ADVERTISEMENT

ಹುಣಸೂರು | 'ತಂಬಾಕು ಬೆಳೆಗಾರರ ನಿಯೋಗ ದೆಹಲಿಗೆ'

ತಂಬಾಕು ದರ ಚೇತರಿಕೆಗೆ ಒತ್ತು: ಸಂಸದ ಯದುವೀರ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 3:12 IST
Last Updated 15 ಡಿಸೆಂಬರ್ 2025, 3:12 IST
ಹುಣಸೂರು ತಾಲ್ಲೂಕಿನ ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಮಿತಿ ಸದಸ್ಯರು ಮೈಸೂರಿನಲ್ಲಿ ಭಾನುವಾರ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು
ಹುಣಸೂರು ತಾಲ್ಲೂಕಿನ ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಮಿತಿ ಸದಸ್ಯರು ಮೈಸೂರಿನಲ್ಲಿ ಭಾನುವಾರ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು   

ಹುಣಸೂರು: ತಂಬಾಕಿಗೆ ಸೂಕ್ತ ದರ ಸಿಗದೆ ರೈತರು ಹತಾಶೆಯಾಗಿದ್ದು, ಸೂಕ್ತ ದರ ಕೊಡಿಸಲು ರಾಜ್ಯ ತಂಬಾಕು ಬೆಳೆಗಾರ ನಿಯೋಗದೊಂದಿಗೆ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಲು ಬದ್ಧ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಭರವಸೆ ನೀಡಿದ್ದಾರೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್‌ ತಿಳಿಸಿದ್ದಾರೆ.

ಮೈಸೂರಿನಲ್ಲಿ ಭಾನುವಾರ ತಮ್ಮನ್ನು ಭೇಟಿಯಾದ ತಂಬಾಕು ಬೆಳೆಗಾರರ ನಿಯೋಗದ ಮನವಿ ಸ್ವೀಕರಿಸಿ ಅವರು ಪ್ರತಿಕ್ರಿಯಿಸಿದರು. ನಿಯೋಗ ಕೊಂಡೊಯ್ದು ಡಿ. 25 ರೊಳಗಾಗಿ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ ರೈತರಿಗೆ ತಂಬಾಕು ಹರಾಜು ಮಂಡಳಿಯಲ್ಲಿ ಸಿಗುತ್ತಿರುವ ದರ ಕುರಿತ ವಿವರಿಸಿ ವೈಜ್ಞಾನಿಕ ದರ ಸಿಗುವಂತೆ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಧರಣಿ: ಸಂಸದರು ಭರವಸೆ ನೀಡಿದ್ದು, ವೈಜ್ಞಾನಿಕ ದರ ಸಿಗುವವರೆಗೂ ಧರಣಿ ನಡೆಯಲಿದೆ ಎಂದರು. ರಾಜ್ಯದಲ್ಲಿ 80 ಮಿಲಿಯನ್‌ ಕೆ.ಜಿ. ತಂಬಾಕು ಬೆಳೆದಿದ್ದು, ಈ ಪೈಕಿ 20 ರಿಂದ 22 ಮಿಲಿಯನ್‌ ಕೆ.ಜಿ. ತಂಬಾಕು ಮಾರಾಟವಾಗಿದೆ. ಉಳಿದಂತೆ 50 ರಿಂದ 60 ಮಿಲಿಯನ್‌ ಕೆ.ಜಿ. ತಂಬಾಕು ರೈತರ ಬಳಿ ಇದ್ದು, ಸೂಕ್ತ ದರ ಸಿಗಬೇಕು ಎಂದರು.

ADVERTISEMENT

ನೆರೆಯ ರಾಜ್ಯ ಆಂದ್ರ ಪ್ರದೇಶದಲ್ಲಿ ಬೆಳೆದ ತಂಬಾಕಿಗೆ ಪ್ರತಿ ಕೆ.ಜಿ.ಗೆ ₹ 420 ಸಿಕ್ಕಿದ್ದು, ರಾಜ್ಯದಲ್ಲಿ ಆಂದ್ರಪ್ರದೇಶಕ್ಕಿಂತಲೂ ಉತ್ತಮ ಗುಣಮಟ್ಟದ ತಂಬಾಕಿಗೆ ಏಕೆ ₹ 300 ರಿಂದ ₹ 320 ಮಾತ್ರ ನೀಡುತ್ತಿದ್ದಾರೆ? ರಾಜ್ಯದ ತಂಬಾಕು ಸಿಗರೇಟ್‌ ಕಂಪನಿಗಳಿಗೆ ಬೇಡಿಕೆ ಇದ್ದರೂ ಮಾರುಕಟ್ಟೆ ಮೇಲೆ ಕಂಪನಿಗಳ ವ್ಯವಸ್ಥಿತಿ ಹಿಡಿತದಿಂದಾಗಿ ದರ ವೈಜ್ಞಾನಿಕವಾಗಿ ಸಿಗುತ್ತಿಲ್ಲ ಎಂದು ತಂಬಾಕು ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋದೂರು ಶಿವಣ್ಣ ಹೇಳಿದರು.

ಸರಾಸರಿ: ತಂಬಾಕು ಬೆಳೆಗಾರರಿಗೆ ಸರಾಸರಿ ₹ 300 ಪ್ರತಿ ಕೆಜಿಗೆ ಸಿಕ್ಕಲ್ಲಿ ಉತ್ಪಾದನ ವೆಚ್ಚ ಸರಿದೂಗಿಸಲು ಸಾಧ್ಯ. ಉತ್ಪಾದನ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮಾರುಕಟ್ಟೆ ದರ ಕುಸಿತದಿಂದ ರೈತರಿಗೆ ಲಾಭವಿಲ್ಲದ ಆರ್ಥಿಕ ಬೆಳೆ ಆಗುತ್ತಿದ್ದು, ಈ ಸಾಲಿನಲ್ಲಿ ಪ್ರಾಕೃತಿಕವಾಗಿ ಹಲವು ಸಮಸ್ಯೆ ಎದುರಿಸಿ ತಂಬಾಕು ಬೆಳೆದಿದ್ದು ರೈತ ಉತ್ತಮ ದರ ನಿರೀಕ್ಷಿಸುವುದು ತಪ್ಪೆ ಎಂದು ರೈತ ಮುಖಂಡ ಉಂಡವಾಡಿ ಚಂದ್ರೇಗೌಡ ಪ್ರಶ್ನಿಸಿದ್ದರು.

ಸಂಸದರ ಭೇಟಿ ಸಮಯದಲ್ಲಿ ಕಾಫ್‌ ಸಮಿತಿ ಸದಸ್ಯ ನಿಲುವಾಗಿಲು ಪ್ರಭಾಕರ್‌, ಧನಂಜಯ, ಅಗ್ರಹಾರ ರಾಮೇಗೌಡ, ಅಶೋಕ್‌, ಬೀಜಗನಹಳ್ಳಿ ನಾಗರಾಜಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.