ಸರಗೂರು: ತೆರೆದ ಪಾಳು ಬಾವಿಗೆ ಬಿದ್ದಿದ್ದ ಆರು ತಿಂಗಳ ಹುಲಿ ಮರಿಯನ್ನು ಬುಧವಾರ ಕಾರ್ಯಾಚರಣೆ ಮಾಡಿ ಬುಧವಾರ ರಕ್ಷಿಸಲಾಯಿತು.
ಆಹಾರ ಅರಸಿ ಬಂದ ಹುಲಿ ಮರಿ ಪಟ್ಟಣದ 11ನೇ ವಾರ್ಡ್‌ನ ಹಾಲಿನ ಡೇರಿ ಸಮೀಪದಲ್ಲಿದ್ದ ತೆರೆದ ಬಾವಿಗೆ ಬಿದ್ದಿದ್ದು, ಜೋರಾಗಿ ಘರ್ಜಿಸಿತು. ಇದನ್ನು ಕೇಳಿಸಿಕೊಂಡ ಸಾರ್ವಜನಿಕರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು. ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ತಂಡ ಕಾರ್ಯಾಚರಣೆಗೆ ಮುಂದಾಯಿತು.
ಡಾ.ಆದರ್ಶ ಅವರು ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಹುಲಿ ಮರಿಯನ್ನು ಬಾವಿಯಿಂದ ಸುರಕ್ಷಿತವಾಗಿ ರಕ್ಷಿಸಲಾಯಿತು.
‘ಸೆರೆಸಿಕ್ಕ ಹುಲಿ ಮರಿಯನ್ನು ಹ್ಯಾಂಡ್ ಪೋಸ್ಟ್‌ನ ಅರಣ್ಯ ಇಲಾಖೆ ಕಚೇರಿಗೆ ತಂದು ತಪಾಸಣೆ ನಡೆಸಲಾಯಿತು. ಸಣ್ಣಪುಟ್ಟ ಗಾಯವಾಗಿದ್ದು, ಸೂಕ್ತ ಚಿಕಿತ್ಸೆಯ ಬಳಿಕ ಮೈಸೂರಿನ ಇಲವಾಲ ಬಳಿ ಇರುವ ಕೂರ್ಗಳ್ಳಿ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಬಿಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.