ADVERTISEMENT

‘ಈ ವರ್ಷ ನಡೆದಿದ್ದು ಮಹಾವಲಸೆ, ಕಳೆದುಕೊಂಡಿದ್ದು ಮಾನವೀಯತೆ’

‘ಘುಮಕ್ಕುಡ್ ಕಾ ಅಂತರಂಗ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತ ಕೃಷ್ಣಪ್ರಸಾದ್

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 13:12 IST
Last Updated 26 ಡಿಸೆಂಬರ್ 2020, 13:12 IST
‘ಏಕತಾರಿ’ ಸಂಘಟನೆ ವತಿಯಿಂದ ರಂಗಾಯಣದ ಶ್ರೀರಂಗ ರಂಗಮಂದಿರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ದೇವನೂರ ಮಹಾದೇವ ಅವರು ಕುಪ್ಪೆ ನಾಗರಾಜ ಅವರ ‘ಅಲೆಮಾರಿಯ ಅಂತರಂಗ’ದ ಹಿಂದಿ ಅನುವಾದ ‘ಘುಮಕ್ಕುಡ್ ಕಾ ಅಂತರಂಗ್’ ಕೃತಿಯನ್ನು ಸಹಾಯಕ ಪ್ರಾಧ್ಯಾಪಕರಾದ ಕೆ.ಎಸ್.ಕರುಣಾಲಕ್ಷಿ ಅವರಿಂದ ಸ್ವೀಕರಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ.ತಿಪ್ಪೇಸ್ವಾಮಿ, ಪತ್ರಕರ್ತ ಕೃಷ್ಣಪ್ರಸಾದ್ ಇದ್ದಾರೆ
‘ಏಕತಾರಿ’ ಸಂಘಟನೆ ವತಿಯಿಂದ ರಂಗಾಯಣದ ಶ್ರೀರಂಗ ರಂಗಮಂದಿರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ದೇವನೂರ ಮಹಾದೇವ ಅವರು ಕುಪ್ಪೆ ನಾಗರಾಜ ಅವರ ‘ಅಲೆಮಾರಿಯ ಅಂತರಂಗ’ದ ಹಿಂದಿ ಅನುವಾದ ‘ಘುಮಕ್ಕುಡ್ ಕಾ ಅಂತರಂಗ್’ ಕೃತಿಯನ್ನು ಸಹಾಯಕ ಪ್ರಾಧ್ಯಾಪಕರಾದ ಕೆ.ಎಸ್.ಕರುಣಾಲಕ್ಷಿ ಅವರಿಂದ ಸ್ವೀಕರಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ.ತಿಪ್ಪೇಸ್ವಾಮಿ, ಪತ್ರಕರ್ತ ಕೃಷ್ಣಪ್ರಸಾದ್ ಇದ್ದಾರೆ   

ಮೈಸೂರು: ಪ್ರಸಕ್ತ ವರ್ಷ ಭಾರತದಲ್ಲಿ ನಡೆದಿದ್ದು ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಆಂತರಿಕ ಮಹಾವಲಸೆ ಹಾಗೂ ಕಳೆದುಕೊಂಡಿದ್ದು ಮಾನವೀಯತೆ ಎಂದು ಪತ್ರಕರ್ತ ಕೃಷ್ಣಪ್ರಸಾದ್ ತಿಳಿಸಿದರು.

‘ಏಕತಾರಿ’ ಸಂಘಟನೆ ವತಿಯಿಂದ ರಂಗಾಯಣದ ಶ್ರೀರಂಗ ರಂಗಮಂದಿರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಕುಪ್ಪೆ ನಾಗರಾಜ ಅವರ ‘ಅಲೆಮಾರಿಯ ಅಂತರಂಗ’ದ ಹಿಂದಿ ಅನುವಾದ ‘ಘುಮಕ್ಕುಡ್ ಕಾ ಅಂತರಂಗ್’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಸ್ವಾತಂತ್ರ್ಯೋತ್ತರ ಭಾರತದಲ್ಲಿಯೇ ಅತಿದೊಡ್ಡ ವಲಸೆ ಈ ವರ್ಷ ನಡೆದಿದೆ ಎಂದುಪತ್ರಕರ್ತರಾದ ಪಿ.ಸಾಯಿನಾಥ್ ಅವರು ಗುರುತಿಸಿದ್ದಾರೆ. ‘ಜನತಾ ಕರ್ಫ್ಯೂ’ಗೆ 4 ದಿನಗಳ ಅವಕಾಶ ಕೊಟ್ಟ ಕೇಂದ್ರ ಸರ್ಕಾರ 21 ದಿನಗಳ ‘ಲಾಕ್‌ಡೌನ್‌’ಗೆ ಕೇವಲ 4 ಗಂಟೆಗಳ ಅವಕಾಶ ನೀಡಿತು. ಇದರ ಘೋರ ಪರಿಣಾಮಗಳನ್ನು ವಲಸೆ ಕಾರ್ಮಿಕರು ಅನುಭವಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಅಶೋಕ್‌ ಬೆಹರಾ ಎಂಬುವವರು ಚೆನ್ನೈನಿಂದ ಒಡಿಸ್ಸಾಗೆ ಒಂದೂವರೆ ಸಾವಿರ ಕಿ.ಮೀವರೆಗೆ ತನ್ನ ಹೆಂಡತಿಯೊಂದಿಗೆ ಸೈಕಲ್‌ನಲ್ಲಿ ತೆರಳಿದರೆ, ಮಹಮ್ಮದ ಜುಬೇರ್‌ ಅವರು ದೆಹಲಿಯಿಂದ ಬಿಹಾರದವರೆಗೆ ತಮ್ಮ ತ್ರಿಚಕ್ರ ಸೈಕಲ್‌ನಲ್ಲಿ ಸಾಗಿದರು. ಚೆನ್ನೈನಲ್ಲಿದ್ದ 27 ಮಂದಿ ಮೀನುಗಾರರು ತಾವೇ ಸ್ವಂತ ದೋಣಿ ಖರೀದಿಸಿ ಜಲಮಾರ್ಗದಲ್ಲಿ ತಮ್ಮ ರಾಜ್ಯವಾದ ಒಡಿಸ್ಸಾ ತಲುಪಿದರು. ಇಂತಹ ಅನೇಕ ಕರುಣಾಜನಕ ಕಥೆಗಳನ್ನು ಈ ವರ್ಷ ಕಂಡಿದ್ದೇವೆ ಎಂದರು.

‘ಸುಖದೇವ್‌ಸಿಂಗ್ ಎಂಬುವವರು ತಮ್ಮ ಕುಟುಂಬದವರೊಂದಿಗೆ 21 ದಿನಗಳ ಕಾಲ ರಾಜಸ್ಥಾನದಿಂದ ಪಂಜಾಬಿಗೆ ಕಾಲ್ನಡಿಗೆಯಲ್ಲಿ ತೆರಳುವಾಗ ದಾರಿಯಲ್ಲಿ ಅವರಿಗೆ ಕುಡಿಯಲು ನೀರೂ ಸಹ ಜನರು ಕೊಡಲಿಲ್ಲ. ಈ ತರಹದ ಮಾನವೀಯತೆಯನ್ನು ನಾವು ಹಿಂದೆಂದು ಕಳೆದುಕೊಂಡಿರಲಿಲ್ಲ’ ಎಂದು ಹೇಳಿದರು.

ಈ ವರ್ಷ ಶೇ 50ರಷ್ಟು ಮಂದಿ ಹಣ ಇಲ್ಲದೇ ಕಡಿಮೆ ಊಟ ಮಾಡುತ್ತಿದ್ದಾರೆ ಎಂದು 12 ರಾಜ್ಯದಲ್ಲಿ ನಡೆದ ಸಮೀಕ್ಷೆಯೊಂದು ತಿಳಿಸಿದೆ. ಇವರೆಲ್ಲರೂ ಅಲೆಮಾರಿಗಳೇ ಆಗಿದ್ದಾರೆ. ಆದರೆ, ಸರ್ಕಾರ ಇಂತಹವರ ಅಂಕಿಅಂಶಗಳು ಇಲ್ಲ ಎಂದು ಸಂಸತ್ತಿನಲ್ಲಿ ಹೇಳುತ್ತದೆ. ನಿಜಕ್ಕೂ ಇದು ಸರಿಯಲ್ಲ ಎಂದು ಟೀಕಿಸಿದರು.

ಸಾಹಿತಿ ದೇವನೂರ ಮಹಾದೇವ ಅವರು ಕೃತಿಯನ್ನು ಸ್ವೀಕರಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ.ತಿಪ್ಪೇಸ್ವಾಮಿ, ‘ಅಲೆಮಾರಿಯ ಅಂತರಂಗ’ ಕೃತಿಯ ಲೇಖಕ ಕುಪ್ಪೆ ನಾಗರಾಜ, ಈ ಕೃತಿಯನ್ನು ಹಿಂದಿಗೆ ಭಾಷಾಂತರಿಸಿದ ಹುಣಸೂರಿನ ಡಿ.ದೇವರಾಜ ಅರಸು ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಕೆ.ಎಸ್.ಕರುಣಾಲಕ್ಷಿ, ಮೈಸೂರು ವಿಶ್ವವಿದ್ಯಾನಿಲಯದ ಹಿಂದಿ ಸಂಶೋಧನಾ ಮತ್ತು ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರತಿಭಾ ಮೊದಲಿಯಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.