ADVERTISEMENT

ಹಸುವಿನ ಸಗಣಿ ಎತ್ತದವರು ಗೋ ರಕ್ಷಣೆ ಬಗ್ಗೆ ಬೊಬ್ಬೆ ಹೊಡೆಯುತ್ತಾರೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 10:32 IST
Last Updated 10 ನವೆಂಬರ್ 2019, 10:32 IST
ಸಾಲಿಗ್ರಾಮ ಸಮೀಪ ದಿಡ್ಡಹಳ್ಳಿ ಗ್ರಾಮದ ಮಾರಮ್ಮ, ಬಸವೇಶ್ವರ ದೇವಾಲಯವನ್ನು ಸಿದ್ದರಾಮಯ್ಯ ಉದ್ಟಾಟಿಸಿದರು
ಸಾಲಿಗ್ರಾಮ ಸಮೀಪ ದಿಡ್ಡಹಳ್ಳಿ ಗ್ರಾಮದ ಮಾರಮ್ಮ, ಬಸವೇಶ್ವರ ದೇವಾಲಯವನ್ನು ಸಿದ್ದರಾಮಯ್ಯ ಉದ್ಟಾಟಿಸಿದರು   

ಸಾಲಿಗ್ರಾಮ: ಹಸುವಿನ ಸಗಣಿ ಎತ್ತದವರು ಮತ್ತು ಹಾಲು ಕರೆಯದವರು, ನಾವು ಗೋ ರಕ್ಷಣೆ ಮಾಡುತ್ತೇವೆ ಎಂದು ಬೊಬ್ಬೆ ಹಾಕುತ್ತಾರೆಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಕೆ.ಆರ್.ನಗರ ತಾಲ್ಲೂಕಿನ ಚುಂಚಕಟ್ಟೆ ಹೋಬಳಿ ದಿಡ್ಡಹಳ್ಳಿ ಗ್ರಾಮದ ಮಾರಮ್ಮ ಮತ್ತು ಬಸವೇಶ್ವರ ದೇವಾಲಯವನ್ನು ಉದ್ಟಾಟಿಸಿ ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಕೆಲವರು ಶತಾಯ ಗತಾಯ ಪ್ರಯತ್ನ ಪಟ್ಟಿದ್ದರು. ಹೋಮ, ಹವನ ಮಾಡಿಸಿದವರಿಗೆ ದೇವರು ಫಲ ನೀಡಲಿಲ್ಲ. ನಾವು ಮಾಡುವ ಕೆಲಸದಲ್ಲಿ ದೇವರನ್ನ ಕಾಣಬೇಕೇ ವಿನಃ ಬೇರೆಯವರಿಗೆ ಕೆಟ್ಟದನ್ನು ಮಾಡಬಾರದು. ಹೋಮ ಮಾಡಿ ದೇವರಿಗೆ ಕೈಮುಗಿದರೆ ಯಾವ ದೇವರೂ ಕಾಪಾಡುವುದಿಲ್ಲ. ಕೆಲವರಿಗೆ ನನ್ನನ್ನು ಕಂಡರೆ ಅಸೂಯೆ.

ADVERTISEMENT

ಈ ಅಸೂಯೆಅವರನ್ನೇ ಸುಡುತ್ತದೆ. ನಾನು ರಾಜಕೀಯವಾಗಿ ನಾಶವಾಗಲೆಂದು ಕೆಲ ಪಟ್ಟಭದ್ರರು ಶಾಪ ಹಾಕುತ್ತಿದ್ದಾರೆ. ನಾನು ಒಳ್ಳೆಯ ಕೆಲಸ ಮಾಡಿದರೆ, ಶಾಪ ಹೇಗೆ ತಟ್ಟುತ್ತದೆ’ ಎಂದು ಪ್ರಶ್ನಿಸಿದರು.‘ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕೆ.ಆರ್.ನಗರ ತಾಲ್ಲೂಕಿನ ಗಂಧನಹಳ್ಳಿ, ದಿಡ್ಡಹಳ್ಳಿ ಗ್ರಾಮಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದೆ. ಆದರೆ, ಇಲ್ಲಿನ ಶಾಸಕರು ಹಣವನ್ನು ಬಿಡುಗಡೆ ಮಾಡಲು ಅಡ್ಡಗಾಲು ಹಾಕುತ್ತಿದ್ದಾರೆ. ಅದಕ್ಕಾಗಿ ಮುಂದಿನ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನೇ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಮುಖಂಡ ಡಿ.ರವಿಶಂಕರ್ ಮಾತನಾಡಿದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮತ್ತು ರಾಮಯ್ಯ ಅವರನ್ನು ಸನ್ಮಾನಿಸಲಾಯಿತು.

ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್‌, ಜಿ.ಪಂ ಸದಸ್ಯ ಅಚ್ಚುತಾನಂದ, ನಾಗರತ್ನಾ, ಮಾಜಿ ಶಾಸಕ ಸೋಮಶೇಖರ್, ಕೆ.ಮರೀಗೌಡ, ಮಂಜುಳಾ ಮಾನಸ, ಮಂಜುಳಾ ರಾಜ್, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಚಿರ್ನಳ್ಳಿ ಶಿವಣ್ಣ, ಕೆಪಿಸಿಸಿ ವಕ್ತಾರೆ ಐಶ್ವರ್ಯಾ ಮಹದೇವ್, ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಸಿದ್ದಶೆಟ್ಟಿ, ದಿಡ್ಡಹಳ್ಳಿ ರಘು, ಕೋಳಿಪ್ರಕಾಶ್, ಸಣ್ಣಪ್ಪ, ಹಾಡ್ಯ ಮಹದೇವಸ್ವಾಮಿಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.