ADVERTISEMENT

ಪಿರಿಯಾಪಟ್ಟಣ: ತಂಬಾಕು ದರ ಕುಸಿತ; ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 2:58 IST
Last Updated 20 ಫೆಬ್ರುವರಿ 2026, 2:58 IST
ಪಿರಿಯಾಪಟ್ಟಣ ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಗುರುವಾರ ತಂಬಾಕು ಖರೀದಿದಾರ ಕಂಪನಿಗಳು ಬೆಲೆಕುಸಿತ ಮಾಡಿದ್ದರಿಂದ ಆಕ್ರೋಶಗೊಂಡ ರೈತರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಸ್ಥಳಕ್ಕೆ ಸಚಿವ ಕೆ. ವೆಂಕಟೇಶ್ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತನಾಡಿದರು
ಪಿರಿಯಾಪಟ್ಟಣ ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಗುರುವಾರ ತಂಬಾಕು ಖರೀದಿದಾರ ಕಂಪನಿಗಳು ಬೆಲೆಕುಸಿತ ಮಾಡಿದ್ದರಿಂದ ಆಕ್ರೋಶಗೊಂಡ ರೈತರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಸ್ಥಳಕ್ಕೆ ಸಚಿವ ಕೆ. ವೆಂಕಟೇಶ್ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತನಾಡಿದರು   

ಪಿರಿಯಾಪಟ್ಟಣ: ತಂಬಾಕು ದರ ಕುಸಿತದಿಂದ ಆಕ್ರೋಶಗೊಂಡ ರೈತರು ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಗುರುವಾರ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

‘ಕೆಲವು ದಿನಗಳಿಂದ ದರ ಕುಸಿತದಿಂದ ಆತಂಕಗೊಂಡ ರೈತರು ಉತ್ತಮ ಬೆಲೆ ನೀಡುವವರೆಗೂ ಹರಾಜು ಪ್ರಕ್ರಿಯೆ ನಡೆಸಲು ಬಿಡುವುದಿಲ್ಲ’ ಎಂದು ಪಟ್ಟುಹಿಡಿದರು.

ಸಚಿವ ಕೆ. ವೆಂಕಟೇಶ್ ಭೇಟಿ: ಹರಾಜು ಮಾರುಕಟ್ಟೆಗೆ ಭೇಟಿ ನೀಡಿದ ಸಚಿವ ಕೆ.ವೆಂಕಟೇಶ್ ರೈತರ ಸಮಸ್ಯೆ ಆಲಿಸಿ ಮಾತನಾಡಿ, ‘ರೈತರಿಗೆ ಅನ್ಯಾಯವಾದರೆ ನಾನು ಸಹಿಸಲ್ಲ, ದರ ಕುಸಿತಗೊಳ್ಳುತ್ತಿರುವ ಬಗ್ಗೆ ಖರೀದಿದಾರ ಕಂಪನಿಗಳು ಮತ್ತು ತಂಬಾಕು ಮಂಡಳಿ ನಿರ್ದೇಶಕರ ಜೊತೆ ಚರ್ಚಿಸಿದ್ದು, ಆಂಧ್ರದಲ್ಲಿ ಒಂದು ಕೆ.ಜಿ.ಗೆ ಸರಾಸರಿ ₹ 390 ಸಿಗುತ್ತಿದೆ. ಆದರೆ ಕರ್ನಾಟಕದಲ್ಲಿ ₹ 30 ಕಡಿಮೆ ನೀಡಲಾಗುತ್ತಿದೆ. ಈ ತಾರತಮ್ಯದಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ನಿರ್ದೇಶಕರು ಮತ್ತು ಖರೀದಿದಾರ ಕಂಪನಿಗಳ ಮುಖ್ಯಸ್ಥರನ್ನು ಕರೆಸಿ ಚರ್ಚಿಸುವ ಜವಾಬ್ದಾರಿಯನ್ನು ವಲಯ ವ್ಯವಸ್ಥಾಪಕ ಮಾರಣ್ಣ ಅವರು ವಹಿಸಿಕೊಳ್ಳುವಂತೆ ಸೂಚಿಸಿದರು.

‘ನೀವು ರೈತರಿಗೆ ಬೆಂಬಲ ನೀಡಬೇಕು, ಕಂಪನಿಗೆ ಬೇಕಾಗಿರುವ ಬೆಲೆಗೆ ತಂಬಾಕನ್ನು ಅವರು ಖರೀದಿಸಿಕೊಂಡರೆ ರೈತರಿಗೆ ಅನ್ಯಾಯವಾಗಲಿದೆ’ ಎಂದು ಸಚಿವರು ಎಚ್ಚರಿಸಿದರು.

‘ತಂಬಾಕು ಖರೀದಿದಾರ ಕಂಪನಿಗಳು ಹಸಿರು ಮತ್ತು ತರಗು ತಂಬಾಕನ್ನು ರೈತರಿಂದ ಖರೀದಿಸುತ್ತಿಲ್ಲ, ರೈತರಿಗೆ ಉತ್ತಮ ಸರಾಸರಿ ಬೆಲೆ ದೊರಕುತ್ತಿಲ್ಲ’ ಎಂದು ಕೆಲವು ರೈತರು ಅಳಲು ತೋಡಿಕೊಂಡರು

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಮಾತನಾಡಿ, ‘ರೈತರು 2 ದಿನಗಳಿಂದ ತಂಬಾಕು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಪ್ರತಿಭಟಿಸುತ್ತಿದ್ದಾರೆ. ಪಕ್ಕದ ಆಂಧ್ರ ಪ್ರದೇಶದಲ್ಲಿ 1 ಕೆ.ಜಿ. ತಂಬಾಕು ₹ 472ಗಳಿಗೆ ಹರಾಜಿಗಿದ್ದು, ಕರ್ನಾಟಕದಲ್ಲಿ ಅತ್ಯುತ್ತಮ ದರ್ಜೆಯ ತಂಬಾಕನ್ನು ಹೆಚ್ಚು ಬೆಳೆಯಲಾಗುತ್ತಿದ್ದರೂ ಇಲ್ಲಿನ ಬೆಲೆ ₹260ಕ್ಕೆ ಮಾರಾಟವಾಗುತ್ತಿದೆ. ಕೆಲ ಕಂಪನಿಗಳು ಕೇಂದ್ರ ಸರ್ಕಾರವನ್ನೇ ಕಡೆಗಣಿಸಿರುವುದು ₹ 160ಗಳ ವ್ಯತ್ಯಾಸ‌ಕ್ಕೆ ಕಾರಣವಾಗಿದೆ’ ಎಂದು ಆರೋಪಿಸಿದರು.

‘ಶೇ18ರಷ್ಟು ಅಬಕಾರಿ ಸುಂಕವನ್ನು ಹೊಸದಾಗಿ ಹೊಗೆಸೊಪ್ಪಿನ ಮೇಲೆ ವಿಧಿಸಿ ಫೆ.1ರಿಂದ ಜಾರಿಗೆ ಬರುತ್ತದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದ ಯದುವೀರ್ ಅವರು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಅಬಕಾರಿ ಸುಂಕ ಹಿಂಪಡೆಯಲು ಮನವಿ ಮಾಡಿದೆವು ಎಂದು ಪತ್ರಿಕೆಗಳಲ್ಲಿ ಹೇಳಿಕೆ ಕೊಟ್ಟರು. ಆದರೆ ಜಾಸ್ತಿ ಮಾಡಿರುವ ತೆರಿಗೆಯನ್ನು ತಾತ್ಕಾಲಿಕವಾಗಿ ಮುಂದೂಡಿರುವುದನ್ನು ನಾವೇ ಮಾಡಿಸಿದ್ದು ಎಂದು ಬಡಾಯಿ ಕೊಚ್ಚಿಕೊಂಡಿದ್ದಾರೆ’ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಮುಖಂಡ ಆಯ್ತನಹಳ್ಳಿ ಮಂಜುನಾಥ್, ತಂಬಾಕು ಮಂಡಳಿ ವಲಯ ವ್ಯವಸ್ಥಾಪಕ ಮಾರಣ್ಣ, ಹರಾಜು ಅಧೀಕ್ಷಕ ಬ್ರಿಜ್ ಭೂಷಣ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.