ADVERTISEMENT

ಚಾಮರಾಜನಗರ, ಎಚ್‌.ಡಿ.ಕೋಟೆ: ಪ್ರವಾಸಿ ತಾಣ ತೆರೆಯಲು ಅನುಮತಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 17:45 IST
Last Updated 24 ಜುಲೈ 2020, 17:45 IST

ಮೈಸೂರು/ ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಹಾಗೂ ಮೈಸೂರಿನ ಎಸ್‌.ಡಿ.ಕೋಟೆ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳು ಹಾಗೂ ಆ ಪ್ರದೇಶದ ವ್ಯಾಪ್ತಿಯಲ್ಲಿರುವ ಹೋಟೆಲ್‌, ರೆಸಾರ್ಟ್‌, ಹೋಂ ಸ್ಟೇಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಹೊರಡಿಸಲಾಗಿದ್ದ ಆದೇಶವನ್ನು ಶುಕ್ರವಾರ ವಾಪಸ್‌ ಪಡೆಯಲಾಗಿದೆ.

ಹೊಸ ಆದೇಶದಿಂದಾಗಿ ಶನಿವಾರದಿಂದ ಈ ಭಾಗದ ಪ್ರವಾಸಿ ಕೇಂದ್ರಗಳು ಪ್ರವಾಸಿಗರ ಭೇಟಿಗೆ ಮುಕ್ತಗೊಳ್ಳಲಿವೆ. ಬಂಡೀಪುರ, ಕೆ.ಗುಡಿ ಸಫಾರಿಯನ್ನು ಮತ್ತೆ ಆರಂಭಿಸುವುದಕ್ಕೆ ಅನುಮತಿ ಸಿಕ್ಕಿದಂತಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದುದರಿಂದ ಹೊರ ಜಿಲ್ಲೆಗಳಿಂದ ಜನರು ಜಿಲ್ಲೆಗೆ ಬರುವುದನ್ನು ತಡೆಯುವ ಉದ್ದೇಶದಿಂದ ಪ್ರವಾಸಿ ಕೇಂದ್ರಗಳು, ರೆಸಾರ್ಟ್‌ ಹಾಗೂ ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಜುಲೈ 2 ರಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊರಡಿಸಿದ್ದರು.

ADVERTISEMENT

‘ಕೋವಿಡ್‌–19 ತಡೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಜಿಲ್ಲೆಯು ಆರ್ಥಿಕ ಪ್ರಗತಿ ಸಾಧಿಸುವ ಸಲುವಾಗಿ ಈ ಹಿಂದೆ ಹೊರಡಿಸಲಾಗಿದ್ದ ಆದೇಶವನ್ನು ವಾಪಸ್‌ ಪಡೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ಅವರು ಆದೇಶದಲ್ಲಿ ಹೇಳಿದ್ದಾರೆ.

ಎಚ್‌.ಡಿ.ಕೋಟೆಯಲ್ಲಿ ನಿರ್ಬಂಧ ತೆರವು: ಮೈಸೂರು ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಎಚ್.ಡಿ.ಕೋಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲ ಹೋಟೆಲ್‌, ಹೋಂ ಸ್ಟೇ, ರೆಸಾರ್ಟ್‌, ವಸತಿಗೃಹಗಳಲ್ಲಿ ಪ್ರವಾಸಿಗರಿಗೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.