು ಕ್ರಮ ಕೈಗೊಂಡಿದ್ದೇವೆ’ ಎಂದು ಬಸವಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.