ADVERTISEMENT

ಮೈಸೂರು ನಗರದ ಬಳಿಯೇ ಹುಲಿ: ಹೆಚ್ಚಿದ ಆತಂಕ

ಅರಣ್ಯ ಇಲಾಖೆಯ 30 ಸಿಬ್ಬಂದಿಯಿಂದ ಕಾರ್ಯಾಚರಣೆ, 10 ಸಿಸಿಟಿವಿ ಕ್ಯಾಮೆರಾ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:47 IST
Last Updated 1 ಡಿಸೆಂಬರ್ 2025, 5:47 IST
ಹುಣಸೂರು ತಾಲ್ಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ಸೆರೆಯಾದ ಹುಲಿ ಮರಿಗಳು
ಹುಣಸೂರು ತಾಲ್ಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ಸೆರೆಯಾದ ಹುಲಿ ಮರಿಗಳು   

ಮೈಸೂರು: ನಗರದ ಹೊರವಲಯದ ಕೂರ್ಗಳ್ಳಿ ಸಮೀಪದ ಬೆಮೆಲ್ ಕಾರ್ಖಾನೆ ಆವರಣದಲ್ಲಿ ಕಾಣಿಸಿಕೊಂಡಿರುವ ಹುಲಿ ಸೆರೆಗೆ ಅರಣ್ಯ ಇಲಾಖೆಯು ಭಾನುವಾರ ಕಾರ್ಯಾಚರಣೆ ಆರಂಭಿಸಿದೆ. ಹುಲಿಯು ನಗರದ ಅಂಚಿನಲ್ಲೇ ಓಡಾಡುತ್ತಿರುವ ಘಟನೆಯು ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. 

‘ಹುಲಿಯ ಹೆಜ್ಜೆ ಗುರುತು ಪತ್ತೆ ಆಗಿಲ್ಲ. ಆದರೆ, ಹುಲಿ ಸಂಚರಿಸುತ್ತಿದ್ದ ವಿಡಿಯೊ ಬೆಮೆಲ್‌ ಆವರಣದ್ದೇ ಎಂದು ಖಚಿತವಾಗಿದೆ. ಚಲನವಲನದ ಮೇಲೆ ನಿಗಾ ವಹಿಸುವುದಕ್ಕಾಗಿ ವಿವಿಧೆಡೆ 10 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಂದು ಬೋನನ್ನು ಇರಿಸಲಾಗಿದೆ. ಹುಲಿ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ. ಸೆರೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಪ್ರಾದೇಶಿಕ ವಿಭಾಗದ ಡಿಸಿಎಫ್ ಕೆ.ಪರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬೆಮೆಲ್‌ ನೌಕರರು ಹಾಗೂ ಸಿಬ್ಬಂದಿಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಕಾರು ಅಥವಾ ವಾಹನಗಳಲ್ಲೇ ಸಂಚರಿಸುವಂತೆ ಹೇಳಲಾಗಿದೆ. ಇಲಾಖೆಯ ಪ್ರಾದೇಶಿಕ ವಿಭಾಗದ 30 ಅರಣ್ಯ ಸಿಬ್ಬಂದಿಯನ್ನು ಸೆರೆ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು. 

ADVERTISEMENT

ಶನಿವಾರ ಮುಂಜಾನೆ ಕಾರ್ಖಾನೆಯ ಎಂಜಿನ್ ಸೆಕ್ಷನ್ ರಸ್ತೆಯಲ್ಲಿ ಹುಲಿ ಸಂಚರಿಸುತ್ತಿದ್ದನ್ನು ಗಮನಿಸಿದ ಗಸ್ತು‌ ಸಿಬ್ಬಂದಿ ವಿಡಿಯೊ ಮಾಡಿದ್ದರು. ಕಾಂಪೌಂಡ್‌ ಹತ್ತಿರ ಕಾಣಿಸಿಕೊಂಡ ಹುಲಿ ಹತ್ತಿರದ ಪೊದೆಯೊಳಗೆ ಮರೆಯಾಗಿತ್ತು.  ಕಾರ್ಖಾನೆ ಅಧಿಕಾರಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಡಿಸಿಎಫ್ ಕೆ.ಪರಮೇಶ್, ಎಸಿಎಫ್ ರವೀಂದ್ರ, ಆರ್‌ಎಫ್‌ಒ ಸಂತೋಷ್ ಹೂಗಾರ್ ಸ್ಥಳ ಪರಿಶೀಲನೆ ನಡೆಸಿ, ವಿಡಿಯೊ ಪರಿಶೀಲಿಸಿ ಹುಲಿ ಬಂದಿರುವುದನ್ನು ದೃಢಪಡಿಸಿಕೊಂಡಿದ್ದರು. 

ಕಳೆದ‌ ಅಕ್ಟೋಬರ್‌ನಲ್ಲಿ ಇಲವಾಲದ ಅಲೋಕ ಅರಮನೆಯ ಅರಣ್ಯ‌ ಭಾಗದಲ್ಲಿ‌ ಮೂರು ಮರಿಗಳಿರುವ ಹೆಣ್ಣು ಹುಲಿ ಪತ್ತೆಯಾಗಿತ್ತು. ಅದರಲ್ಲಿ ಒಂದು ಹುಲಿ ಮರಿಯನ್ನು ಇಲಾಖೆಯು‌ ಸೆರೆ‌ಹಿಡಿದಿತ್ತು. ಉಳಿದವು ಪತ್ತೆ ಆಗಿಲ್ಲ. ಈಗ ಕಂಡಿರುವ ಹುಲಿ ಅದೇ ಇರಬಹುದು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.