
ಸರಗೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ ವಿಭಾಗ ವ್ಯಾಪ್ತಿಯ ಅಂಜನಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆಯು 6 ವರ್ಷದ ಹೆಣ್ಣು ಹುಲಿಯನ್ನು ಮಂಗಳವಾರ ರಾತ್ರಿ ಸೆರೆ ಹಿಡಿದಿದೆ.
ನಂಜನಗೂಡು ತಾಲ್ಲೂಕಿನ ಈರೇಗೌಡನಹುಂಡಿ ಗ್ರಾಮದ ಸತೀಶ್ ಎಂಬುವರ ಜಮೀನಿನಲ್ಲಿ ಬೆಳಿಗ್ಗೆ ಕಾಣಿಸಿಕೊಂಡಿತ್ತು. ಸರಗೂರು ತಾಲ್ಲೂಕಿನ ಬೆಣ್ಣೇಗೆರೆ ಗ್ರಾಮದ ರೈತ ರಾಜಶೇಖರ್ ಎಂಬುವವರನ್ನು ಕೊಂದ ಹುಲಿಯೇ ಇಲ್ಲಿ ಬಂದಿದೆ ಎನ್ನಲಾಗಿತ್ತು.
ಮಾಹಿತಿ ಆಧರಿಸಿ ಸಾಕಾನೆಗಳೊಂದಿಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ಹುಲಿ ಪತ್ತೆಯಾಗಿತ್ತು. ಶಾಸಕ ದರ್ಶನ್ ಧ್ರುವನಾರಾಯಣ ಸ್ಥಳಕ್ಕೆ ಭೇಟಿ ನೀಡಿ, ಶೀಘ್ರವಾಗಿ ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು.
ಸಾಕಾನೆಗಳಾದ ಮಹೇಂದ್ರ, ರೋಹಿತ್ ಹಾಗೂ ಭೀಮ ಆನೆಗಳ ನೆರವಿನಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ, ಜಮೀನಿನ ಪೊದೆಯಲ್ಲಿ ಹುಲಿ ಅಡಗಿದ್ದಾಗ ಅರಿವಳಿಕೆ ಚುಚ್ಚು ಮದ್ದು ನೀಡಿದರು. ಹುಲಿಗೆ ಯಾವುದೇ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.
ಕಾರ್ಯಾಚರಣೆಯಲ್ಲಿ ಸಿಎಫ್ ಪ್ರಭಾಕರನ್, ಎಸಿಎಫ್ ಡಿ.ಪರಮೇಶ್, ವೈದ್ಯಾಧಿಕಾರಿಗಳಾದ ಡಾ.ರಮೇಶ್, ಡಾ.ವಾಸೀಂ ಮಿರ್ಜಾ, ನುಗು ಆರ್‌ಎಫ್‌ಒ ವಿವೇಕ್, ಆರ್‌ಎಫ್‌ಓಗಳಾದ ಹೆಡಿಯಾಲ ಮುನಿರಾಜು, ಕಲ್ಕೆರೆ ರಾಜೇಶ್ ಸೇರಿದಂತೆ 130ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.