ADVERTISEMENT

ಔಷಧ ರಹಸ್ಯ ಬಾಯಿಬಿಡಿಸಲು ನಾಟಿ ವೈದ್ಯನಿಗೆ ಚಿತ್ರಹಿಂಸೆ, ತುಂಡುತುಂಡು ಮಾಡಿ ಕೊಲೆ

ಸಿನಿಮೀಯ ಶೈಲಿಯಲ್ಲಿ ಪತ್ತೆಯಾಯ್ತು ಭೀಕರ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 14 ಮೇ 2022, 3:00 IST
Last Updated 14 ಮೇ 2022, 3:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಇಲ್ಲಿನ ಜನತಾನಗರ ಸಮೀಪದ ವಸಂತನಗರದಲ್ಲಿ 3 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಜನಪ್ರಿಯ ನಾಟಿವೈದ್ಯ ಶಬ್ಬಾ ಷರೀಫ್ ಬರ್ಬರವಾಗಿ ಹತ್ಯೆಯಾಗಿದ್ದು, ಮೂವರು ಆರೋಪಿಗಳನ್ನು ಕೇರಳದ ಮಲಪ್ಪುರಂ ಜಿಲ್ಲೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.

‘ವಸಂತನಗರದಲ್ಲಿ ಮೂಲವ್ಯಾಧಿ ಕಾಯಿಲೆಗೆ ನಾಟಿ ಔಷಧ ನೀಡುತ್ತಿದ್ದ ಶಬ್ಬಾ ಷರೀಫ್ ಅವರ ಬಳಿ ಕೇರಳದಿಂದ ಹೆಚ್ಚಿನ ಮಂದಿ ಬಂದು ಔಷಧ ಪಡೆದು ಗುಣಮುಖರಾಗುತ್ತಿದ್ದರು. ಇದು ಕೇರಳದಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ಅವರಿಗೆ ತಂದುಕೊಟ್ಟಿತ್ತು. ಈ ಔಷಧದ ರಹಸ್ಯ ತಿಳಿದು ದುಬೈ ಸೇರಿದಂತೆ ವಿದೇಶದಲ್ಲಿ ಈ ಔಷಧವನ್ನು ಮಾರಾಟ ಮಾಡಿ ಹಣ ಸಂಪಾದಿಸುವ ಉದ್ದೇಶದಿಂದ ಇವರ ಕೊಲೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ವಸಂತನಗರದ ಷರೀಫ್ ಅವರ ನಿವಾಸಕ್ಕೆ 2019ರ ಆಗಸ್ಟ್‌ ತಿಂಗಳಿನಲ್ಲಿ ಬಂದ ಇಬ್ಬರು ಔಷಧ ನೀಡಬೇಕೆಂದು ಹೇಳಿ ಕರೆದುಕೊಂಡು ಹೊರಟರು. ನಂತರ, ಷರೀಫ್ ಅವರ ಕುಟುಂಬದವರು ನಾಪತ್ತೆ ಪ್ರಕರಣವನ್ನು ಸರಸ್ವತಿಪುರಂ ಠಾಣೆಯಲ್ಲಿ ದಾಖಲಿಸಿದ್ದರು. ಮೊಬೈಲ್‌ ನೆಟ್‌ವರ್ಕ್‌ನ ಬೆನ್ನತ್ತಿದ್ದ ಪೊಲೀಸರು ಕೇರಳದವರೆಗೂ ಹೋಗಿ ಹುಡುಕಿ ವಾಪಸ್ ಬಂದಿದ್ದರು.

ADVERTISEMENT

ಸಿನಿಮೀಯ ಶೈಲಿಯಲ್ಲಿ ಕೊಲೆ ಪತ್ತೆ!

‘ಕೇರಳದ ಉದ್ಯಮಿ ಶಬೀನ್‌ ಆಶ್ರಫ್ ಎಂಬಾತನ ಮನೆಯಲ್ಲಿ ಏಪ್ರಿಲ್ 24ರಂದು ₹ 7 ಲಕ್ಷ ದರೋಡೆ ನಡೆದಿತ್ತು. ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆಶ್ರಫ್ ಸ್ನೇಹಿತ ತಂಗಳಕಟ್ಟು ಎಂಬಾತನನ್ನು ಬಂಧಿಸಿದರು. ಇದರಿಂದ ಕೋಪಗೊಂಡ ಈತನ ಮೂವರು ಸ್ನೇಹಿತರು ಕೇರಳ ರಾಜ್ಯದ ಸಚಿವಾಲಯದ ಮುಂದೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಾಹುತಿಗೆ ಯತ್ನಿಸಿದರು. ಪೊಲೀಸರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಈ ವೇಳೆ ಅವರು ಶಬೀನ್ ಆಶ್ರಫ್ ಮೈಸೂರಿನಿಂದ ನಾಟಿವೈದ್ಯ ಷರೀಫ್ ಅವರನ್ನು ಅಪಹರಣ ಮಾಡಿ ಒಂದು ವರ್ಷಗಳ ಕಾಲ ತನ್ನ ಮನೆಯಲ್ಲಿ ಚಿತ್ರಹಿಂಸೆ ನೀಡಿ, ಕೊಲೆ ಮಾಡಿ, ಮೃತದೇಹವನ್ನು ತುಂಡುತುಂಡು ಮಾಡಿ, ಅವುಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ, ಚಳಿಯಾರ್ ನದಿಯಲ್ಲಿ ಎಸೆದಿದ್ದ. ಇದಕ್ಕಾಗಿ ನಮಗೆ ಕೊಡಬೇಕಿದ್ದ ಹಣವನ್ನು ನೀಡಿರಲಿಲ್ಲ. ಹೀಗಾಗಿ, ದರೋಡೆ ಮಾಡಿರುವುದಾಗಿ ಹೇಳಿ, ಚಿತ್ರಹಿಂಸೆ ನೀಡಿದ ವಿಡಿಯೊಗಳಿದ್ದ ಪೆನ್‌ಡ್ರೈವ್‌ನ್ನು ಪೊಲೀಸರಿಗೆ ನೀಡಿದರು.

ಸದ್ಯ, ಷರೀಫ್ ಅವರ ಪತ್ನಿ ಹಾಗೂ ಮಕ್ಕಳು ವಿಡಿಯೊ ನೋಡಿ ಅದರಲ್ಲಿರುವುದು ಷರೀಫ್ ಎಂಬುದಾಗಿ ಗುರುತಿಸಿದ್ದಾರೆ. ಮಂಗಳವಾರ ಪ್ರಕರಣ ದಾಖಲಾಗಿದ್ದು, ಗುರುವಾರ ಪ್ರಮುಖ ಆರೋಪಿ ಶಬೀನ್ ಆಶ್ರಫ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ’ ಎಂದು ಮೈಸೂರು ಪೊಲೀಸರು ತಿಳಿಸಿದ್ದಾರೆ.

‘ಸರಸ್ವತಿಪುರಂ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಷರೀಫ್ ಅವರ ಕೊಲೆ ಕೇರಳದಲ್ಲಿ ನಡೆದಿರುವುದು ಗೊತ್ತಾಗಿದೆ. ಈ ಸಂಬಂಧ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದು, ನಮ್ಮ ಪೊಲೀಸರೂ ಅವರಿಗೆ ಸಾಥ್ ನೀಡಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.