ADVERTISEMENT

ಭ್ರಷ್ಟ ಸರ್ಕಾರ ಕಿತ್ತೊಗೆಯಲು ‌ಸಿದ್ದರಾಮಯ್ಯ ಕರೆ

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ನಡೆದ ಸಭೆ‌

​ಪ್ರಜಾವಾಣಿ ವಾರ್ತೆ
Published 25 ಮೇ 2022, 2:42 IST
Last Updated 25 ಮೇ 2022, 2:42 IST
ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಕುರಿತು ನಡೆದ  ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಮಾತನಾಡಿದರು. ಆರ್.ನರೇಂದ್ರ, ಡಾ.ಎಚ್.ಸಿ.ಮಹದೇವಪ್ಪ, ಆರ್.ಧ್ರುವನಾರಾಯಣ, ಸಿದ್ದರಾಮಯ್ಯ, ಕೆ.ವೆಂಕಟೇಶ್, ಸಿ.ಪುಟ್ಟರಂಗಶೆಟ್ಟಿ, ಚಲುವರಾಯಸ್ವಾಮಿ, ಎಂ.ಕೆ.ಸೋಮಶೇಖರ್ ಇದ್ದಾರೆ
ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಕುರಿತು ನಡೆದ  ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಮಾತನಾಡಿದರು. ಆರ್.ನರೇಂದ್ರ, ಡಾ.ಎಚ್.ಸಿ.ಮಹದೇವಪ್ಪ, ಆರ್.ಧ್ರುವನಾರಾಯಣ, ಸಿದ್ದರಾಮಯ್ಯ, ಕೆ.ವೆಂಕಟೇಶ್, ಸಿ.ಪುಟ್ಟರಂಗಶೆಟ್ಟಿ, ಚಲುವರಾಯಸ್ವಾಮಿ, ಎಂ.ಕೆ.ಸೋಮಶೇಖರ್ ಇದ್ದಾರೆ   

ಮೈಸೂರು: ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ದಿಕ್ಸೂಚಿಯಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಹೆಚ್ಚು ಗಮನಕೊಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಕುರಿತು ನಡೆದ ಕಾಂಗ್ರೆಸ್‌ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು.

‘ಬಸವರಾಜ ಬೊಮ್ಮಾಯಿ ಸರ್ವ ವ್ಯಾಪಿ ಸರ್ವ ಸ್ಪರ್ಶಿ ಸರ್ಕಾರ ಎಂದಿದ್ದು ಕೇವಲ ಭ್ರಷ್ಟಾಚಾರದಲ್ಲಿ ಮಾತ್ರ’ ಎಂದು ಹರಿಹಾಯ್ದ ಸಿದ್ದರಾಮಯ್ಯ, ‘ಅಭಿವೃದ್ಧಿ ಕೆಲಸ ಮರೆತು ಲೂಟಿ ಹೊಡೆಯಲಾಗುತ್ತಿದೆ’ ಎಂದು ಕಿಡಿಕಾರಿದರು.

ADVERTISEMENT

‘ಮಾರ್ಚ್‌ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹ 103 ಇತ್ತು. ನಂತರ, ₹ 113 ಆಯಿತು. ಈಗ ₹ 9 ಕಡಿಮೆ ಮಾಡಿದ್ದೇವೆ ಎಂದು ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಪರಿಶಿಷ್ಟ ಜಾತಿ, ಪಂಗಡದವರ ಅಭಿವೃದ್ಧಿಗೆ ₹ 12 ಸಾವಿರ ಕೋಟಿ ಹಣವನ್ನು ಕಡಿತ ಮಾಡಿದ್ದರೂ ಬಿಜೆಪಿಯಲ್ಲಿ ಎಸ್‌.ಸಿ, ಎಸ್‌.ಟಿ. ಪಂಗಡದ ನಾಯಕರು ಸುಮ್ಮನಿದ್ದಾರೆ. ಅಲ್ಪಸಂಖ್ಯಾತರು ಸದಾ ಭಯದಿಂದ ಬದುಕುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸುತ್ತದೋ ಅದರ ಹಿಂದೆ ಹೋಗುವ ಪಕ್ಷವೇ ಜೆಡಿಎಸ್. ಅದು ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಪಕ್ಷ ಅಲ್ಲ. ಆ ಪಕ್ಷಕ್ಕೆ ಯಾವುದೇ ಸಿದ್ಧಾಂತವೂ ಇಲ್ಲ. ಅದು ಏನಿದ್ದರೂ ಕೇವಲ ಐದಾರು ಜಿಲ್ಲೆಗಳಲ್ಲಿ ಆಟವಾಡುವ ಪಕ್ಷ ಎಂದರು.

ಸಾಂಘಿಕ ಪ್ರಯತ್ನದಿಂದ ಗೆಲುವು: ‌ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ‘ವಿಧಾನಪರಿಷತ್ ಚುನಾವಣೆಯಲ್ಲಿ ಸಾಂಘಿಕ ಪ್ರಯತ್ನದಿಂದ ಗೆಲುವು ಸಾಧಿಸಬಹುದು. ಇದಕ್ಕಾಗಿ ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು’ ಎಂದು ಹೇಳಿದರು.

‘ಜೆಡಿಎಸ್‌ಗೆ ಶಕ್ತಿ ಇಲ್ಲ ಎಂದು ಗೊತ್ತಾಗಿಯೇಹಾಲಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು ತಮ್ಮ ಕಣದಿಂದ ಹಿಂದೆ ಸರಿದರು. ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶ ಹೆಚ್ಚಾಗಿದೆ’ ಎಂದರು.

‌ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ‘ಇನ್ನುಳಿದ ದಿನಗಳಲ್ಲಿ ಪಕ್ಷದ ಮುಖಂಡರು ಮತದಾರರ ಬಳಿಗೆ ತೆರಳಿ ಮತಯಾಚಿಸಬೇಕು. ಈ ಚುನಾವಣೆಯಲ್ಲಿ ಜಯಗಳಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಗೆ ಅನುಕೂಲವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಅಭ್ಯರ್ಥಿ ಮಧು ಜಿ. ಮಾದೇಗೌಡ ಮಾತನಾಡಿ, ‘ಒಟ್ಟು 27 ತಾಲ್ಲೂಕುಗಳಲ್ಲಿ ಈಗಾಗಲೇ ಪ್ರವಾಸ ಮಾಡಿರುವೆ. 45 ಸಾವಿರಕ್ಕೂ ಅಧಿಕ ಮತದಾರರು ನಮ್ಮ ಪರವಾಗಿಯೇ ಇದ್ದಾರೆ’ ಎಂದು ಹೇಳಿದರು.

ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಆರ್.ನರೇಂದ್ರ, ಎಚ್.ಪಿ.ಮಂಜುನಾಥ್, ಸಿ.ಪುಟ್ಟರಂಗಶೆಟ್ಟಿ, ಸಿ.ಅನಿಲ್ ‌ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ದಿನೇಶ್ ಗೂಳೀಗೌಡ, ಮುಖಂಡರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಎಂ.ಕೆ.ಸೋಮಶೇಖರ್, ಎ.ಆರ್.ಕೃಷ್ಣಮೂರ್ತಿ, ಎಸ್.ಜಯಣ್ಣ, ಕಳಲೆ ಕೇಶವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.