ADVERTISEMENT

ಮೈಸೂರು | ವರ್ಷವಿಡೀ ಹುಲಿ ಆತಂಕ: ಸಾವು, ನೋವು, ಸಂಘರ್ಷ

ನಗರದ ಸನಿಹದಲ್ಲೇ ಕಾಣಿಸಿಕೊಂಡವು..; ಕಾಡಂಚಿನಲ್ಲಿ ದಾಳಿ ನಡೆಸಿದವು

ಮೋಹನ್‌ ಕುಮಾರ್‌ ಸಿ.
Published 30 ಡಿಸೆಂಬರ್ 2025, 3:03 IST
Last Updated 30 ಡಿಸೆಂಬರ್ 2025, 3:03 IST
ಹುಲಿ.. 
ಹುಲಿ..    

ಮೈಸೂರು: ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಹೊಂದಿರುವ ಜಿಲ್ಲೆಯ ಕಾಡಂಚಿನಲ್ಲೇ ಕಾಣಿಸಿಕೊಂಡಿದ್ದ ಹುಲಿಗಳು ನಗರದ ಹೊರವಲಯಕ್ಕೂ ಬಂದವು. ಅಲೋಕ ಅರಮನೆ, ಆರ್‌ಎಂಪಿ, ಬೆಮೆಲ್‌ ಆವರಣದಲ್ಲಿ ಹುಲಿ ಕಾಣಿಸಿಕೊಂಡವು. ಸಾವು, ನೋವು, ವನ್ಯಪ್ರಾಣಿ–ಮಾನವ ಸಂಘರ್ಷಕ್ಕೆ ಈ ವರ್ಷ (2025) ಸಾಕ್ಷಿಯಾಯಿತು.

ನುಗು ವನ್ಯಜೀವಿಧಾಮ ಸುತ್ತಲ ಪ್ರದೇಶದಲ್ಲಿ ಹುಲಿ ದಾಳಿಯಿಂದ ಮೂವರು ಮೃತಪಟ್ಟು, ಒಬ್ಬರು ತೀವ್ರ ಗಾಯಗೊಂಡಿದ್ದರಿಂದ ಜನರಿಂದ ಆಕ್ರೋಶ ವ್ಯಕ್ತವಾಗಿತ್ತು. ಹುಲಿದಾಳಿ ಹೆಚ್ಚಾದ ಕಾರಣ ಸೆರೆ ಕಾರ್ಯಾಚರಣೆಗಳೂ ತ್ವರಿತವಾಗಿ ನಡೆದವು. 30ಕ್ಕೂ ಹೆಚ್ಚು ಹುಲಿಗಳನ್ನು ವರ್ಷದಲ್ಲಿ ಸೆರೆ ಹಿಡಿಯಲಾಯಿತು.

ಮಾನವ– ವನ್ಯಜೀವಿ ಸಂಘರ್ಷ ಹೆಚ್ಚಳಕ್ಕೆ ಮಿತಿಮೀರಿದ ಪ್ರವಾಸೋದ್ಯಮ, ಅಕ್ರಮ ರೆಸಾರ್ಟ್‌ಗಳ ನಿರ್ಮಾಣವೂ ಕಾರಣವೆಂಬ ಆರೋಪ ಕೇಳಿಬಂತು. ಅರಣ್ಯ ಇಲಾಖೆಯು ಸಫಾರಿ ರದ್ದುಪಡಿಸಿತು. ಪರ–ವಿರೋಧ ವ್ಯಕ್ತವಾಯಿತು.

ADVERTISEMENT

ಪ್ರತಿಭಟನೆ: ಏ.12ರಂದು ನಜರ್‌ಬಾದ್‌ನ ಹೈದರಾಲಿ ರಸ್ತೆಯಲ್ಲಿದ್ದ 50ಕ್ಕೂ ಹೆಚ್ಚು ವರ್ಷದ 40 ಮರಗಳ ಹನನ ಖಂಡಿಸಿ ಸರಣಿ ಪ್ರತಿಭಟನೆಗಳು ನಡೆದವು. ‘ಪರಿಸರ ಬಳಗ’, ‘ಮೈಸೂರು ಗ್ರಾಹಕರ ಪರಿಷತ್ತು’, ‘ಲೆಟ್ಸ್‌ ಡೂ ಇಟ್‌’, ಪಿಯುಸಿಎಲ್‌ ಸೇರಿದಂತೆ ಪರಿಸರ ಸಂಘ ಸಂಸ್ಥೆಗಳ ಸದಸ್ಯರು ಪಾಲಿಕೆ, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮರಗಳಿಗೆ ತಿಥಿ, ಶ್ರಾದ್ಧ ಮಾಡಿ ಮಿಡಿದರು. ಅದರಿಂದ ತನಿಖಾ ಸಮಿತಿಯನ್ನು ಜಿಲ್ಲಾಡಳಿತ ರಚಿಸಿತ್ತು.   

ಕಾಕನಕೋಟೆಯ ಬಳ್ಳೆಯಲ್ಲಿ ‘ದಸರಾ ಅಂಬಾರಿ ಆನೆ’ ಅರ್ಜುನನ ನೆನಪಿನಲ್ಲಿ ಸ್ಮಾರಕ ನಿರ್ಮಾಣವಾಯಿತು. ಜೊತೆಯಲ್ಲಿ ಬಳ್ಳೆ ಸಮೀಪದ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿಯ 26 ಹಾಡಿ ನಿವಾಸಿಗಳು, ‘ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಿ ಭೂಮಿ ನೀಡಬೇಕು’ ಎಂದು ಆಗ್ರಹಿಸಿ ಹುಣಸೂರಿನ ನಾಗರಹೊಳೆ ಹುಲಿ ಯೋಜನಾ ನಿರ್ದೇಶಕರ ಕಚೇರಿ ಎದುರು ನಿರಂತರ ಪ್ರತಿಭಟನೆ ನಡೆಸಿದರು. 

ಸಂಘರ್ಷದ ತಾಣವಾದ ‘ನುಗು’: ಮಾನವ– ವನ್ಯಜೀವಿಯ ತೀವ್ರ ಸಂಘರ್ಷದ ತಾಣವಾಗಿ ಎಚ್‌.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕುಗಳ ನುಗು ವನ್ಯಜೀವಿಧಾಮ ಬದಲಾಯಿತು. ಬಡಗಲಪುರದಲ್ಲಿ ಮಹದೇವ್‌ ತೀವ್ರ ಗಾಯಗೊಂಡು ಕಣ್ಣು ಕಳೆದುಕೊಂಡರೆ, ಬೆಣ್ಣೆಗೆರೆ ಗ್ರಾಮದ ರೈತ ರಾಜಶೇಖರ್, ಕೂಡಿಗಿ ಗ್ರಾಮದ ರೈತ ದೊಡ್ಡನಿಂಗಯ್ಯ, ಹಳೆ ಹೆಗ್ಗುಡಿಲು ಗ್ರಾಮದ ರೈತ ದಂಡನಾಯಕ ಮೃತಪಟ್ಟರು. 15 ದಿನದ ಅಂತರದಲ್ಲಿ ಇಷ್ಟು ಜೀವಹಾನಿಯಾದ್ದರಿಂದ ಹುಲಿ ಸೆರೆ ತೀವ್ರವಾಗಿ ನಡೆಯಿತು. 

ತಾಯಿ– ಮರಿ ಹುಲಿಗಳನ್ನು ಬೇರೆಯಾಗಿ ಹಿಡಿದಿದ್ದರಿಂದ ಆರೈಕೆ ಸಿಗದೆ ಕೆಲವು ಮರಿಗಳು ಮೃತಪಟ್ಟವು. ಸಂಘರ್ಷ ತಪ್ಪಿಸಲು ವೈಜ್ಞಾನಿಕ ಕ್ರಮ ಅನುಸರಿಸಬೇಕಾದ ಇಲಾಖೆಯ ಮೇಲಧಿಕಾರಿಗಳು ನಿಯಮ ಗಾಳಿಗೆ ತೂರುತ್ತಿದ್ದಾರೆ. ಡಿಎನ್‌ಎ ವಿಶ್ಲೇಷಣೆ ಸೇರಿದಂತೆ ಯಾವೊಂದು ನಿಯಮ ಪಾಲಿಸಿಲ್ಲ. ಈ ಅಸ್ಪಷ್ಟತೆಯ ನಡೆಗೆ ಬಡ ರೈತರು ಬಲಿಯಾಗುತ್ತಿದ್ದಾರೆ ಎಂಬ ಆರೋಪ ವನ್ಯಜೀವಿ ತಜ್ಞರಿಂದ ವ್ಯಕ್ತವಾಗಿತ್ತು. 

ನಗರದ ಸಮೀಪ ದರ್ಶನ: ನ.30ರಂದು ಕೂರ್ಗಳ್ಳಿ ಸಮೀಪದ ಬೆಮೆಲ್ ಕಾರ್ಖಾನೆ ಆವರಣದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿತು. ಸೆರೆಗೆ ಕಾರ್ಯಾಚರಣೆ ನಡೆಸಲಾಯಿತಾದರೂ ಪತ್ತೆಯಾಗಲಿಲ್ಲ. ಆಗಸ್ಟ್, ಅಕ್ಟೋಬರ್‌ನಲ್ಲೀ ಇಲ್ಲಿಗೆ ಸಮೀಪದ ಇಲವಾಲದ ಅಲೋಕ ಅರಮನೆಯ ಅರಣ್ಯ‌ ಭಾಗದಲ್ಲಿ‌ 3 ಮರಿಗಳೊಂದಿಗೆ ಹೆಣ್ಣು ಹುಲಿ ಪತ್ತೆಯಾಗಿತ್ತು. ಅದರಲ್ಲಿ ಒಂದು ಹುಲಿ ಮರಿಯನ್ನು ಇಲಾಖೆಯು‌ ಸೆರೆ‌ಹಿಡಿದಿತ್ತು.

ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ವಲಯದ ಮುದಗನೂರು ಕೆರೆಯಂಚಿನ ರೈಲ್ವೆ ಬ್ಯಾರಿಕೇಡ್‌ನಲ್ಲಿ ಸಿಲುಕಿದ್ದ ಸಲಗ  
ಸರಗೂರು ತಾಲ್ಲೂಕಿನ ಬೆಣ್ಣೆಗೆರೆಯಲ್ಲಿ ರೈತನನ್ನು ಕೊಂದ ಹುಲಿ ಸೆರೆಯಲ್ಲಿ ಭೀಮ ಅಭಿಮನ್ಯು ಮಹೇಂದ್ರ ಆನೆಗಳು
ದೊಡ್ಡಮಾರಗೌಡನಹಳ್ಳಿಯಲ್ಲಿ ಸೆರೆಯಾದ ಚಿರತೆ
ಎಚ್‌.ಡಿ. ತಾಲ್ಲೂಕಿನ ಡಿ.ಬಿ.ಕುಪ್ಪೆ ವಲಯದ ಬಳ್ಳೆ ಆನೆ ಶಿಬಿರದಲ್ಲಿ ಅರ್ಜುನ ಆನೆಯ ಪ್ರತಿಮೆಯನ್ನು ಅನಾವರಣಗೊಳಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ  
ಕಾಡಂಚಿನಲ್ಲಿ ಎಐ ಕ್ಯಾಮೆರಾ– ಸ್ಪೀಕರ್‌ ಅಳವಡಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ 
ಮೈಸೂರಿನ ನಜರ್‌ಬಾದ್‌ನ ಹೈದರಾಲಿ ರಸ್ತೆಯಲ್ಲಿ 40 ಮರಗಳ ಹನನ 

ಮುಖವಾಡ ಎ.ಐ ಮೊರೆ

ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ತಡೆಯಲು ಅರಣ್ಯ ಇಲಾಖೆಯು ಮುಖವಾಡ ಹಂಚಿಕೆ ಮಾಡಿದರೆ ಆನೆ ಉಪಟಳ ತಡೆಗೆ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದ ಮೊರೆ ಹೋಯಿತು. ಬಂಡೀಪುರ ಮತ್ತು ನುಗು ವನ್ಯಜೀವಿಧಾಮದ ಸಮೀಪದ ಗ್ರಾಮಗಳ ರೈತರಿಗೆ 10 ಸಾವಿರ ಮುಖವಾಡ ಹಂಚಿತು. ಎಐ ಕ್ಯಾಮೆರಾ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಜಮೀನುಗಳಲ್ಲಿ ಅರಣ್ಯ ಇಲಾಖೆ ‘ಕೃತಕ ಬುದ್ಧಿಮತ್ತೆ’ ತಂತ್ರಜ್ಞಾನ ನೆರವಿನಲ್ಲಿ ಕಾರ್ಯಾಚರಿಸುವ ‘ಕ್ಯಾಮೆರಾ’ ಮತ್ತು ‘ಸ್ಪೀಕರ್’ ಅಳವಡಿಸಲು ಆರಂಭಿಸಿತು. 

ನುಗು ಸನಿಹ ಅದಿರು ‍ಪೂರ್ವಾನ್ವೇಷಣೆ? 

ಜಿಲ್ಲೆಯ ಸರಗೂರು ತಾಲ್ಲೂಕಿನ ನುಗು ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದ ಸನಿಹದಲ್ಲಿರುವ ಅರಣ್ಯ ಪ್ರದೇಶ ಸೇರಿ 13 ಗ್ರಾಮಗಳಲ್ಲಿ ಸಿಲಿಮನೈಟ್ ಮತ್ತು ಕಯನೈಟ್ ಅದಿರಿನ ಪೂರ್ವಾನ್ವೇಷಣೆ ಚಟುವಟಿಕೆ ನಡೆಸಲು ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆಯು (ಜಿಎಸ್‌ಐ) ಅರಣ್ಯ ಇಲಾಖೆಗೆ ಆನ್‌ಲೈನ್‌ನಲ್ಲಿ ಅ.16ರಂದು ಅರ್ಜಿ ಸಲ್ಲಿಸಿತ್ತು.  ಸರಗೂರು ತಾಲ್ಲೂಕಿನ ಹೊನಗನಹಳ್ಳಿ ಮತ್ತು ಶಾಂತಿಪುರ ವಲಯದ 499 ಹೆಕ್ಟೇರ್ ಅರಣ್ಯ ಪ್ರದೇಶ ಹಾಗೂ 1001 ಅರಣ್ಯೇತರ ಭೂಮಿ ಇದರಲ್ಲಿ ಸೇರಿತ್ತು. ಇಲ್ಲಿಂದ ನುಗು ಜಲಾಶಯ 4.5 ಕಿ.ಮೀ ಹಾಗೂ ಕಬಿನಿ ಜಲಾಶಯದ ಅಣೆಕಟ್ಟೆ 6.8 ಕಿ.ಮೀ ದೂರದಲ್ಲಿರುವುದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ನುಗು ವನ್ಯಜೀವಿಧಾಮ ಕೂಡ ಸನಿಹದಲ್ಲಿದ್ದರಿಂದ ಪರಿಸರ ಹೋರಾಟಗಾರರಿಂದ ಆಕ್ಷೇಪ ವ್ಯಕ್ತವಾಗಿತ್ತು. 

ಪ್ರವಾಸಿತಾಣ ಮಾನ್ಯತೆಗೆ ಆಕ್ಷೇಪ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ‘ಬೇಲದಕುಪ್ಪೆ ಮಹದೇಶ್ವರ ದೇವಾಲಯ’ವನ್ನು ಪ್ರವಾಸಿ ತಾಣದ ಪಟ್ಟಿಯಿಂದ ಕೈಬಿಡಬೇಕೆಂಬ ಕೂಗು ಪರಿಸರವಾದಿಗಳು ಹಾಗೂ ನಾಗರಿಕರಿಂದ ವ್ಯಕ್ತವಾಯಿತು.

6ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು

ಅ.2ರಂದು ಕ್ಯಾಪ್ಟನ್ ‘ಅಭಿಮನ್ಯು’ ಸತತ 6ನೇ ಬಾರಿಗೆ ಜಂಬೂಸವಾರಿಯಲ್ಲಿ ಅಂಬಾರಿಯನ್ನು ಹೊತ್ತು ಸಾಗಿದನು. ಅವನಿಗೆ ಕುಮ್ಕಿ ಆನೆಗಳಾಗಿ ‘ರೂಪಾ’ ಹಾಗೂ ‘ಕಾವೇರಿ’ ಸಾಥ್ ನೀಡಿದರು.  ನಿಶಾನೆ ಆನೆಯಾಗಿ ‘ಧನಂಜಯ’ ನೌಪತ್ ಆನೆಯಾಗಿ ‘ಗೋಪಿ’ ಕಾರ್ಯ ನಿರ್ವಹಿಸಿದರು. ಸಾಲಾನೆಗಳ ಮೂರು ತಂಡವನ್ನು ಇದೇ ಮೊದಲ ಬಾರಿ ರಚಿಸಲಾಗಿತ್ತು. ‘ಮಹೇಂದ್ರ’ ‘ಭೀಮ’ ‘ಪ್ರಶಾಂತ’ ನೇತೃತ್ವ ವಹಿಸಿದ್ದರು.      

ಕಾವು ಪಡೆದ ‘ಕಬಿನಿ ಉಳಿಸಿ’

ಅಭಿಯಾನ ಜುಲೈ 25ರಂದು ಎಚ್‌.ಡಿ.ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನ ಪರಿಸರ ಸೂಕ್ಷ್ಮ ವಲಯದಲ್ಲಿ ರೆಸಾರ್ಟ್‌ಗಳು ಅಕ್ರಮವಾಗಿ ತಲೆ ಎತ್ತುತ್ತಿವೆ ಎಂಬ ಆರೋಪಗಳು ಜೋರಾಯಿತು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ‘ಕಬಿನಿ ಉಳಿಸಿ’ ‘ವನಸಿರಿ ನಾಡನು ಉಳಿಸಿ’ ಅಭಿಯಾನ ನಡೆಯಿತು.

ಮುಖ್ಯ ಘಟನೆಗಳು..  

ಜ.1: ನಗರದ ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ 15 ದಿನ ನಡೆದ ಸೆರೆ ಕಾರ್ಯಾಚರಣೆ. ನಂತರ ಸ್ಥಗಿತ.  

ಜ.6: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿ ವಲಯದ ಮುದಗನೂರು ಕೆರೆಯಂಚಿನ ರೈಲ್ವೆ ಬ್ಯಾರಿಕೇಡ್‌ ಪಿಲ್ಲರ್‌ ನಡುವೆ ಸಿಲುಕಿದ್ದ 30 ವರ್ಷ ವಯಸ್ಸಿನ ಸಲಗ ರಕ್ಷಣೆ 

ಏ.5: ಎಚ್.ಡಿ.ಕೋಟೆ ಮೇಟಿಕುಪ್ಪೆ ವನ್ಯಜೀವಿ ವಲಯದಲ್ಲಿ 46 ವರ್ಷದ ಗಂಡು ಕಾಡಾನೆ ಅನಾರೋಗ್ಯದಿಂದ ಸಾವು. 

ಮೇ 23: ನಾಗರಹೊಳೆ ಅರಣ್ಯದಲ್ಲಿ 3 ದಿನಗಳ ಆನೆ ಗಣತಿಗೆ ಚಾಲನೆ.  ಮೇ 26: ಹುಣಸೂರು ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ 5ನೇ ಬ್ಲಾಕ್ ನಿವಾಸಿ ಹರೀಶ್ (29) ಕುರಿ ಮೇಯಿಸುತ್ತಿದ್ದಾಗ ಹುಲಿ ದಾಳಿಗೆ ಮೃತ.

ಜೂನ್‌ 23: ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ದಸರಾ ಅಂಬಾರಿ ಆನೆ ‘ಅರ್ಜುನ’ನ ನೆನೆಪಿನಲ್ಲಿ ನಾಗರಹೊಳೆ ಅರಣ್ಯದ ಡಿ.ಬಿ. ಕುಪ್ಪೆಯ ಬಳ್ಳೆ ಶಿಬಿರದಲ್ಲಿ ನಿರ್ಮಿಸಲಾದ ಸ್ಮಾರಕವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅನಾವರಣಗೊಳಿಸಿದರು.

ಜುಲೈ 9: ಸರಗೂರು ತಾಲ್ಲೂಕಿನ ಬಿಡುಗಲು ಗ್ರಾಮದಲ್ಲಿ ಗೋಬರ್ ಗ್ಯಾಸ್‌ ಬಾವಿಗೆ ಬಿದ್ದಿದ್ದ 6 ತಿಂಗಳ ಹುಲಿ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿತು  

ಆ.10: ಎಚ್.ಡಿ.ಕೋಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ವನ್ಯಜೀವಿ ವಲಯದ ಕಬಿನಿ ಹಿನ್ನೀರಿನ ಅರಣ್ಯ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ 5 ರಣಹದ್ದುಗಳು ಮೃತಪಟ್ಟವು. 

ಆ.15: ‌ಚಾಮರಾಜೇಂದ್ರ ಮೃಗಾಲಯದ ಹೆಣ್ಣಾನೆ ‘ಪದ್ಮಾವತಿ’ (71) ಸಾವು. 

ಆ.27: ‘ಆರ್‌ಎಂಪಿ’ ಆವರಣದಲ್ಲಿ ಹುಲಿ ಪ್ರತ್ಯಕ್ಷ.  ಸೆ.5: ಮೃಗಾಲಯದ ಜಾಗ್ವಾರ್ ‘ವಿಕ್ರಂ’ ಸಾವು. 

ಸೆ.19: ಜಂಬೂಸವಾರಿಯ ಆನೆಗಳ ಬಿಡಾರದ ಅಪಾಯಕಾರಿಯಾಗಿ ರೀಲ್ಸ್‌ ಮಾಡಿದ ಯುವತಿ ವಿರುದ್ಧ ಪ‍್ರಕರಣ  

ಅ.16: ಸರಗೂರು ತಾಲ್ಲೂಕಿನ ಬಡಗಲಪುರದಲ್ಲಿ ರೈತ ಮಹದೇವ್‌ ಮೇಲೆ ಹುಲಿ ದಾಳಿಯಿಂದ ತೀವ್ರ ಗಾಯ. 

ಅ.26: ನುಗು ವನ್ಯಜೀವಿ ವಲಯ ಅರಣ್ಯದಂಚಿನ ಬೆಣ್ಣೆಗೆರೆ ಗ್ರಾಮದ ರೈತ ರಾಜಶೇಖರ್ (65) ಹುಲಿ ದಾಳಿಯಿಂದ ಸಾವು 

ಅ.31: ಮೊಳೆಯೂರು ಅರಣ್ಯದಂಚಿನ ಕುರ್ಣೇಗಾಲದ ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ಕೂಡಿಗಿಯ ರೈತ ದೊಡ್ಡನಿಂಗಯ್ಯ (65) ಹುಲಿ ದಾಳಿಯಿಂದ ಸಾವು.

ನ.7: ಹಳೆಹೆಗ್ಗುಡಿಲು ಗ್ರಾಮದಲ್ಲಿ ರೈತ ದಂಡನಾಯಕ (40) ಸಾವು.

ಡಿ.15: ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿಯಲ್ಲಿ 8-10 ವರ್ಷದ ಗಂಡು ಚಿರತೆ ಸೆರೆ 

ಡಿ.20: ತಿ.ನರಸೀಪುರ ತಾಲ್ಲೂಕಿನ ಶ್ರೀರಂಗರಾಜಪುರ ಗ್ರಾಮದಲ್ಲಿ ಸುಮಾರು 4 ವರ್ಷದ ಹೆಣ್ಣು ಚಿರತೆ ಸೆರೆ. 

ಡಿ.12: ತಿ.ನರಸೀಪುರ ತಾಲ್ಲೂಕಿನ ಬೂದಹಳ್ಳಿಯಲ್ಲಿ ಬೋನಿಗೆ ಬಿದ್ದ 6 ವರ್ಷದ ಗಂಡು ಚಿರತೆ  

ಡಿ.21: ನಗರದ ‘ಮೈಸೂರು ರೇಸ್‌ ಕ್ಲಬ್‌’ನಲ್ಲಿದ್ದ ಕುದುರೆಯೊಂದು ‘ಗ್ಲ್ಯಾಂಡರ್ಸ್‌’ ರೋಗದ ಸೋಂಕಿನಿಂದ ಮೃತ. ಕಾರಣ ಚಾಮರಾಜೇಂದ್ರ ಮೃಗಾಲಯದಲ್ಲಿ ಕಟ್ಟೆಚ್ಚರ. 

ಡಿ.24: ಚಾಮರಾಜೇಂದ್ರ ಮೃಗಾಲಯದ ಹೆಣ್ಣುಹುಲಿ ‘ತಾಯಮ್ಮ’ ಅನಾರೋಗ್ಯದಿಂದ ಸಾವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.