ADVERTISEMENT

ಮೈಸೂರು ಹೊರವಲಯದಲ್ಲಿ ಮೂರು ಚಿರತೆ ಸಾವು: ವಿಷಪ್ರಾಶನ ಶಂಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2021, 11:21 IST
Last Updated 22 ಮೇ 2021, 11:21 IST
ಮೈಸೂರು ಹೊರವಲಯದ ಬೆಳವಾಡಿ ಗ್ರಾಮದ ಸಮೀಪ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಚಿರತೆ
ಮೈಸೂರು ಹೊರವಲಯದ ಬೆಳವಾಡಿ ಗ್ರಾಮದ ಸಮೀಪ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಚಿರತೆ   

ಮೈಸೂರು: ಮೈಸೂರು ಹೊರವಲಯದ ಬೆಳವಾಡಿ ಗ್ರಾಮ ಸಮೀಪ ಶನಿವಾರ ಮೂರು ಚಿರತೆಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ವಿಷಪ್ರಾಶನದ ಶಂಕೆ ವ್ಯಕ್ತವಾಗಿದೆ.

ಸುಮಾರು 4 ವರ್ಷದ ತಾಯಿ ಚಿರತೆ ಹಾಗೂ ಅದರ ಒಂದು ವರ್ಷದ ಎರಡು ಮರಿಗಳು (ಗಂಡು ಹಾಗೂ ಹೆಣ್ಣು) ಮೃತಪಟ್ಟಿವೆ. ಸತ್ತಿದ್ದ ನಾಯಿಯೊಂದನ್ನು ತಿಂದ ಮೇಲೆ ಈ ಸಾವು ಸಂಭವಿಸಿದೆ ಎಂಬುದು ಗೊತ್ತಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

‘ಮೂರೂ ಚಿರತೆಗಳು ಅಸಹಜವಾಗಿ ಮೃತಪಟ್ಟಿವೆ. ಹೊರಭಾಗದಲ್ಲಿ ಯಾವುದೇ ಗಾಯ ಆಗಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ್ದು, ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದೇವೆ’ ಎಂದು ಡಿಸಿಎಫ್‌ ಪ್ರಶಾಂತಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮೂರು ದಿನಗಳ ಹಿಂದೆ ಬೆಳವಾಡಿ ಸಮೀಪ ಕೈಗಾರಿಕಾ ಪ್ರದೇಶದಲ್ಲಿ ತಾಯಿ ಚಿರತೆ ಹಾಗೂ ಅದರ ನಾಲ್ಕು ಮರಿಗಳು ಓಡಾಡುತ್ತಿದ್ದವು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಆದರೆ, ಶನಿವಾರ ಮೃತಪಟ್ಟಿರುವುದು ಅದೇ ಚಿರತೆಗಳೇ ಎಂಬುದು ಖಚಿತವಾಗಿಲ್ಲ.

‘ನಾಲ್ಕೈದು ದಿನಗಳಿಂದ ಚಿರತೆಗಳು ಗ್ರಾಮದ ಹೊರಭಾಗದ ಕೆರೆ ಬಳಿ ಓಡಾಡುತ್ತಿದ್ದವು. ಮನೆಗಳು ಹತ್ತಿರದಲ್ಲೇ ಇವೆ, ಮಕ್ಕಳು ತಿರುಗಾಡುತ್ತಿರುತ್ತಾರೆ. ಹೀಗಾಗಿ, ಆತಂಕದಿಂದ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆವು. ಆದರೆ, ಯಾರೂ ಬಂದಿರಲಿಲ್ಲ. ಕೆರೆಯ ಒಂದು ಭಾಗದಲ್ಲಿ ನೀರು ಕಲುಷಿತಗೊಂಡಿದೆ. ಅದನ್ನು ಕುಡಿದು ಮೃತಪಟ್ಟಿರಬಹುದು. ಸತ್ತ ನಾಯಿಯೊಂದನ್ನು ತಿಂದಿವೆ ಎಂಬುದಾಗಿ ಕೆಲವರು ಹೇಳುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.