ADVERTISEMENT

ಟಾರ್ಗೆಟ್‌ ಮಾಡಲು ಸಿದ್ದರಾಮಯ್ಯಗಿಂತ ಡಿಕೆಶಿ ಪ್ರಭಾವಿ ನಾಯಕರಾ?: ಡಾ.ಕೆ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 9:43 IST
Last Updated 5 ಅಕ್ಟೋಬರ್ 2020, 9:43 IST
ಡಾ. ಕೆ. ಸುಧಾಕರ್
ಡಾ. ಕೆ. ಸುಧಾಕರ್   

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ನಿವಾಸದ ಮೇಲೆ ಹಿಂದೆ ಇ.ಡಿ, ಐಟಿಯಿಂದ ದಾಳಿ ನಡೆದಿದ್ದು, ತನಿಖೆಯ ಮುಂದುವರಿದ ಭಾಗವಾಗಿ ಈಗ ಸಿಬಿಐ ದಾಳಿ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ಸೋಮವಾರ ಇಲ್ಲಿ ತಿಳಿಸಿದರು.

ರಾಜಕೀಯ ಪ್ರೇರಿತ ದಾಳಿ ಎಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ನಲ್ಲಿ ಶಿವಕುಮಾರ್ ಮಾತ್ರ ಇದ್ದಾರೆಯೇ? ಐದು ವರ್ಷ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರ ನಿವಾಸದ ಮೇಲೆ ಏಕೆ ದಾಳಿ ನಡೆದಿಲ್ಲ? ಅವರಿಗಿಂತ ಸಿದ್ದರಾಮಯ್ಯ ಪ್ರಭಾವಿ ನಾಯಕರಲ್ಲವೇ? ಮಾಸ್‌ ಲೀಡರ್‌ ಅಲ್ಲವೇ? ಹೀಗಾಗಿ, ಯಾರನ್ನೂ ಟಾರ್ಗೆಟ್‌ ಮಾಡುತ್ತಿಲ್ಲ. ಭ್ರಷ್ಟಾಚಾರ ಆರೋಪ ಇರುವುದರಿಂದ ಶಿವಕುಮಾರ್‌ ನಿವಾಸದ ಮೇಲೆ ದಾಳಿ ನಡೆದಿದೆ. ರಾಜಕಾರಣಕ್ಕೂ ದಾಳಿಗೂ ಸಂಬಂಧ ಇಲ್ಲ. ರಾಜಕೀಯ ಹಸ್ತಕ್ಷೇಪದಲ್ಲಿ ಬಿಜೆಪಿ ನಂಬಿಕೆ ಒಟ್ಟುಕೊಡಿಲ್ಲ’ ಎಂದರು.

‘ತನಿಖೆ ನಡೆದ ಮೇಲಷ್ಟೇ ಸತ್ಯ ಏನೆಂಬುದು ಗೊತ್ತಾಗಲಿದೆ. ಇದು ಪಾರದರ್ಶಕವಾಗಿ ನಡೆಯಲಿದೆ. ತಮ್ಮ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಶಿವಕುಮಾರ್ ಅವರಿಗೆ ಸಿಕ್ಕಿರುವ ಅತ್ಯುತ್ತಮ ಅವಕಾಶ’ ಎಂದರು.

ADVERTISEMENT

ಉಪಚುನಾವಣೆಯಲ್ಲಿ ಬಿಜೆಪಿ ಸೋತರೂ ಸರ್ಕಾರ ಬೀಳಲ್ಲ

'117 ಸ್ಥಾನಗಳನ್ನು ಬಿಜೆಪಿ ಸ್ವಂತ ಬಲದಿಂದ ಗೆದ್ದಿದೆ. ಮುಂದಿನ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋತರೂ ಸರ್ಕಾರ ಬಿದ್ದು ಹೋಗುವುದಿಲ್ಲ. ಹೀಗಾಗಿ, ಉಪಚುನಾವಣೆಗೂ ಶಿವಕುಮಾರ್ ಅವರ ನಿವಾಸದ ಮೇಲಿನ ದಾಳಿಗೂ ಸಂಬಂಧವಿಲ್ಲ. ಸಿಬಿಐ ಸ್ವಾಯತ್ತ ಸಂಸ್ಥೆ. ರಾಜಕೀಯ ಬಣ್ಣ ಹಚ್ಚಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಕಾಂಗ್ರೆಸ್‌ ಸುಮ್ಮನೇ ಆರೋಪ ಮಾಡುತ್ತಿದೆ’ ಎಂದು ಸಚಿವ ಡಾ.ಸುಧಾಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.