ಸರಗೂರು (ಮೈಸೂರು ಜಿಲ್ಲೆ): ತಾಲ್ಲೂಕಿನ ಶಿವಪುರಮುಂಟಿ ಗ್ರಾಮದ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಹುಲಿ ಸೆರೆಯಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹೆಡಿಯಾಲ ಉಪ ವಿಭಾಗದ ವ್ಯಾಪ್ತಿಯ ಜಯಲಕ್ಷ್ಮೀ ಪುರ, ಶಿವಪುರ ಸೇರಿದಂತೆ ಕಾಡಂಚಿನ ಗ್ರಾಮಗಳ ಸುತ್ತಮುತ್ತ ಓಡಾಡುತ್ತಿದ್ದ 12 ವರ್ಷದ ಹೆಣ್ಣು ಹುಲಿಯು ಜಾನುವಾರುಗಳನ್ನು ಕೊಂದಿತ್ತು. ಸೆರೆಗೆ ಗ್ರಾಮಸ್ಥರು ಆಗ್ರಹಿಸಿದ್ದರು.
ಮೂರು ಕಡೆ ಬೋನು ಇರಿಸಿ ಕೂಂಬಿಂಗ್ ಕಾರ್ಯಾಚರಣೆಯನ್ನು ಇಲಾಖೆಯು ಆರಂಭಿಸಿತ್ತು.
'ಭಾನುವಾರ ಬೆಳಿಗ್ಗೆ ಸೆರೆ ಹಿಡಿದ ಹುಲಿಗೆ ಪಶುವೈದ್ಯಾಧಿಕಾರಿ ವಾಸಿಂ ಮಿರ್ಜಾ ಅರಿವಳಿಕೆ ನೀಡಿದರು. ಸುರಕ್ಷಿತವಾಗಿ ಬೆಂಗಳೂರಿನ ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ' ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಎಸ್. ಪ್ರಭಾಕರನ್ ತಿಳಿಸಿದರು.
'ಹುಲಿಗೆ ವಯಸ್ಸಾಗಿದ್ದು, ಹಲ್ಲು, ದವಡೆಗಳು ಶಕ್ತಿಹೀನವಾಗಿರುವ ಬಗ್ಗೆ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದು, ಚಿಕಿತ್ಸೆ ಹಾಗೂ ಶುಶ್ರೂಷೆಯನ್ನು ಪುನರ್ವಸತಿ ಕೇಂದ್ರದಲ್ಲಿ ನೀಡಲಾಗುತ್ತದೆ' ಎಂದು ಎಸಿಎಫ್ ಎ.ವಿ.ಸತೀಶ್ ತಿಳಿಸಿದರು.
ಹೆಡಿಯಾಲ ವಲಯದ ಆರ್‌ಎಫ್‌ಓ ಮುನಿರಾಜು, ಡಿಆರ್‌ಎಫ್‌ಓ ರಘುನಾಥೇಗೌಡ, ಕಾರ್ತಿಕ್ ಎನ್.ನಾಯ್ಕ್, ಕೆ.ಸೋಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.