ADVERTISEMENT

ಮೈಸೂರು ಅರಮನೆಗೆ ಬೆರಳೆಣಿಕೆಯಷ್ಟು ಪ್ರವಾಸಿಗರು; ಗರಿಗೆದರದ ಪ್ರವಾಸೋದ್ಯಮ

ಕೆ.ಎಸ್.ಗಿರೀಶ್
Published 12 ಜೂನ್ 2020, 8:49 IST
Last Updated 12 ಜೂನ್ 2020, 8:49 IST
ಮೈಸೂರು ಅರಮನೆ ಗುರುವಾರ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿತ್ತು. ಚಿತ್ರ: ಬಿ.ಆರ್.ಸವಿತಾ
ಮೈಸೂರು ಅರಮನೆ ಗುರುವಾರ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿತ್ತು. ಚಿತ್ರ: ಬಿ.ಆರ್.ಸವಿತಾ   

ಮೈಸೂರು: ಲಾಕ್‌ಡೌನ್‌ ನಂತರ ವೀಕ್ಷಣೆಗೆ ಮುಕ್ತವಾದ ಸಾಂಸ್ಕೃತಿಕ ನಗರಿಯ ಪ್ರವಾಸಿ ಸ್ಥಳಗಳು ಭಣಗುಡುತ್ತಿದ್ದು, ಪ್ರವಾಸಿಗರ ಕೊರತೆಯನ್ನು ಎದುರಿಸುತ್ತಿವೆ.

ಇಲ್ಲಿನ ಪ್ರಮುಖ ಪ್ರವಾಸಿ ಸ್ಥಳಗಳಾದ ಅರಮನೆ ಮತ್ತು ಚಾಮರಾಜೇಂದ್ರ ಮೃಗಾಲಯಗಳಿಗೆ ಕಳೆದ 4 ದಿನಗಳಲ್ಲಿ ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರವೇ ಭೇಟಿ ಕೊಟ್ಟಿದ್ದಾರೆ. ಎರಡೂ ಕಡೆ ಎಲ್ಲ ರೀತಿಯ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದ್ದರೂ ಪ್ರವಾಸಿಗರು ಭೇಟಿ ನೀಡಲು ಹಿಂದೇಟು ಹಾಕಿದ್ದಾರೆ.

ಮೈಸೂರು ಅರಮನೆಗೆ ಜ.8ರಂದು 58, 9ರಂದು 174, 10ರಂದು 140 ಹಾಗೂ 11ರಂದು 90 ಮಂದಿಯಷ್ಟೇ ಪ್ರವಾಸಿಗರು ಭೇಟಿ ನೀಡಿದ್ದಾರೆ.

ADVERTISEMENT

ಚಾಮರಾಜೇಂದ್ರ ಮೃಗಾಲಯಕ್ಕೆ ಜ.8ರಂದು 250, 9ರಂದು 117, 10ರಂದು 350 ಹಾಗೂ 11ರಂದು 230 ಮಂದಿಯಷ್ಟೇ ಪ್ರವಾಸಿಗರು ಬಂದು ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಿದ್ದಾರೆ.

ಮೃಗಾಲಯದ ನಿರ್ವಹಣೆ, ಸಿಬ್ಬಂದಿಯ ವೇತನ ಮತ್ತು ಪ್ರಾಣಿಗಳ ಆಹಾರ ಸೇರಿ ತಿಂಗಳಿಗೆ ₹ 2 ಕೋಟಿಯಷ್ಟು ಹಣ ಬೇಕಿದೆ. ಈ ಹಿಂದೆ ಪ್ರತಿನಿತ್ಯ ಸರಾಸರಿ 4 ಸಾವಿರಕ್ಕೂ ಅಧಿಕ ಪ್ರವಾಸಿಗರು ಬರುತ್ತಿದ್ದರು. ಇದರಿಂದ ಬರುತ್ತಿದ್ದ ಆದಾಯವೇ ನಿರ್ವಹಣೆಯ ಪ್ರಮುಖ ಮೂಲವಾಗಿತ್ತು.

ಏಕೆ ಹೀಗೆ?

ಶಾಲಾ– ಕಾಲೇಜುಗಳಿಗೆ ರಜೆ ಮುಂದುವರಿದಿದ್ದರೂ ಜನರು ಪ್ರವಾಸ ಮಾಡಲು ನಿರಾಸಕ್ತಿ ತೋರುತ್ತಿದ್ದಾರೆ. ಕೊರೊನಾ ಸೋಂಕಿನ ಭಯ ಒಂದೆಡೆಯಾದರೆ, ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಮತ್ತೊಂದು ಪ್ರಮುಖ ಕಾರಣ ಎನಿಸಿದೆ.

ಬಹಳಷ್ಟು ಕೈಗಾರಿಕೆಗಳು, ಕಂಪನಿಗಳು ಇನ್ನೂ ಆರಂಭವೇ ಆಗಿಲ್ಲ. ವೇತನ ಕಡಿತ, ಉದ್ಯೋಗ ಕಡಿತ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಸಾಮಾನ್ಯ ಎನಿಸಿವೆ. ಕೆಲವು ಕಂಪನಿಗಳು ಕೇವಲ 15 ದಿನಗಳು ಮಾತ್ರ ವೇತನ ಸಹಿತ ಕೆಲಸ ನೀಡುತ್ತಿವೆ. ಈ ಎಲ್ಲ ಕಾರಣಗಳಿಂದ ಜನರು ಪ್ರವಾಸ ಒಳಗೊಂಡಂತೆ ಇತರ ಮನರಂಜನಾ ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ಮುಂದೂಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.