ಮೈಸೂರು: ವಿದ್ವಾನ್ ಟಿ.ಎಂ.ಕೃಷ್ಣ ಅವರ ಕರ್ನಾಟಕ ಸಂಗೀತದ ಗಾನ ‘ಸುಧೆ’ಯೊಂದಿಗೆ ಇಲ್ಲಿನ ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನ ‘64ನೇ ಪಾರಂಪರಿಕ ಸಂಗೀತೋತ್ಸವ’ ಗರಿಬಿಚ್ಚಿತು.
‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ಆಯೋಜಿಸಿರುವ ಉತ್ಸವದಲ್ಲಿ ಗುರುವಾರ, ಕೃಷ್ಣ ಗಾಯನದ ‘ಭಾವ ಗಂಗೋತ್ರಿ’ಯಲ್ಲಿ ಸಹೃದಯರು ಮಿಂದರು. ವಾಗ್ಗೇಯಕಾರರ ಕೃತಿಗಳು, ಕೀರ್ತನಕಾರರ ಭಜನೆ ಸೇರಿದಂತೆ ಎಲ್ಲ ಪ್ರಕಾರಗಳ ಸಂಗೀತ– ಸಾಹಿತ್ಯ, ಭಾಷಾ ವೈವಿಧ್ಯದ ದಿವ್ಯಾನುಭೂತಿಗೆ ಪುಳಕಿತರಾದರು.
ತ್ಯಾಗರಾಜರ ‘ಶ್ರೀ’ ರಾಗದ ಕೃತಿ ‘ನಾಮ ಕುಸುಮಾಮುಲಚೆ’ ಮೂಲಕ ಕಛೇರಿ ಆರಂಭಿಸಿದ ಕೃಷ್ಣ, ರಾಮನನ್ನು ಕೊಂಡಾಡಿದರು. ಅಕ್ಕರೈ ಶುಭಲಕ್ಷ್ಮಿ ಅವರ ವಯಲಿನ್ ರಾಗಾನುಸಂಧಾನ, ಘಟಂನಲ್ಲಿ ಚಂದ್ರಶೇಖರ ವರ್ಮಾ ಹಾಗೂ ಮೃದಂಗದಲ್ಲಿ ಜಯಚಂದ್ರರಾವ್ ಅವರ ಲಯವಿನ್ಯಾಸ ಮನಸೋಲಿಸಿತು.
ನಂತರ ‘ಲತಾಂಗಿ’ ರಾಗದಲ್ಲಿ ‘ಪಟ್ಣಂ ಸುಬ್ರಹ್ಮಣ್ಯ ಅಯ್ಯರ್’ ಅವರ ಕೃತಿ ‘ಅಪರಾಧಮುಲನ್ನಿಯು’ ಹಾಡಿದ ಅವರು, ಕಲ್ಪನಾ ಸ್ವರ ಹಾಕಿದ ಅವರು ಸಹವಾದ್ಯಕಾರರ ಪ್ರತಿಭೆಗೂ ಸಾಣೆ ಹಿಡಿದರು. ‘ಗಾ...ನೊಂತೊಂತ ಗಾ..’ ಎಂದು ಅಷ್ಟದಿಕ್ಕುಗಳಿಂದ ರಾಗವನು ಎಳೆದು ತಂದು ಅಂಗಳದಲ್ಲಿ ನಲಿಯಲು ಬಿಟ್ಟರು. ಈ ವೇಳೆ ಅಕ್ಕರೈ ಶುಭಲಕ್ಷ್ಮಿ ಅವರು ವಯಲಿನ್‌ನ ‘ಡಬಲ್ ಸ್ಟ್ರೋಕ್’ ನಡೆಯಲ್ಲಿ ಹೊಮ್ಮಿಸಿದ ನಾದವು ದಿವ್ಯಾನುಭೂತಿ ನೀಡಿತು. ಸವಾಲಿನ ವಿಸ್ತರಣೆಯಲಿ ನಡೆಗಳನು ಅನುಸರಿಸಿದ ತಾಳವಾದ್ಯಕಾರರು ಸಹೃದಯರನು ತುದಿಗಾಲಿನಲ್ಲಿ ನಿಲ್ಲಿಸಿದರು.
ಮುತ್ತುಸ್ವಾಮಿ ದೀಕ್ಷಿತರ ‘ಶಂಕರಾಭರಣಂ’ ರಾಗದ ಕೃತಿ ‘ಸದಾಶಿವಂ ಉಪಾಸ್ಮಹೇ’, ‘ಹಂಸಧ್ವನಿ’ ರಾಗದ ‘ವಾತಾಪಿ ಗಣಪತಿಂ’ ಹಾಡಿದ ಅವರು, ಇದರ ಮೂಲ ವಿನ್ಯಾಸವನ್ನು ವಿವರಿಸಿದರು. ನಂತರ ಸ್ವಾತಿ ತಿರುನಾಳರ ‘ಬೆಹಾಗ್’ ರಾಗದ ಕೃತಿ ‘ಸಾರಮೈನ’, ತುಳಸೀದಾಸರ ‘ಕಹಾ ಕೆ ಪತೀಕ್ ಕಹಾ...’ ಭಜನೆಯನ್ನು ‘ಸೆಂಜುರುಟ್ಟಿ’ ರಾಗದಲ್ಲಿ ಪ್ರಸ್ತುತ ಪಡಿಸಿದರು. ನಂತರ ಮುತ್ತುಸ್ವಾಮಿ ದೀಕ್ಷಿತರ ‘ನೊಟ್ಟುಸ್ವರ’ ಗಾನ ಗೋಷ್ಠಿಯಲ್ಲಿ ಮೀಯಿಸಿದರು.
ಜುಗಲ್‌ಬಂದಿ ಇಂದು: ಆ.29ರ ಸಂಜೆ 6.45ಕ್ಕೆ ವಿದ್ವಾನ್ ನೆಮ್ಮಾರ ಕಣ್ಣನ್– ಆನಂದ ಬ್ರಹ್ಮ, ವಿದುಷಿ ಅಕ್ಕರೈ ಶುಭಲಕ್ಷ್ಮಿ– ಸ್ವರ್ಣಲತಾ ಅವರ ನಾದಸ್ವರ– ವಯಲಿನ್ ಜುಗಲ್‌ಬಂದಿ ನಡೆಯಲಿದೆ. ಮೃದಂಗದಲ್ಲಿ ಜಯಚಂದ್ರರಾವ್, ಘಟಂನಲ್ಲಿ ಚಂದ್ರಶೇಖರ ಶರ್ಮಾ ಸಾಥ್ ನೀಡುವರು. ಇದಕ್ಕೂ ಮೊದಲು ಸಂಜೆ 5.30ರಿಂದ 6.30ರ ವರೆಗೆ ಚಂದ್ರಶೇಖರ ಆಚಾರ್ ಅವರ ರಂಗಗೀತೆಗಳ ಪ್ರಸ್ತುತಿಯಿದೆ.
‘ಸಂಗೀತ ಎಲ್ಲರ ತಲುಪಲಿ’
ಉತ್ಸವ ಉದ್ಘಾಟಿಸಿದ ಉದ್ಯಮಿ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ‘ಕಲೆ ಸಂಗೀತ ಅಭಿರುಚಿ ಇಲ್ಲದೇ ಜೀವನ ಪೂರ್ಣವಾಗದು. ಸಂಗೀತವು ಹೃದಯ ಆತ್ಮವನ್ನು ಸಂತುಷ್ಟಗೊಳಿಸುತ್ತದೆ. ಸಂಗೀತವು ಎಲ್ಲ ಜನ ಸಮುದಾಯಗಳಿಗೂ ತಲುಪಬೇಕು ಹಾಗೂ ಒಳಗೊಳ್ಳಬೇಕು. ಆಗ ಮಾತ್ರ ಸಂಗೀತವೂ ಬೆಳೆಯಲು ಸಾಧ್ಯ’ ಎಂದು ಹೇಳಿದರು.
‘ಸಂಗೀತ ಕ್ಷೇತ್ರದಲ್ಲಿನ ಶ್ರೇಣೀಕರಣ ಶೋಷಣೆ ಒಳಗೊಳ್ಳುವಿಕೆ ಸೇರಿದಂತೆ ಎಲ್ಲದರ ಬಗ್ಗೆಯೂ ಧೈರ್ಯವಾಗಿ ಟಿ.ಎಂ.ಕೃಷ್ಣ ಮಾತನಾಡುತ್ತಾರೆ. ಪಾರಂಪರಿಕ ಸಂಗೀತೋತ್ಸವ 6 ದಶಕದಿಂದ ಎಲ್ಲರನ್ನು ಬೆಸೆಯುತ್ತಿರುವುದು ಸುಲಭದ ಮಾತಲ್ಲ’ ಎಂದರು.
ಟಿ.ಎಂ.ಕೃಷ್ಣ ಮಾತನಾಡಿ ‘30 ವರ್ಷದಿಂದಲೂ ಈ 8ನೇ ಕ್ರಾಸ್‌ಗೆ ಬರುತ್ತಿರುವೆ. ಇಲ್ಲಿ ಸಿಗುವ ಆನಂದ ಅನುಭವ ಬೇರೆಲ್ಲೂ ಸಿಕ್ಕಿಲ್ಲ. ವಾತಾವರಣವೇ ಆಪ್ತತೆಯಿಂದ ಕೂಡಿದೆ. ಸಂಗೀತ ಕಛೇರಿಗಳು ಬೀದಿಯಲ್ಲಿ ನಡೆಯಬೇಕು. ಆಗ ಮಾತ್ರವೇ ಎಲ್ಲರದ್ದಾಗಲು ಸಾಧ್ಯ’ ಎಂದು ಪ್ರತಿಪಾದಿಸಿದರು.
ಟ್ರಸ್ಟ್ ಅಧ್ಯಕ್ಷ ಜಗನ್ನಾಥ ಶೆಣೈ ಮಾತನಾಡಿ ‘ಎಲ್ಲ ಶ್ರೇಷ್ಠ ಕಲಾವಿದರು ಕಛೇರಿ ನೀಡಲು ಪ್ರೀತಿ ಹಾಗೂ ಭಯದಿಂದಲೇ ಇಲ್ಲಿಗೆ ಬರುತ್ತಾರೆ. ಪ್ರೀತಿ ಇದ್ದಲ್ಲಿ ಭಯವೂ ಇರುತ್ತದೆ. ಸಂಗೀತವನ್ನು ಕೇಳುತ್ತಿದ್ದಾಗ ಮಾತ್ರವೇ ಅದರ ರುಚಿ ಹತ್ತುತ್ತದೆ. ಯುವ ಪೀಳಿಗೆ ಈ ಪರಂಪರೆಯನ್ನು ಉಳಿಸಿ ಬೆಳೆಸಬೇಕಿದೆ’ ಎಂದರು. ಕಾರ್ಯದರ್ಶಿ ಸಿ.ಆರ್.ಹಿಮಾಂಶು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.